Site icon Vistara News

Kannada New Movie: ಮಧುಸೂದನ್ ಹವಾಲ್ದಾರ್ ನಿರ್ದೇಶನದ ʼಕಾಖಂಡಕಿ ಶ್ರೀ ಮಹಿಪತಿದಾಸರುʼ ಚಿತ್ರದ ಹಾಡುಗಳ ಅನಾವರಣ

Kannada New Movie

ಬೆಂಗಳೂರು: ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ ಅಪಾರ.‌ ಅಂತಹ ಮಹನೀಯರ ‌ಮಹಿಮೆಯನ್ನು ಚಿತ್ರಗಳ ಮೂಲಕ ಜನರಿಗೆ ಪರಿಚಯಿಸುವ ಕೆಲಸವನ್ನು ನಿರ್ದೇಶಕ ಮಧುಸೂದನ್ ಹವಾಲ್ದಾರ್ ಮಾಡುತ್ತಾ ಬರುತ್ತಿದ್ದಾರೆ. ಕರ್ನಾಟಕದ ಮತ್ತೊಬ್ಬ ಶ್ರೇಷ್ಠ ಹರಿದಾಸರಾದ ಮಹಿಪತಿ ದಾಸರ ಕುರಿತಾದ “ಕಾಖಂಡಕಿ ಶ್ರೀ ಮಹಿಪತಿದಾಸರು” ಚಿತ್ರವನ್ನು (Kannada New Movie) ನಿರ್ದೇಶಿಸುವುದರ ಜತೆಗೆ ಮೊದಲ ಬಾರಿಗೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

ಮಹಿಪತಿದಾಸರ ವಿರಚಿತ ಹನ್ನೊಂದು ಹಾಡುಗಳು ಈ ಚಿತ್ರದಲ್ಲಿದ್ದು, ಚಿತ್ರದಲ್ಲಿ ಮಹಿಪತಿದಾಸರ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಜಯಾನಂದ ಅವರು ಏಳು ಹಾಡುಗಳನ್ನು ಹಾಗೂ ಮಧುಸೂದನ್ ಹವಾಲ್ದಾರ್, ಅನಂತ ಕುಲಕರ್ಣಿ, ರಾಯಚೂರು ಶೇಷಗಿರಿದಾಸ್ ಹಾಗೂ ವಿ.ವಿ. ಪ್ರಸನ್ನ ಅವರು ಒಂದೊಂದು ಗೀತೆಯನ್ನು ಹಾಡಿದ್ದಾರೆ.

ಇದನ್ನೂ ಓದಿ: Gold Rate Today: ಸ್ವರ್ಣ ಪ್ರಿಯರಿಗೆ ಕೊಂಚ ನಿರಾಳ; ಚಿನ್ನದ ದರ ಇಳಿಕೆ

ಇತ್ತೀಚೆಗೆ ಈ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಚಿತ್ರದ ಏಳು ಹಾಡುಗಳನ್ನು ಪ್ರದರ್ಶಿಸಲಾಯಿತು. ಮಾಧವತೀರ್ಥ (ತಂಬಿಹಳ್ಳಿ) ಸಂಸ್ಥಾನದ ಪೀಠಾಧಿಪತಿ ಶ್ರೀ ವಿದ್ಯಾಸಾಗರ ಮಾಧವತೀರ್ಥರು ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಮಾಜಿ ಶಾಸಕ ಎಸ್.ಕೆ. ಬೆಳ್ಳುಬ್ಬಿ, ಹುಸೇನ್ ಸಾಬ್ ದಾಸ್, ಸುಭಾಷ್ ಕಾಖಂಡಕಿ, ಮುರಳಿ, ವಿಷ್ಣುತೀರ್ಥ ಜೋಶಿ, ರಾಘವೇಂದ್ರ ರಾವ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಂತರ ಗಣ್ಯರು ಹಾಗೂ ಚಿತ್ರತಂಡದವರು ಮಾತನಾಡಿದರು.

ಕನ್ನಡ ಹರಿದಾಸ ಸಾಹಿತ್ಯಕ್ಕೆ ಮಹಿಪತಿದಾಸರ ಕೊಡುಗೆ ಅಪಾರ.‌ ಆದರೆ ಅವರಿಗೆ ಹೆಚ್ಚು ‌ಪ್ರಚಾರ ಸಿಕ್ಕಿಲ್ಲ. ಸಿನಿಮಾ‌ ಎಲ್ಲರನ್ನು ಬಹುಬೇಗ ತಲುಪುವ ಮಾಧ್ಯಮ.‌ ಇದರ ಮೂಲಕ ಮಧುಸೂದನ್ ಹವಾಲ್ದಾರ್ ಅವರು ಕನ್ನಡದ ಹರಿದಾಸರನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಎಲ್ಲಾ ಹರಿದಾಸರ ಅನುಗ್ರಹವಿರಲಿ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಶ್ರೀ ವಿದ್ಯಾಸಾಗರ ಮಾಧವತೀರ್ಥರು ಆಶೀರ್ವದಿಸಿದರು.

“ಶ್ರೀ ಜಗನ್ನಾಥದಾಸರು” ಚಿತ್ರದಿಂದ ಶ್ರೇಷ್ಠ ಹರಿದಾಸರ ಚಿತ್ರಗಳನ್ನು ನಿರ್ದೇಶಿಸುತ್ತಾ ಬಂದಿದ್ದೇನೆ. ಪ್ರಸ್ತುತ “ಕಾಖಂಡಕಿ ಶ್ರೀಮಹಿಪತಿದಾಸರು” ಚಿತ್ರವನ್ನು ‌ನಿರ್ದೇಶಿಸುವುದರೊಂದಿಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದೇನೆ. ರಾಮಾಂಬುಜ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಮಧುಸೂದನ್ ಹವಾಲ್ದಾರ್ ತಿಳಿಸಿದರು.

ಇದನ್ನೂ ಓದಿ: Banking Recruitment 2024: ರಾಷ್ಟ್ರೀಯ ಬ್ಯಾಂಕ್‌‌ಗಳಲ್ಲಿ 4455 ಹುದ್ದೆಗೆ ನೇಮಕ: ಅರ್ಜಿ ಸಲ್ಲಿಸಲು ನಾಳೆಯೇ ಅಂತಿಮ ದಿನ

ಐಟಿ ಉದ್ಯೋಗಿಯಾಗಿದ್ದ ನಾನು ದಾಸರ ಅನುಗ್ರಹದಿಂದ ಇಂದು ಮಹಿಪತಿದಾಸರ ಪಾತ್ರ ಮಾಡಿದ್ದೇನೆ. ನಟನೆ ಜತಗೆ ಗಾಯನವನ್ನೂ ಮಾಡಲು ಅವಕಾಶ ನೀಡಿದ ಮಧುಸೂದನ್ ಹವಾಲ್ದಾರ್ ಅವರಿಗೆ ಧನ್ಯವಾದ ಎಂದರು ನಟ ವಿಜಯಾನಂದ್.

Exit mobile version