Site icon Vistara News

Kannada New Movie: ಅವಿನಾಶ್ ವಿಜಯಕುಮಾರ್ ನಿರ್ದೇಶನದ “ಮೈ ಹೀರೋ” ಚಿತ್ರ ಆ.30ಕ್ಕೆ ರಿಲೀಸ್‌

Kannada New Movie

ಬೆಂಗಳೂರು: ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸಿರುವ “ಮೈ ಹೀರೋ” ಚಿತ್ರ (Kannada New Movie) ಇದೇ ಆಗಸ್ಟ್ 30 ರಂದು ಬಿಡುಗಡೆಯಾಗಲಿದೆ. ಬಿಡುಗಡೆಗೆ ಪೂರ್ವಭಾವಿಯಾಗಿ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು “ಮೈ ಹೀರೋ” ಬಗ್ಗೆ ಮಾತನಾಡಿದರು.

ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಅವಿನಾಶ್ ವಿಜಯ ಕುಮಾರ್, ನಟಿ ಅಂಕಿತ ಅಮರ್ ಹಾಗೂ ಸಂಗೀತ ನಿರ್ದೇಶಕ ಗಗನ್ ಭಡೇರಿಯಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಹಾಲಿವುಡ್ ಕಲಾವಿದರಾದ ಜಿಲಾಲಿ ರಜ್ ಕಲ್ಲಹ್, ಎರಿಕ್ ರಾಬರ್ಟ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಮೈ ಹೀರೋ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ಬೆಳವಾಡಿ ಅವರು ಜಿಲ್ಲಾಧಿಕಾರಿಯಾಗಿ, ಹಿರಿಯನಟ ದತ್ತಣ್ಣ ಅವರು ಪುರೋಹಿತರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಟಿ ಅಂಕಿತ ಅಮರ್ ಮಧ್ಯಪ್ರದೇಶದ ಯುವತಿಯಾಗಿ ನಟಿಸಿದ್ದಾರೆ.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಅವಿನಾಶ್ ವಿಜಯಕುಮಾರ್, ನಾನು ಮೂಲತಃ ರಂಗಭೂಮಿ ಕಲಾವಿದ. ನನ್ನ ನಿರ್ದೇಶನದ ಮೊದಲ ಚಿತ್ರವಿದು. ಎ.ವಿ. ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದೇವೆ. ನಮ್ಮ ತಾಯಿ 2009 ರಲ್ಲಿ “ಚಿಲಿಪಿಲಿ ಹಕ್ಕಿಗಳು” ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಹಿಂದುಳಿದವರ ಮೇಲೆ ನಡೆಯುವ ಶೋಷಣೆ ಕುರಿತಂತೆ ಮಾಡಿರುವ ಕಾನ್ಸೆಪ್ಟ್ ಇದು. ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಒಂದು ಘಟನೆ ನಡೆದಿತ್ತು. ಅದನ್ನು ಇಟ್ಟುಕೊಂಡು ಈ ಚಿತ್ರಕಥೆ ರಚಿಸಿದ್ದೇನೆ. ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಸಂಭಾಷಣೆ ಇರುತ್ತದೆ. ಹಳ್ಳಿಗಳಲ್ಲಿ ಈಗಲೂ ಜಾತಿ ಪದ್ದತಿ ಇದೆ, ಬೇರೆ ಬೇರೆ ದೇಶಗಳಲ್ಲೂ ಸಹ ಇದೆ. ಇದನ್ನೇ ಪ್ರಮುಖವಾಗಿಟ್ಟಿಕೊಂಡು ಸಿನಿಮಾ‌ ಮಾಡಿದ್ದೇನೆ.

ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಕಂಟೆಂಟ್ ಓರಿಯಂಟೆಡ್ ಚಿತ್ರ “ಮೈ ಹೀರೋ” ಆಗಸ್ಟ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪಿ.ವಿ.ಆರ್ ಐನಾಕ್ಸ್ ಅವರು ವಿತರಣೆ ಮಾಡುತ್ತಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನಾನು ಈ ಚಿತ್ರದಲ್ಲಿ ಮಧ್ಯಪ್ರದೇಶದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. “ಮೈ ಹೀರೋ” ಚಿತ್ರದಲ್ಲಿ ಎನ್ ಜಿ ಓ ಪಾತ್ರ ನನ್ನದು. ಮಧ್ಯಪ್ರದೇಶದ ಮಹೇಶ್ವರ ಎಂಬ ಸ್ಥಳದಲ್ಲಿ ವಾರಣಾಸಿಯಲ್ಲಿರುವಂತೆ ಅನೇಕ ಘಾಟ್‌ಗಳಿದೆ. ಅಹಿಲ್ಯ ಬಾಯಿ ಎಂಬ ಮಹಾರಾಣಿ ಈ ಘಾಟ್‌ಗಳನ್ನು ನಿರ್ಮಿಸಿದ್ದರು. ಅಲ್ಲಿ ಅವರ ಪ್ರತಿಮೆ ಕೂಡ ಇದೆ. ಈ ಚಿತ್ರದಲ್ಲಿ ನಟಿಸುವುದಕ್ಕೆ ಮುಂಚೆ ನಾನು ಅಲ್ಲಿನ ವಿಷಯಗಳನ್ನು ತಿಳಿದುಕೊಂಡು ನಟಿಸಿರುವುದಾಗಿ ನಟಿ ಅಂಕಿತ ಅಮರ್ ಹೇಳಿದರು.

ಇದನ್ನೂ ಓದಿ: Reliance Jio: ಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದೇ ಸಂಪರ್ಕದಲ್ಲಿ ನೋಡಿ ಎರಡು ಟಿವಿ!

ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಗಗನ್ ಭಡೇರಿಯಾ ಮಾತನಾಡಿದರು.

Exit mobile version