Site icon Vistara News

Kannada Flag | 150 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ರಾರಾಜಿಸಿದ ಕನ್ನಡ ಬಾವುಟ; ಮಗುವಿನ ಕಾಲಿಗೆ ನಮಸ್ಕರಿಸಿದ ಆನಂದ್‌ ಸಿಂಗ್‌

ಕನ್ನಡ ಧ್ವಜ

ವಿಜಯನಗರ: ಇಲ್ಲಿನ ಹೊಸಪೇಟೆ ತಾಲೂಕಿನ ಹೃದಯ ಭಾಗದಲ್ಲಿರುವ ಡಾ.ಪುನೀತ್ ರಾಜಕುಮಾರ್ ಸರ್ಕಲ್‌ನಲ್ಲಿ ಈಗಾಗಲೇ ನಿರ್ಮಾಣವಾಗಿರುವ 150 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಶಾಶ್ವತವಾಗಿ ಕನ್ನಡ ಬಾವುಟ (Kannada Flag) ಹಾರಾಡುವಂತೆ ಮಾಡಲಾಗಿದೆ. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಭಾನುವಾರ (ನ. ೨೭) ಈ ವಿಶೇಷ ಕೆಲಸಕ್ಕೆ ಭಾನುವಾರ ಚಾಲನೆ ನೀಡಿದರು.

ವಿರೂಪಾಕ್ಷೇಶ್ವರನ ಕೃಪೆಯಿಂದ ಈ ಉತ್ತಮ ಕಾರ್ಯ ಇಂದು ನೆರವೇರಿದೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದು, ಧ್ವಜ ಸ್ತಂಭ 150 ಅಡಿ ಇದ್ದರೆ, ಕನ್ನಡ ಧ್ವಜ ಸರಿಸುಮಾರು 450 ಅಡಿಗೂ ಅಧಿಕ ಉದ್ದ-ಅಗಲವಿದೆ. ವಿಜಯನಗರ ಜಿಲ್ಲೆಯ ಜನ ಶಾಶ್ವತವಾಗಿ ವರ್ಷದ 365 ದಿನವೂ ಕನ್ನಡ ಹಬ್ಬ ಆಚರಣೆ ಮಾಡಬೇಕು. ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿ ಈ ಕಾರ್ಯವನ್ನು ನೆರವೇರಿಸಿದ್ದೇವೆ ಎಂದಿದ್ದಾರೆ.

ಕನ್ನಡ ಬಾವುಟವು ಇಂದಿನಿಂದ ಶಾಶ್ವತವಾಗಿ ಬಾಣಂಗಳದಲ್ಲಿ ಹಾರಾಡಲಿದೆ. ಇದರ ಸೌಭಾಗ್ಯ ಪಡೆದ ವಿಜಯನಗರ ಜಿಲ್ಲೆಯ ಜನರೇ ಧನ್ಯರು ಎಂದು ಕಾಂಗ್ರೆಸ್ ಮುಖಂಡ ನಾಗರಾಜ್ ಗುಜ್ಜಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಬೃಹತ್‌ ಎತ್ತರದ ಧ್ವಜ ಸ್ತಂಭದಲ್ಲಿ ಕನ್ನಡದ ಅತಿ ದೊಡ್ಡ ಬಾವುಟ ಹಾರಾಡುತ್ತಿರುವುದನ್ನು ಕಣ್ತುಂಬಿಕೊಳ್ಳಲು ಕಾಲೇಜು ವಿದ್ಯಾರ್ಥಿಗಳು, ಮಕ್ಕಳು ಸೇರಿದ್ದರು. ಇತ್ತ ನಗರಸಭೆ ಅಧ್ಯಕ್ಷೆ ಸುಂಕಮ್ಮ ಖುಷಿಯಿಂದ ಕುಣಿದು ಕುಪ್ಪಳಿಸಿದ್ದು ಕಂಡುಬಂತು.

ಪುಟಾಣಿಯ ಭಾಷಣಕ್ಕೆ ತಲೆದೂಗಿ ಕಾಲಿಗೆ ನಮಸ್ಕರಿಸಿದ ಸಚಿವ
ಕನ್ನಡ ಸಂಭ್ರಮದಲ್ಲಿ 6 ವರ್ಷದ ಅಭಿನವ್‌ನ ಭಾಷಣಕ್ಕೆ ತಲೆದೂಗಿದ ಸಚಿವ ಆನಂದ್‌ ಸಿಂಗ್‌ ಪುಟಾಣಿಯ ಕಾಲಿಗೆ ನಮಸ್ಕರಿಸಿ, ಮುದ್ದಾಡಿದರು. ವಿಶೇಷ ಚೇತನವಾಗಿರುವ ಅಭಿನವ್‌ ವಿಶ್ವಚೇತನ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದು, ಕನ್ನಡ ರಾಜ್ಯೋತ್ಸವ ಉದ್ದೇಶಿಸಿ ಭಾಷಣ ಮಾಡಿದ್ದಾನೆ. ಈತನ ಭಾಷಣಕ್ಕೆ ಸೇರಿದ್ದವರು ಚಪ್ಪಾಳೆಯ ಮೂಲಕ ಉರಿದುಂಬಿಸಿದ್ದರೆ, ಸಚಿವರು ಪುಟಾಣಿಯ ಕಾಲಿಗೆ ನಮಿಸಿದರು.

ಇದನ್ನೂ ಓದಿ | Aditi Prabhudeva | ಮದರಂಗಿ ಸಂಭ್ರಮದಲ್ಲಿ ಅದಿತಿ ಪ್ರಭುದೇವ: ರಂಗು ರಂಗಾದ ಫೋಟೊಗಳಿವೆ ನೋಡಿ!

Exit mobile version