ಉಡುಪಿ: “ಕಾಂತಾರ..” ಸದ್ಯ ಹೆಚ್ಚು ಟ್ರೆಂಡಿಂಗ್‌ನಲ್ಲಿರುವ ಹೆಸರು. ಗಲ್ಲಿ ಗಲ್ಲಿಯಿಂದ ಹಿಡಿದು ದೇಶ-ವಿದೇಶದವರೆಗೆ ಕಾಂತಾರ (Kantara Movie) ಸದ್ದು ಮಾಡುತ್ತಿದೆ. ಜನರು ಭಿನ್ನ-ವಿಭಿನ್ನವಾಗಿ ಈ ಸಿನಿಮಾವನ್ನು ಸಂಭ್ರಮಿಸುತ್ತಿದ್ದಾರೆ. ಈಗ ಆಟೋ ಚಾಲಕರೊಬ್ಬರು ದೀಪಾವಳಿ ಪ್ರಯುಕ್ತ ಆಟೋವನ್ನು ಕಾಂತಾರ ಮಾದರಿ ಸಿಂಗರಿಸಿದ್ದು, ಇಡೀ ದಿನ ಉಚಿತ ಸೇವೆ ನೀಡಿದ್ದಾರೆ.
ಇಲ್ಲಿನ ಕಟಪಾಡಿಯ ಆಟೋ ಚಾಲಕ ಜಯಕರ್ ಎಂಬುವವರು ದೀಪಾವಳಿ ಹಬ್ಬದಲ್ಲಿ ಕಾಂತರಾ ಸಿನಿಮಾವನ್ನು ವಿಶೇಷ ರೀತಿಯಲ್ಲಿ ಪ್ರಚಾರ ಮಾಡಿದ್ದಾರೆ. ಪ್ರತಿ ವರ್ಷ ಆಯುಧ ಪೂಜೆಯ ದಿನ ವಿಶಿಷ್ಟವಾಗಿ ಆಟೋ ಅಲಂಕರಿಸುವ ಅವರು, ಕೋವಿಡ್ ಸಂದರ್ಭದಲ್ಲಿ ಈ ಸಾಂಕ್ರಾಮಿಕ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈಗ ತಮ್ಮ ಆಟೋವನ್ನೇ ಸಿಂಗರಿಸುವ ಮೂಲಕ ಕಾಂತಾರದ ಮಹತ್ವವನ್ನು ಸಾರಿದ್ದಾರೆ.
ಈ ಬಾರಿ ಕಾಂತಾರ ಸಿನಿಮಾ ಪ್ರೇರಣೆಗೊಂಡ ಜಯಕರ್ ತಮ್ಮ ಆಟೋಗೆ ವಿಭಿನ್ನವಾಗಿ ಅಲಂಕಾರ ಮಾಡಿದ್ದಾರೆ. ಹಲವು ಬಗೆಯ ಎಲೆಗಳನ್ನು ಆಟೋಗೆ ಅಂಟಿಸಿ, ಐದಾರು ಹೂವುಗಳನ್ನು ಅದಕ್ಕೆ ಸಿಂಗರಿಸಿ, ಆಟೋ ಮುಂದೆ ಕಾಂತಾರ ಪೋಸ್ಟರ್ ಹಾಕಿ ದೀಪಾವಳಿಯ ಶುಭಾಶಯವನ್ನು ಕೋರಿದ್ದಾರೆ. ಜತೆಗೆ ಸಿನಿಮಾದಲ್ಲಿ ರಿಷಬ್ ಶೆಟ್ಟಿಯ ವೇಷ-ಭೂಷಣದಂತೆ ತಾವು ತಲೆಗೆ ಪೇಟಾ ಕಟ್ಟಿಕೊಂಡು ಮಿಂಚಿದ್ದಾರೆ.
ದೀಪಾವಳಿ ಪ್ರಯುಕ್ತ ಒಂದು ದಿನ ಗ್ರಾಹಕರಿಗೆಲ್ಲ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆಟೋದಲ್ಲಿ ಕುಳಿತ ಪ್ರಯಾಣಿಕರು ಹೊಸ ಅನುಭವ ಪಡೆದು ಫೋಟೊ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ.
ಇದನ್ನೂ ಓದಿ | Kantara movie | ಕಾರ್ಯಕರ್ತರಿಗಾಗಿ ಕಾಂತಾರ ಉಚಿತ ಶೋ; ಥಿಯೇಟರ್ ಬುಕ್ ಮಾಡಿದ ಶಾಸಕ!