ಬೆಂಗಳೂರು: ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ಹಾಗೂ ಪ್ರಸ್ತುತ ತೆಲುಗು ಚಿತ್ರರಂಗದಲ್ಲೂ ಮನೆಮಾತಾಗಿರುವ ನಟ ರಿಷಿ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ‘ರುದ್ರ ಗರುಡ ಪುರಾಣ’ ಚಿತ್ರದ (Kannada New Movie) ಟೀಸರ್ ಬಿಡುಗಡೆಯಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ನಿರ್ದೇಶಕ ಜೇಕಬ್ ವರ್ಗೀಸ್, ಇತರರು ಟೀಸರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದರು.
914 ವಿಮಾನ 1955ರಲ್ಲಿ ನ್ಯೂಯಾರ್ಕ್‌ನಿಂದ ಮಿಯಾನ್ ಸಿಟಿಗೆ ಹೊರಟಿದ್ದ ವಿಮಾನ ಮಿಸ್ ಆಗುತ್ತದೆ. ವಿಮಾನದ ಸುಳಿವು ಸಿಕ್ಕಿರುವುದಿಲ್ಲ. ಇದಾದ ಮೂವತ್ತು ವರ್ಷಗಳ (1985 ರಲ್ಲಿ) ನಂತರ ಮತ್ತೆ ಆ ವಿಮಾನ ವಾಪಸ್ ಬರುತ್ತದೆ ಅದು ಹೇಗೆ…? ಹಾಗೂ ಒಬ್ಬ ರಾಜ ಇಡೀ ಭೂಮಂಡಲನೇ ಗೆಲ್ಲಬೇಕು ಅಂತ ಆಸೆಯಿಂದ ತನ್ನ ಪಕ್ಕದ ದೇಶದ ಮೇಲೆ ಯುದ್ದಕ್ಕೆ ಹೋಗಿ ಲಕ್ಷಾಂತರ ಜನರನ್ನು ಕೊಂದು ಜಯ ಸಾಧಿಸಿರುತ್ತಾನೆ.
ಯುದ್ಧ ಮುಗಿದ ಮೇಲೆ ರಣರಂಗಕ್ಕೆ ಹೋಗುತ್ತಾನೆ. ಅಲ್ಲಿ ಸಾಲುಸಾಲು ಹೆಣದ ರಾಶಿಗಳಿರುತ್ತಿದೆ. ಸತ್ತಿದ್ದ ಸೈನಿಕನೊಬ್ಬನ ಮಾಂಸವನ್ನು ಮನುಷ್ಯನೊಬ್ಬ ತಿನ್ನುತ್ತಿರುತ್ತಾನೆ. ಆ ಸಮಯಕ್ಕೆ ರಾಜ ಅಲ್ಲಿಗೆ ಬರುತ್ತಾನೆ. ಆ ಮನುಷ್ಯ ರಾಜನನ್ನು ಕುರಿತು, ಕ್ಷಮಿಸು ರಾಜ ನಾನು ನಿನ್ನ ಆಹಾರವನ್ನು ತಿನ್ನುತ್ತಿದ್ದೇನೆ ಎನ್ನುತ್ತಾನೆ. ಆಗ ರಾಜ ನಾನು ನಿನ್ನ ಹಾಗೆ ನರಭಕ್ಷಕ ಅಲ್ಲ ಎನುತ್ತಾನೆ. ಆಗ ಆ ಮನುಷ್ಯ ಹಾಗಾದರೆ ಇಷ್ಟು ಜನರನ್ನು ಏಕೆ ಸಾಯಿಸಿದಿಯಾ ಎಂದು ರಾಜನನ್ನು ಕೇಳುತ್ತಾನೆ?. ಈ ಎರಡು ಉಪಕಥೆಗಳೇ ನಮ್ಮ ಚಿತ್ರದ ಕಥೆಗೆ ಸ್ಫೂರ್ತಿ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ನಂದೀಶ್.
ನಮ್ಮ ಸುತ್ತಮುತ್ತ ನಡೆಯುವ ಅನೇಕ ಸಮಸ್ಯೆಗಳನ್ನಿಟ್ಟುಕೊಂಡು ನಂದೀಶ್ ಈ ಚಿತ್ರದ ಕಥೆ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರ ನಿರ್ಮಾಣದ “ಕವಲುದಾರಿ” ಚಿತ್ರದ ನಂತರ ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ರುದ್ರ ನನ್ನ ಪಾತ್ರದ ಹೆಸರು ಎಂದರು ನಟ ರಿಷಿ.
ಇದು ನನ್ನ ಅಭಿನಯದ ಎರಡನೇ ಚಿತ್ರ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕಿ ಪ್ರಿಯಾಂಕ ಕುಮಾರ್ ತಿಳಿಸಿದರು.
ಜೇಕಬ್ ವರ್ಗೀಸ್ ಹಾಗೂ ನಾನು ಸ್ನೇಹಿತರು. ಜೇಕಬ್ ಅವರ ಜತೆಗೆ ಕೆಲಸ ಮಾಡುತ್ತಿದ್ದಾಗಿನಿಂದಲೂ ನನಗೆ ನಂದೀಶ್ ಪರಿಚಯ. ನಂದೀಶ್ ಈ ಚಿತ್ರದ ಕಥೆ ಹೇಳಿದಾಗ ಇಷ್ಟವಾಯಿತು. ಅಭಿನಯಿಸಿದ್ದೇನೆ ಎಂದರು ನಟ ವಿನೋದ್ ಆಳ್ವಾ.
ಚಿತ್ರದಲ್ಲಿ ನಟಿಸಿರುವ ಕೆ.ಎಸ್ ಶ್ರೀಧರ್, ಗಿರೀಶ್ ಶಿವಣ್ಣ, ಶಿವರಾಜ ಕೆ.ಆರ್. ಪೇಟೆ, ಸಂಗೀತ ನಿರ್ದೇಶಕ ಕೆಪಿ, ಛಾಯಾಗ್ರಾಹಕ ಸಂದೀಪ್ ಕುಮಾರ್ ಹಾಗೂ ಸಂಭಾಷಣೆ ಬರೆದಿರುವ ರಘು ನಿಡವಳ್ಳಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
ಇದನ್ನೂ ಓದಿ: World Senior Citizens Day: ವಿಶ್ವ ಹಿರಿಯ ನಾಗರಿಕರ ದಿನದ ಪ್ರಯುಕ್ತ ವೈದ್ಯರಿಂದ ಉಚಿತ ಸಮಾಲೋಚನೆ
ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಶ್ವಿನಿ ಅವರ ಪತಿ ಲೋಹಿತ್ ಅವರು ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.