ಹೊಸಪೇಟೆ: ಬಳ್ಳಾರಿ ಭಾಗದ ಕನ್ನಡ ಭಾಷೆಯ ಸೊಗಡು ಹೊಂದಿರುವ ಕನ್ನಡದ ಮೊದಲ ಸಿನಿಮಾ ’ಕುಬುಸʼ ಇದೇ ಜು.26ರಂದು ರಾಜ್ಯಾದ್ಯಂತ ತೆರೆ (Kannada New Movie) ಕಾಣಲಿದೆ.
ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಚಿತ್ರ ನಿರ್ದೇಶಕ ರಘುರಾಮ ಚರಣ, ‘ಸಾಹಿತಿ ಕುಂ. ವೀರಭದ್ರಪ್ಪ ಕಾದಂಬರಿ ಆಧರಿತ ಈ ಸಿನಿಮಾವನ್ನು ಕುಟುಂಬದವರೆಲ್ಲರೂ ನೋಡಬಹುದು, ಸಮಾಜಕ್ಕೆ ಉತ್ತಮ ಸಂದೇಶ ಸಹ ಚಿತ್ರದಲ್ಲಿದೆ, ಇದು ನನ್ನ ನಿರ್ದೇಶನದ ಮೊದಲ ಸಿನಿಮಾʼ ಎಂದು ತಿಳಿಸಿದರು.
ಇದನ್ನೂ ಓದಿ: Indian Olympics History: ಭಾರತಕ್ಕೆ ಒಲಿಂಪಿಕ್ಸ್ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಮೊದಲ ಸಾಧಕ ಅಭಿನವ್ ಬಿಂದ್ರಾ
ಇದೇ ಜು.22ರಂದು ಬೆಂಗಳೂರಿನಲ್ಲಿ ಚಿತ್ರದ ಟ್ರೇಲರ್‌ಅನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡುವರು. ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ. ನಟರಾಜ್ ಎಸ್. ಭಟ್ ನಾಯಕ ನಟನಾಗಿ ಹಾಗೂ ರಂಗಭೂಮಿ ಕಲಾವಿದ ದುರ್ಗಾದಾಸ್ ಅವರ ಪುತ್ರಿ ಹನುಮಕ್ಕ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯರಾದ ರಮ್ಯಾ, ಜಯಲಕ್ಷ್ಮಿ ಸಹ ಪ್ರಮುಖ ಪಾತ್ರದಲ್ಲಿದ್ದಾರೆ ಎಂದರು.
ಚಿತ್ರದಲ್ಲಿ ನಾಯಕಿಯ ಗೆಳತಿಯ ಪಾತ್ರದಲ್ಲಿ ನಟಿಸಿರುವ ರಂಗಭೂಮಿ ಕಲಾವಿದರಾದ ಮಂಜಮ್ಮ ಜೋಗತಿ ಮಾತನಾಡಿ, ‘ಇದೊಂದು ಬಹಳ ನಿರೀಕ್ಷೆಯ ಚಿತ್ರ, ಕುಂ.ವೀರಭದ್ರಪ್ಪ ಅವರ ಗಟ್ಟಿನೆಲೆಯ ಕಾದಂಬರಿ ಚಿತ್ರಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟಿದೆ. ಜನರಿಗೆ ಇಷ್ಟವಾಗುವ ನಿರೀಕ್ಷೆಯಲ್ಲಿದ್ದೇವೆ’ ಎಂದರು.
ಚಿತ್ರಕ್ಕೆ ಪ್ರದೀಪ್ ಚಂದ್ರ ಅವರ ಸಂಗೀತವಿದೆ. 30 ಲಕ್ಷ ರೂ.ದೊಳಗೆ ನಿರ್ಮಿಸಲು ಹೊರಟಿದ್ದ ಸಿನಿಮಾದ ಬಜೆಟ್ 1.50 ಕೋಟಿ ರೂ. ಮೀರಿದೆ. ನಡುವೆ ಕೊರೊನಾದಂತಹ ಅಡೆತಡೆಗಳು ಬಂದವು, ಹೀಗಾಗಿ ಚಿತ್ರ ಬಿಡುಗಡೆ ವಿಳಂಬವಾಗಿದೆ. ರಾಜ್ಯದ 25 ಟಾಕೀಸ್‌ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: Indian Navy Recruitment: ಭಾರತೀಯ ನೌಕಾ ಪಡೆಯಲ್ಲಿದೆ 741 ಹುದ್ದೆ; 10ನೇ ತರಗತಿ ಪಾಸಾದವರಿಗೂ ಇದೆ ಅವಕಾಶ
ಈ ಸಂದರ್ಭದಲ್ಲಿ ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್, ರಂಗಭೂಮಿ ಕಲಾವಿದ ಮಾ.ಬಾ.ಸೋಮಣ್ಣ, ಉಪನ್ಯಾಸಕ ದಯಾನಂದ ಕಿನ್ನಾಳ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೀರಸಂಗಯ್ಯ, ನಟಿ ಭಾರತಿ, ನಿರ್ಮಾಪಕಿ ವಿ.ಶೋಭಾ, ಗಂಟೆ ಸೋಮಶೇಖರ್, ಗುಜ್ಜಲ್ ಗಣೇಶ್ ಹಾಗೂ ಇತರರು ಉಪಸ್ಥಿತರಿದ್ದರು.