Site icon Vistara News

ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿದೇಶಗಳಲ್ಲಿಯೂ ಘಟಕ; ಸಲಹೆ ನೀಡಲು ಸಮಿತಿ ರಚನೆ

kannada sahitya parishat

ಬೆಂಗಳೂರು: ವಿದೇಶದಲ್ಲಿರುವ ಕನ್ನಡಿಗರನ್ನು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಸದಸ್ಯರನ್ನಾಗಿಸಲು ಹಾಗೂ ಪರಿಷತ್ತಿನ ಚಟುವಟಿಕೆಗಳನ್ನು ವಿದೇಶಗಳಲ್ಲಿಯೂ ನಡೆಸಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸಲಹೆ ನೀಡಲು ಸಲಹಾ ಸಮಿತಿಯೊಂದನ್ನು ರಚಿಸಲಾಗಿದೆ. ಇದರ ಸಂಯೋಜನಾಧಿಕಾರಿಯಾಗಿ ಬೆಲ್ಜಿಯಂ ದೇಶದ ವ್ಯಾಪಾರ ಮತ್ತು ವಾಣಿಜ್ಯ ಆಯುಕ್ತ ಜಯಂತ್ ನಾಡಿಗೇರ್ ಅವರನ್ನು ನೇಮಕ ಮಾಡಲಾಗಿದೆ.

ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಸಮಿತಿ ರಚಿಸಲಾಗಿದೆ. ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹೊರದೇಶಗಳಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳನ್ನು ಸ್ಥಾಪಿಸುವ ಕುರಿತು ಮಹತ್ವದ ತೀರ್ಮಾನವನ್ನು ಸಭೆಯು ತೆಗೆದುಕೊಂಡಿದೆ.

ಸಭೆಯಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಹೊಂದಿರುವ ೨೦ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು. ವಿದೇಶದ ಯಾವೆಲ್ಲಾ ನಗರಗಳಲ್ಲಿ ಅಥವಾ ದೇಶಗಳಲ್ಲಿ ನೂರು ಮಂದಿ ಕನ್ನಡಿಗರು ಕಸಾಪದ ಸದಸ್ಯರಾಗುತ್ತಾರೆಯೋ ಅಲ್ಲಿ ಒಂದು ಘಟಕವನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ.

ವಿವಿಧ ದೇಶಗಳ ರಾಯಭಾರಿಯಾಗಿ ನಿವೃತ್ತರಾದ ಪಾರ್ಥಸಾರಥಿ, ಅನಿವಾಸಿ ಭಾರತೀಯರ ಸಮಿತಿಯ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ , ರಿಲೆವೆನ್ಸ್‌ ಲ್ಯಾಬ್‌ನ ಉಪಾಧ್ಯಕ್ಷ ರವೀಂದ್ರ ವರ್ಣ, ಇಂಡೊ-ಪೋರ್ಚುಗಲ್‌ ಸಾಹಿತ್ಯ ಪ್ರತಿಷ್ಠಾನದ ನಿರ್ದೇಶಕ ಡಾ. ಅರವಿಂದ ಯಾಳಗಿ, ಭಾರತ ದೇಶದ ಮಾಜಿ ರಾಯಭಾರಿ ಬಿ.ವಿ. ಕುಮಾರ್ ಸಭೆಯಲ್ಲಿ ಮಾತನಾಡಿ ಅಮೂಲ್ಯ ಸಲಹೆಗಳನ್ನು ನೀಡಿದರು.

ಇಕ್ಯೂಬ್ ಅಡ್ವೈಸರ್ ಹಾ.ವಿ.ಹರೀಶ್, ಸೋಹಮ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಜೀತ್‌ ಶೆಟ್ಟಿ, ಅನಿವಾಸಿ ಭಾರತೀಯರ ಸಮಿತಿಯ ಕಾರ್ಯದರ್ಶಿ ಲಕ್ಮ್ಮಮ್ಮ ಪಿ., ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್‌, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್‌ ಪಾಂಡು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ ಸೇರಿದಂತೆ ಇತರ ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಕನ್ನಡವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಪ್ರಯತ್ನ
ಸಭೆಯಲ್ಲಿ ಮಾತನಾಡಿದ ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ, ಕನ್ನಡಕ್ಕೆ ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನ ಸಿಗುವುದಕ್ಕೆ ಪರಿಶ್ರಮ ಪಡಬೇಕಾಗಿದೆ. ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಸಾಮಾನ್ಯರ ಪರಿಷತನ್ನಾಗಿಸುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿದೆ. ಅದರ ಭಾಗವಾಗಿಯೇ ಈಗ ವಿದೇಶಗಳಲ್ಲೂ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ ಎಂದು ವಿವರಿಸಿದರು.

ಮುಂದಿನ ದಿನಗಳಲ್ಲಿ ವಿದೇಶದಲ್ಲಿರುವ ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗುವಂತೆ ಮಾಡಲಾಗುವುದು. ಅದಕ್ಕೆ ಬೇಕಾದ ಆಧುನಿಕ ಆ್ಯಪ್ ಸಿದ್ಧಪಡಿಸಲಾಗಿದ್ದು, ಆ್ಯಪ್ ಮೂಲಕ ಸದಸ್ಯತ್ವ ಪಡೆಯುವ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ವಿದೇಶಿ ಘಟಕದ ಸಲಹಾ ಸಮಿತಿಯಲ್ಲಿ ಕಾರ್ಯನಿರ್ವಹಿಸಲು ಏರ್‌ ಡೆಕನ್‌ ಸಂಸ್ಥಾಪಕ ಕ್ಯಾ. ಗೋಪಿನಾಥ್, ಹಿರಿಯ ವೈದ್ಯ ಡಾ. ಶರಣ ಪಾಟೀಲ, ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಮುಖ್ಯಸ್ಥರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿ ಮಾರನ್ ಸೇರಿದಂತೆ ಅನೇಕ ಗಣ್ಯರು ಒಪ್ಪಿಕೊಂಡಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಇದನ್ನೂ ಓದಿ| ಕಸಾಪ ಸದಸ್ಯತ್ವ ಪಡೆದ ಕೆನಡಾ ಸಂಸತ್ತಿನಲ್ಲಿ ಕನ್ನಡ ಮಾತನಾಡಿದ ಸಂಸದ ಚಂದ್ರ ಆರ್ಯ

Exit mobile version