Site icon Vistara News

ಕನ್ನಡ ನಾಮಫಲಕಕ್ಕೆ ಆಗ್ರಹ; ಡಿ.27ಕ್ಕೆ ಬೆಂಗಳೂರಿನಲ್ಲಿ ಕರವೇ ಬೃಹತ್ ಪ್ರತಿಭಟನಾ ಮೆರವಣಿಗೆ

Kannada nameplate mandatory. BBMP Commissioner Tushar Girinath, Karve Narayana Gowda

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಲು ಆಗ್ರಹಿಸಿ ಡಿಸೆಂಬರ್ 27ರಂದು ಕರ್ನಾಟಕ ರಕ್ಷಣಾ ವೇದಿಕೆ ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಗೇಟ್ ಬಳಿಯಿಂದ ದೊಡ್ಡ ಮೆರವಣಿಗೆ ಇಟ್ಟುಕೊಂಡಿದೆ. ಅಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ತೆರಳಲಿದೆ. #ಕನ್ನಡದಲ್ಲಿನಾಮಫಲಕ (Kannada name boards) ಇಲ್ಲದಿದ್ದರೆ ಆಗುವ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ. ಇದು ನನ್ನ ಅಂತಿಮ ಎಚ್ಚರಿಕೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ನಾಮಫಲಕ ಅಳವಡಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಆಗಿದ್ದೇ ಆಯಾ ಭಾಗದ ನುಡಿಪರಂಪರೆಯನ್ನು ರಕ್ಷಿಸಲು, ಗೌರವಿಸಲು. ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡಕ್ಕೆ ಅಗೌರವ. ಇದನ್ನು ಹೇಗೆ ಸಹಿಸುವುದು, ಯಾಕಾಗಿ ಸಹಿಸುವುದು? ನಾವು ಹಿಂದಿ ರಾಜ್ಯಗಳಲ್ಲಿ ಕನ್ನಡ ನಾಮಫಲಕ ಕೇಳುತ್ತಿದ್ದೇವೆಯೇ? ನಮ್ಮ ನಾಡಿನಲ್ಲೇ ನಮ್ಮ ನುಡಿ ಸೊರಗಬೇಕೇ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳು ಇರಬೇಕು ಎಂಬುದು ಕನಿಷ್ಠ ಸಾಮಾನ್ಯ ಜ್ಞಾನ. ಆದರೆ ಕರ್ನಾಟಕವನ್ನು ಕಬಳಿಸಲು ಹೊರಟ ಶಕ್ತಿಗಳು ಬೇಕೆಂದೇ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿವೆ. ಅದಕ್ಕಾಗಿಯೇ ನಾವು #ಕನ್ನಡದಲ್ಲಿ ನಾಮಫಲಕ ಆಂದೋಲನಕ್ಕೆ ಕೈ ಹಾಕಿದ್ದೇವೆ. ಕೊನೆಯ ನಾಮಫಲಕ ಬದಲಾಗುವವರೆಗೆ ಈ ಆಂದೋಲನ ನಿಲ್ಲುವುದಿಲ್ಲ.

ಇದನ್ನೂ ಓದಿ | ಡಿ. 26ರಂದು ಟಿ.ಎ. ನಾರಾಯಣ ಗೌಡರಿಗೆ ʼಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿʼ ಪ್ರದಾನ

ನಾನು ಯಾವ ಭಾಷೆಯ ವಿರೋಧಿಯಲ್ಲ. ಯಾವ ಭಾಷಿಕರ ವಿರೋಧಿಯೂ ಅಲ್ಲ. ಆದರೆ ಪದೇ ಪದೇ ಕನ್ನಡಕ್ಕೆ, ಕನ್ನಡಿಗರಿಗೆ ಅಪಮಾನ ಆಗುವುದನ್ನು ಸಹಿಸುವುದಿಲ್ಲ. #ಕನ್ನಡದಲ್ಲಿ ನಾಮಫಲಕ ಹಾಕದವರು ಕನ್ನಡದ್ರೋಹಿಗಳು, ನಾಡದ್ರೋಹಿಗಳು. ಅವರಿಗೆ ಈ ನಾಡಿನಲ್ಲಿ ಇರುವ ಯೋಗ್ಯತೆ ಇಲ್ಲ. ಇಂಥವರ ವಿರುದ್ಧ ನಮ್ಮ ಹೋರಾಟವೇ ಹೊರತು, ಯಾವುದೇ ಭಾಷೆ,ಭಾಷಿಕರ ವಿರುದ್ಧವಲ್ಲ ಎಂದು ತಿಳಿಸಿದ್ದಾರೆ.

ಕನ್ನಡದಲ್ಲಿ ನಾಮಫಲಕ ಹಾಕಿ ಎಂದು ಮನವಿ ಪತ್ರ ನೀಡಿದ್ದಕ್ಕೆ ನನ್ನ ಮೇಲೆ, ನನ್ನ ಸಂಘಟನೆಯ ಮುಖಂಡರ ಮೇಲೆ ಮಾಲ್ ಒಂದರ ಮಾಲೀಕ ದೂರು ದಾಖಲಿಸಿದ್ದಾನೆ. ದುಡ್ಡಿನ ದುರಹಂಕಾರ ಇವರನ್ನು ಎಲ್ಲಿಗೆ ತಂದು ನಿಲ್ಲಿಸಿದೆ ನೋಡಿ. ಈ ದುರಹಂಕಾರಿಗಳಿಗೆ ಯಾವ ಭಾಷೆಯಲ್ಲಿ ಉತ್ತರ ಕೊಡಬೇಕೋ ಅದನ್ನು ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿವರ್ಷ ರಾಜ್ಯೋತ್ಸವ ತಿಂಗಳಲ್ಲಿ ಕನ್ನಡದಲ್ಲಿ ನಾಮಫಲಕ ಹಾಕಬೇಕು ಎಂಬ ಕೂಗು ಕನ್ನಡಿಗರಿಂದ ಏಳುತ್ತದೆ. ಇನ್ನೆಷ್ಟು ವರ್ಷ ಇದನ್ನೇ ಹೇಳಿಕೊಂಡಿರುವುದು. ಇನ್ನೆಂದೂ ನಾಮಫಲಕದ ವಿಷಯವೇ ಬರಬಾರದು. ಕರ್ನಾಟಕದ ಎಲ್ಲ ನಾಮಫಲಕಗಳು ಕನ್ನಡೀಕರಣವಾಗಬೇಕು. ಆಗದಿದ್ದರೆ ಅದನ್ನು ಹೇಗೆ ಮಾಡುವುದೆಂಬುದು ನಮಗೆ ಗೊತ್ತಿದೆ.

ಕರ್ನಾಟಕ ಸರ್ಕಾರ ಜಾರಿಗೆ ತಂದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಎಲ್ಲ ಅಂಗಡಿ ಮುಂಗಟ್ಟುಗಳ ಮೇಲೂ ಕನ್ನಡದ ನಾಮಫಲಕವೇ ದೊಡ್ಡದಾಗಿರಬೇಕು ಎಂದು ಹೇಳುತ್ತದೆ. ಈ ನೆಲದ ಕಾಯ್ದೆ ಕಾನೂನು ಪಾಲಿಸದವರು ಕರ್ನಾಟಕದಲ್ಲಿ ಇರಲು ಯೋಗ್ಯರಲ್ಲ. ಕಾನೂನು ಪಾಲಿಸುವ ಮನಸು ಇಲ್ಲದಿದ್ದರೆ ತಮ್ಮ ತಮ್ಮ ರಾಜ್ಯಗಳಿಗೆ ಹೋಗಿಬಿಡಲಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | KCC Cup 2023: ಕೆಸಿಸಿ ಕಪ್‌ ದೇಶದಲ್ಲೇ ವಿನೂತನ ಪ್ರಯತ್ನ: ಡಿಕೆಶಿ ಮೆಚ್ಚುಗೆ

ಕನ್ನಡಿಗರು ಇತರೆ ರಾಜ್ಯಗಳಿಗೆ ಹೋದಾಗ ಅಲ್ಲಿನ ನುಡಿ, ಸಂಸ್ಕೃತಿಗಳನ್ನು ಗೌರವಿಸುತ್ತ ಬದುಕುತ್ತಿದ್ದಾರೆ. ಆದರೆ ಕರ್ನಾಟಕಕ್ಕೆ ಬರುವ ಉತ್ತರ ಭಾರತೀಯರೇಕೆ ಕನ್ನಡವನ್ನು ಗೌರವಿಸುತ್ತಿಲ್ಲ, ಕರ್ನಾಟಕವನ್ನು ಗೌರವಿಸುತ್ತಿಲ್ಲ? ಕನ್ನಡದ ನೆಲ, ಜಲ, ಸಂಪತ್ತು ಬೇಕು, ಕನ್ನಡ ಬೇಡವೆಂದರೆ ಹೇಗೆ? ಕನ್ನಡಿಗರು ಯಾರ ಅಡಿಯಾಳುಗಳಲ್ಲ. ನಮ್ಮ ನೆಲದಲ್ಲಿ ನಾವು ಸಾರ್ವಭೌಮರು. ಇದನ್ನು ಎಲ್ಲರಿಗೂ ನೆನಪಿಸುವ ಕಾಲವಿದು. ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯುವುದು ಕನ್ನಡಿಗನ ಹಕ್ಕು. ಯಾರಾದರೂ ನಿರಾಕರಿಸಿದರೆ ಅದನ್ನು ಸಹಿಸಿಕೊಂಡಿರಬೇಡಿ. #ಕನ್ನಡದಲ್ಲಿನಾಮಫಲಕ ಇಲ್ಲದಿದ್ದರೆ ಪ್ರಶ್ನಿಸುವುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version