ಬೆಂಗಳೂರು: ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹೇಮಂತ್ ಹೆಗಡೆ ನಿರ್ದೇಶಿಸಿ ಪ್ರಮುಖ ಪಾತ್ರದಲ್ಲೂ ನಟಿಸುತ್ತಿರುವ “ನಾ ನಿನ್ನ ಬಿಡಲಾರೆ” ಚಿತ್ರದ (Kannada New Movie) ಮುಹೂರ್ತ ಸಮಾರಂಭ ಪದ್ಮನಾಭ ನಗರದ ಶ್ರೀ ಲಕ್ಷ್ಮೀಕಾಂತ ದೇವಸ್ಥಾನದಲ್ಲಿ ನೆರವೇರಿತು.
ಚಿತ್ರದ ಮೊದಲ ಸನ್ನಿವೇಶಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಆರಂಭ ಫಲಕ ತೋರಿದರು. ನೈಸ್ ಸಂಸ್ಥೆಯ ಅಶೋಕ್ ಖೇಣಿ ಅವರು, ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರರಂಗದ ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.
ಹಾರಾರ್ ಚಿತ್ರ
ಇದೊಂದು ಹಾರಾರ್ ಜಾನರ್‌ನ ಚಿತ್ರ ಎಂದು ಮಾತನಾಡಿದ ಹೇಮಂತ್ ಹೆಗಡೆ, ಈ ಸೂಪರ್ ಹಿಟ್ ಚಲನಚಿತ್ರದ ಶೀರ್ಷಿಕೆ ನಮ್ಮ ಚಿತ್ರದ ಕಥೆಗೆ ಸೂಕ್ತವಾಗಿದೆ. ಹಾಗಾಗಿ “ನಾ ನಿನ್ನ ಬಿಡಲಾರೆ” ಶೀರ್ಷಿಕೆ ಇಟ್ಟಿದ್ದೇವೆ. ಆದರೆ ಹಳೆಯ “ನಾ ನಿನ್ನ ಬಿಡಲಾರೆ” ಚಿತ್ರದ ಕಥೆಯೇ ಬೇರೆ. ಈ ಚಿತ್ರದ ಕಥೆಯೇ ಬೇರೆ. ಕನ್ನಡದಲ್ಲಿ ಒಂದೊಳ್ಳೆ ಹಾರಾರ್ ಚಿತ್ರ ಬಂದು ಬಹಳ ಸಮಯವಾಗಿದೆ. ಹಾಗಾಗಿ ಹಾರಾರ್ ಜಾನರ್ ಅನ್ನು ಆಯ್ಕೆ ಮಾಡಿಕೊಂಡಿದ್ದೇವೆ.
ಇದನ್ನೂ ಓದಿ: Karnataka Weather: ನಾಳೆ ಶಿವಮೊಗ್ಗ, ಚಿಕ್ಕಮಗಳೂರು ಸೇರಿ ವಿವಿಧೆಡೆ ಭಾರಿ ಮಳೆ; ಕರಾವಳಿಯಲ್ಲಿ ಮೀನುಗಾರರಿಗೆ ಎಚ್ಚರಿಕೆ!
ಜುಲೈ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ. ಹೊಸನಗರದ ಬಳಿ ನೂರೈವತ್ತು ವರ್ಷಗಳ ಹಳೆಯ ಮನೆಯಲ್ಲೇ ಮೂವತ್ತು ದಿನಗಳ ಚಿತ್ರೀಕರಣ ನಡೆಯಲಿದೆ. ನನ್ನ ಹೆಂಡತಿ ಪಾತ್ರದಲ್ಲಿ ಅಪೂರ್ವ ನಟಿಸುತ್ತಿದ್ದಾರೆ. ಭಾವನಾ ರಾಮಣ್ಣ ಅವರು ದೆವ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿಶೋರ್, ಮಕರಂದ್ ದೇಶಪಾಂಡೆ, ಶಂಕರ್ ಅಶ್ವಥ್, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ರೇವಣ್ಣ ಸಿದ್ದಯ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟ ನಾಜರ್ ಅವರ ಜತೆ ಕೂಡ ಮಾತುಕತೆ ನಡೆಯುತ್ತಿದೆ. ಮೂರು ಹಾಡುಗಳಿದ್ದು ವಾಸುಕಿ ವೈಭವ್ ಸಂಗೀತ ನೀಡಲಿದ್ದಾರೆ. ಕೃಷ್ಣ ಬಂಜನ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ “ಘೋಸ್ಟ್ 2.0” ಎಂಬ ಅಡಿಬರಹವಿದೆ ಎಂದು ತಿಳಿಸಿದ್ದಾರೆ.
ನಟಿ ಭಾವನ ರಾಮಣ್ಣ ಮಾತನಾಡಿ, ನನ್ನದು ಈ ಚಿತ್ರದಲ್ಲಿ ಮಧ್ಯಮ ವಯಸ್ಸಿನ ಮಲೆನಾಡ ಬ್ರಾಹ್ಮಣ ಹೆಂಗಸಿನ ಪಾತ್ರ. ನಾನು ಹುಟ್ಟಿಬೆಳೆದಿದ್ದು ಶಿವಮೊಗ್ಗದ ಬ್ರಾಹ್ಮಣರ ವಠಾರದಲ್ಲಿ. ಹಾಗಾಗಿ ನನಗೆ ಈ ಪಾತ್ರ ತುಂಬಾ ಹತ್ತಿರವಾಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: David Warner Retirement: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಡೇವಿಡ್ ವಾರ್ನರ್
ಈ ವೇಳೆ ಶಂಕರ್ ಅಶ್ವಥ್, ಸುಚೇಂದ್ರ ಪ್ರಸಾದ್, ರೇವಣ್ಣ ಸಿದ್ದಯ್ಯ ಮುಂತಾದವರು “ನಾ ನಿನ್ನ ಬಿಡಲಾರೆ” ಚಿತ್ರದ ಕುರಿತು ಮಾತನಾಡಿದರು. ಅನ್ವಿತಾ ಆರ್ಟ್ಸ್ ಲಾಂಛನದಲ್ಲಿ ಶಶಿಕಿರಣ್ ರಂಗನಾಥ್, ಕಿರಣ್ ನಾಗರಾಜ್ ಹಾಗೂ ಬಾಲಕೃಷ್ಣ ಪೆರುಂಬಲ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.