Site icon Vistara News

Kannada University | 31ನೇ ನುಡಿಹಬ್ಬ, ಘಟಿಕೋತ್ಸವ; ಮೂವರು ಸಾಧಕರಿಗೆ ನಾಡೋಜ ಗೌರವ ಪದವಿ

Kannada University

ವಿಜಯನಗರ: ಹಂಪಿ ಕನ್ನಡ ವಿಶ್ವವಿದ್ಯಾಲಯದ 31ನೇ ನುಡಿಹಬ್ಬ-ಘಟಿಕೋತ್ಸವದಲ್ಲಿ (Kannada University) ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ಹಿರಿಯ ಸಾಹಿತಿ ಕೃಷ್ಣಪ್ಪ ಜಿ., ಲೇಖಕ ಎಸ್. ಷಡಕ್ಷರಿ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನಾಡೋಜ ಗೌರವ ಪದವಿಯನ್ನು ಪ್ರದಾ‌ನ ಮಾಡಿದರು.

ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಹಾಸನ ಮೂಲದ ಡಾ.ಸಿ.ಎನ್. ಮಂಜುನಾಥ್‌, ಸಾಹಿತ್ಯ ಕ್ಷೇತ್ರದ ಸಾಧನೆಗೆ ಬೆಂಗಳೂರಿನ ಕೃಷ್ಣಪ್ಪ ಜಿ., ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಚಿಕ್ಕಬಳ್ಳಾಪುರ ಜಿಲ್ಲೆ ತುಳವನೂರು ಗ್ರಾಮದ ಎಸ್. ಷಡಕ್ಷರಿ ಅವರಿಗೆ ನಾಡೋಜ ಗೌರವ ಪದವಿ ನೀಡಲಾಗಿದೆ.

ನಂತರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮಾತನಾಡಿ, ಭಾರತದ ಸಾಂಸ್ಕೃತಿಕ ಮತ್ತು ಜ್ಞಾನಪರಂಪರೆಯ ಗತವೈಭವವನ್ನು ಮರು ಸ್ಥಾಪಿಸಬೇಕಿದೆ. ಇದಕ್ಕಾಗಿ ಏಕ ಭಾರತ, ಶ್ರೇಷ್ಠ ಭಾರತ ಧ್ಯೇಯವಾಕ್ಯದೊಂದಿಗೆ ನಾವು ಮುನ್ನಡೆಯಬೇಕಿದೆ. ಭಾರತದ ಸಾಂಸ್ಕೃತಿಕ ವೈಭವವನ್ನು ಮರು ಸ್ಥಾಪಿಸಲು ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿರುವ ಜ್ಞಾನವನ್ನು ಪುನರುಜ್ಜೀವನಗೊಳಿಸಿ ಮುನ್ನಡೆಯಬೇಕಿದೆ ಎಂದರು.

ಕನ್ನಡ ವಿಶ್ವವಿದ್ಯಾಲಯ ವಿಶೇಷ ಶೈಕ್ಷಣಿಕ ಶೈಲಿಯನ್ನು ಅಳವಡಿಸಿಕೊಂಡಿದ್ದು, ಭವಿಷ್ಯದ ಅಗತ್ಯ ಮತ್ತು ಅದರ ಅನುಸಾರ ಸ್ವದೇಶಿ ಪಾರಂಪರಿಕ ಜ್ಞಾನದ ವಿಕಸನಗೊಳಿಸಲು ಬದ್ಧವಾಗಿದೆ. ಇದು ಕೇವಲ ಜ್ಞಾನ ಬೋಧಿಸುವ ವಿಶ್ವವಿವಿದ್ಯಾಲಯವಾಗದೇ, ಜ್ಞಾನ ಸೃಜಿಸುವ ವಿವಿಯಾಗಿದೆ. ವಿವಿಯ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ 5 ಸಾವಿರ ಹಸ್ತಪ್ರತಿಗಳ ಸಂಗ್ರಹವಿದೆ ಎಂದು ಗೊತ್ತಾಗಿದ್ದು, ಇದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಇದಕ್ಕಾಗಿ ವಿವಿ ಪರಿವಾರವನ್ನು ಅಭಿನಂದಿಸುತ್ತೇನೆ. ವಿವಿಯ ಮೊದಲ ಕುಲಪತಿ ಡಾ. ಚಂದ್ರಶೇಖರ ಕಂಬಾರ ಅವರ ಆಶಯದಂತೆ ವಿವಿ ಮುನ್ನಡೆಯತ್ತಿರುವುದು ಅತ್ಯಂತ ಹರ್ಷದಾಯಕ ಸಂಗತಿಯಾಗಿದೆ ಎಂದು ತಿಳಿಸಿದರು.

ಭಾರತವನ್ನು ಜ್ಞಾನದ ವಿಶ್ವಗುರು ಮಾಡಲು ನಾವೆಲ್ಲರೂ ಶ್ರಮಿಸಬೇಕಿದೆ. ಇದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ(ಎನ್‌ಇಪಿ) ಮಾತೃಭಾಷೆ ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದೆ. ಇದರಿಂದ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯ ಮತ್ತು ನವ ಭಾರತದ ನಿರ್ಮಾಣಕ್ಕೆ ನಿರ್ಣಾಯಕವಾಗಲಿದೆ. ಕನ್ನಡ ವಿಶ್ವವಿದ್ಯಾಲಯ ಮಾತೃಭಾಷೆಯ ಅಧ್ಯಯನದ ಜತೆಗೆ ಇಷ್ಟದ ವಿಷಯಗಳನ್ನು ಕಲಿಯುವ ಸ್ವಾತಂತ್ರ್ಯವನ್ನು ನೂತನ ಶಿಕ್ಷಣ ನೀತಿ ನೀಡಲಿದ್ದು, ಎಲ್ಲರಿಗೂ ಉನ್ನತ ಶಿಕ್ಷಣ ನೀಡುವುದು ಇದರ ಲಕ್ಷ್ಯವಾಗಿದೆ ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ವ ಹಾಗೂ ದೇಶದಲ್ಲಿ ನಡೆಯತ್ತಿರುವ ವಿದ್ಯಮಾನಗಳಿಗೆ ಮುಖಾಮುಖಿಯಾಗಿ ವರ್ತಮಾನದಲ್ಲಿ ವೈಜ್ಞಾನಿಕ ತಳಹದಿಯ ಮೇಲೆ ನಮ್ಮ ದೇಶೀಯ ಪರಂಪರೆಯನ್ನು ಅಧ್ಯಯನ ಮಾಡುತ್ತಿರುವುದು ಮಾದರಿಯಾಗಿದೆ. ಕನ್ನಡ ಭಾಷೆಯಲ್ಲೇ ಸಂಶೋಧನೆ ಮಾಡಿ, ಜ್ಞಾನ ಸೃಜಿಸುತ್ತಿರುವುದು ಎಲ್ಲರಿಗೂ ಅನುಕರಣೀಯವಾಗಿದೆ ಎಂದರು.

ವಿವಿಧ ಪದವಿಗಳನ್ನು ಪಡೆದ ಸಂಶೋಧನಾ ವಿದ್ಯಾರ್ಥಿಗಳು ತಂದೆ-ತಾಯಿಗಳನ್ನು ಮರೆಯದೇ, ಅವರಿಗೆ ಗೌರವ ನೀಡಬೇಕು. ಜತೆಗೆ ನಿಮಗೆ ದೊರೆತ ಪದವಿಗೆ ತಕ್ಕುದ್ದಾಗಿ ನಡೆದುಕೊಂಡು, ಭಾರತವನ್ನು ಶ್ರೇಷ್ಠ ಹಾಗೂ ಶಕ್ತಿಶಾಲಿ ಮತ್ತು ಜ್ಞಾನದ ಗುರುವನ್ನಾಗಿ ಮಾಡಲು ಮುಂದಿನ ಪೀಳಿಗೆಗೆ ಜ್ಞಾನ ಪಸರಿಸಬೇಕು ಎಂದು ಹೇಳಿದರು. ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌ ಮತ್ತಿತರ ಗಣ್ಯರು ಹಾಜರಿದ್ದರು.

ಇದನ್ನೂ ಓದಿ | Vistara Impact | ಬಳ್ಳಾರಿಯಲ್ಲಿ ರಸ್ತೆ ಕಾಮಗಾರಿ ಪರಿಶೀಲಿಸಿದ ಮೇಯರ್‌; ವೀಕ್ಷಕ ವರದಿಗಾರನ ವರದಿಗೆ ತ್ವರಿತ ಸ್ಪಂದನೆ

Exit mobile version