ಬೆಂಗಳೂರು: ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, “ಕೆಂಡಸಂಪಿಗೆ” ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ “ಕಾಲಾಪತ್ಥರ್” ಚಿತ್ರಕ್ಕಾಗಿ (Kannada New Movie) ಪ್ರಮೋದ್ ಮರವಂತೆ ಬರೆದು, ಅನೂಪ್ ಸೀಳಿನ್ ಸಂಗೀತ ನೀಡಿರುವ “ಬಾಂಡ್ಲಿ ಸ್ಟವ್” ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಗೃಹಿಣಿಯರಿಂದಲೇ ಈ ಹಾಡು ಬಿಡುಗಡೆಯಾಗಿದ್ದು ವಿಶೇಷ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಆರಂಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಮೊದಲು ಒಂದು ಹಾಡು ಶುರುವಾಗಬೇಕದಾಗಿನಿಂದಲೂ ಸಂಗೀತ ನಿರ್ದೇಶಕರ ಜತೆಗೆ ನಿರ್ದೇಶಕರು ಇರುತ್ತಿದ್ದರು. ಈಗ ಹಾಗಲ್ಲ. ಆದರೆ ಈ ಚಿತ್ರದ ನಿರ್ದೇಶಕ ವಿಕ್ಕಿ ವರುಣ್ ಆರಂಭದಿಂದಲೂ ನನ್ನ ಜತೆಗಿದ್ದಾರೆ. ಹಾಡು ಚೆನ್ನಾಗಿ ಬಂದಿದೆ ಅಂದರೆ ಅವರು ಕಾರಣ. ಹಾಡುಗಳಿಗೆ ಹಾಗೂ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.
ಬಾಂಡ್ಲಿ, ಸ್ವವ್ ಹಾಗೂ ಸೌಟ್ ಅನ್ನು ಹೆಚ್ಚಾಗಿ ಗೃಹಿಣಿಯರು ಬಳಸುತ್ತಾರೆ. ಹಾಗಾಗಿ ಈ ಹಾಡನ್ನು ಅವರಿಂದ ಬಿಡುಗಡೆ ಮಾಡಿಸಿದ್ದೇವೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಪ್ರಮೋದ್ ಮರವಂತೆ ಅವರ ಸಾಹಿತ್ಯ ಚೆನ್ನಾಗಿದೆ. ನೃತ್ಯ ಬಾರದ ನನ್ನಿಂದ ಧನು ಮಾಸ್ಟರ್ ಚೆನ್ನಾಗಿ ನೃತ್ಯ ಮಾಡಿಸಿದ್ದಾರೆ. ನಿರ್ಮಾಪಕರು ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್ 13 ರಂದು ಚಿತ್ರ ತೆರೆಗೆ ಬರಲಿದೆ ಎಂದರು ನಾಯಕ ಹಾಗೂ ನಿರ್ದೇಶಕ ವಿಕ್ಕಿ ವರುಣ್.
ಇದನ್ನೂ ಓದಿ: Karnataka Weather : 8 ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಮೀನುಗಾರರಿಗೂ ಇನ್ನೆರಡು ದಿನ ಅಲರ್ಟ್
ಇಂದು ಬಿಡುಗಡೆಯಾಗಿರುವ ಹಾಡು ಹಾಗೂ ಚಿತ್ರ ಎರಡು ಚೆನ್ನಾಗಿದೆ ಎಂದರು ನಾಯಕಿ ಧನ್ಯ ರಾಮಕುಮಾರ್. ನಿರ್ಮಾಪಕರಾದ ಭುವನ್ ಸುರೇಶ್, ನಾಗರಾಜ್ ಬಿಲ್ಲನಕೋಟೆ ಹಾಗೂ ನೃತ್ಯ ನಿರ್ದೇಶಕ ಧನು ಮಾಸ್ಟರ್ “ಬಾಂಡ್ಲಿ ಸ್ಟವ್” ಹಾಡಿನ ಕುರಿತು ಮಾತನಾಡಿದರು.