| ಡಾ. ಎಸ್.ಆರ್. ಲೀಲಾ, ಮಾಜಿ ಎಂಎಲ್‌ಸಿ
ಹಿರಿಯ ರಂಗಕರ್ಮಿ, ನಾಟಕಕಾರ, ನಿಕಟಪೂರ್ವ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ರಚನೆ, ಪರಿಕಲ್ಪನೆ, ವಿನ್ಯಾಸ, ರಂಗಪ್ರಯೋಗದಲ್ಲಿ ಅ.25ರಿಂದ 27ರವರೆಗೆ ಬೆಂಗಳೂರಿನ ಕಲಾಗ್ರಾಮದ ರಂಗಮಂದಿರದಲ್ಲಿ ʼಕರಿನೀರ ವೀರʼ ನಾಟಕ ಪ್ರದರ್ಶನಗೊಂಡಿದ್ದು, ನಾಟಕವನ್ನು ಮೈಸೂರಿನ ಸಾವರ್ಕರ್ ಪ್ರತಿಷ್ಠಾನ ಪಸ್ತುತಪಡಿಸಿತು.
ಭಾರತದ ಇತಿಹಾಸಕ್ಕೆ ಸಂಬಂಧಿಸಿದ ಸಾವರ್ಕರ್ ಅವರ ಎರಡು ಕೃತಿಗಳನ್ನು (ಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳು ಹಾಗೂ ಹಿಂದೂ ಪದ-ಪಾದಶಾಹಿ) ಕನ್ನಡಕ್ಕೆ ಅನುವಾದಿಸುವ ಮೂಲಕ ಸಾವರ್ಕರ್ (Veer savarkar) ಅವರನ್ನು ಸಾಕಷ್ಟು ಪರಿಚಯಿಸಿಕೊಂಡಿರುವ ನನಗೆ, ಮೊದಲ ಪ್ರದರ್ಶನ ನೋಡುವ ಹಂಬಲ, ಕುತೂಹಲ ಇತ್ತು. ಮುಂಗಡ ಟಿಕೆಟ್ ಕಾಯ್ದಿರಿಸಿ ಮೊದಲ ದಿನವೇ ಹೋಗಿ ನಾಟಕ ನೋಡಿದೆ.
ಆರು ಗಂಟೆಯಿಂದ ಒಂಬತ್ತು ಗಂಟೆಯವರೆಗೆ ಮೂರು ಗಂಟೆಗಳು ಸರಿದದ್ದೇ ಗೊತ್ತಾಗಲಿಲ್ಲ. ಸಾವರ್ಕರ್ ಅವರ ರಾಜಕೀಯ ಬದುಕು. ಘೋರ ಕರಿನೀರಿನ ಶಿಕ್ಷೆ ಅನುಭವಿಸಿದ್ದು, ನೇತಾಜಿ ಸುಭಾಷ್‌ರಂಥ ಮಹಾಸೇನಾನಿಗಳಿಗೆ ಸ್ಫೂರ್ತಿ ಹಾಗೂ ಮಾರ್ಗದರ್ಶನ ನೀಡಿದ್ದು, ಅದ್ಭುತವಾದ ಗ್ರಂಥಗಳನ್ನು ರಚಿಸಿದ್ದು, ಸ್ವಾತಂತ್ರ್ಯಾ ನಂತರ ಕಾಂಗ್ರೆಸ್‌ನ ಕುತಂತ್ರಕ್ಕೆ ಒಳಗಾಗಿ ಮತ್ತೆ ಮತ್ತೆ ಪೆಟ್ಟು ತಿಂದದ್ದು, ಜಾತಿ ವೈಷಮ್ಯ-ಅಸ್ಪಶ್ಯತೆಗಳ ನಿವಾರಣೆಗಾಗಿ ಮಾಡಿದ ಸಾಮಾಜಿಕ ಹೋರಾಟ ಇತ್ಯಾದಿ ಒಂದೊಂದು ಕೂಡ ಅಚ್ಚರಿಯನ್ನುಂಟು ಮಾಡುತ್ತದೆ, ಅಸಾಮಾನ್ಯವೆನಿಸುತ್ತದೆ.
ಇದನ್ನೂ ಓದಿ | Kannada Pustaka Habba: ನ.1 ರಿಂದ ರಾಷ್ಟ್ರೋತ್ಥಾನ ಸಾಹಿತ್ಯದ ʼಕನ್ನಡ ಪುಸ್ತಕ ಹಬ್ಬʼ
ಸಾವರ್ಕರ್ ಅವರ 83 ವರ್ಷಗಳ ಅತ್ಯಂತ ಸಂಘರ್ಷಮಯ ಬದುಕನ್ನು ಮೂರು ಗಂಟೆಗಳ ಅವಧಿಯಲ್ಲಿ ಕಟ್ಟಿ ಕೊಡುವುದು ಅಸಾಧ್ಯ! ಅಪಾರವಾದ ಸಾಧನೆಗಳು, ಸಂಗತಿಗಳು, ಘಟನಾವಳಿಗಳು, ಕ್ಲೇಶಗಳಿಂದ ತುಂಬಿರುವ ಬದುಕು ಅವರದು. ಆದರೆ, ಅಡ್ಡಂಡ ಕಾರ್ಯಪ್ಪನವರ ಈ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಲೇಬೇಕು.
ಕಾಲಾಪಾನಿ ಅಥವಾ ಅಂಡಮಾನಿನ ಸೆಲ್ಯುಲಾರ್ ಬಂದೀಖಾನೆಯಲ್ಲಿ ಕೊಳೆಯುವುದಕ್ಕೆ ಇನ್ನೊಂದು ಹೆಸರೇ ಕರಿನೀರ ಶಿಕ್ಷೆ. ಕಳ್ಳ, ಸುಳ್ಳ, ಅತ್ಯಾಚಾರಿಗಳನ್ನು ನಡೆಸಿಕೊಂಡಂತೆಯೇ ಒಬ್ಬ ಮೇಧಾವಿ ಕೃತಿಕಾರ ಬ್ಯಾರಿಸ್ಟರ್ ಅವರನ್ನು ಅತ್ಯಂತ ಹೇಯವಾಗಿ ನಡೆಸಿಕೊಳ್ಳಲಾಯಿತು. ಹಗ್ಗ ಹೊಸೆದು. ಎಣ್ಣೆ ತೆಗೆದು, ಪ್ರಾಣಿಗಳು ತಿನ್ನಲೂ ಹೇಸುವ ಆಹಾರವನ್ನು ತಿಂದು, ಜೀವವನ್ನೇ ಪಣವಾಗಿಟ್ಟರು ಸಾವರ್ಕರ್. ಮುಸಲ್ಮಾನ್ ಜೈಲರ್ ಮತ್ತು ಐರಿಷ್ ಮೇಲಧಿಕಾರಿಗಳ ಬೈಗುಳ, ಅಪಮಾನ, ದೈಹಿಕ-ಮಾನಸಿಕ ಶಿಕ್ಷೆ ಇವೆಲ್ಲವನ್ನೂ ಅನುಭವಿಸಿ ನರಕ ಸದೃಶ ಶಿಕ್ಷೆಯಿಂದ ಬದುಕಿ ಬಂದದ್ದೇ ಒಂದು ಸೋಜಿಗ! ಇದು ರಂಗಪ್ರಸ್ತುತಿಯಲ್ಲಿ ನಮ್ಮ ಅನುಭವಕ್ಕೆ ಬರುತ್ತದೆ.
ಸುಮಾರು 20 ನಟರು ವಿವಿಧ ಪಾತ್ರಗಳಲ್ಲಿ ರಂಗದ ಮೇಲೆ ಕಾಣಿಸಿಕೊಳ್ಳುತ್ತಾರೆ. ನಟರ ಮನೋಜ್ಞವಾದ ಅಭಿನಯ. ಸಮರ್ಥವಾದ ಸಂಭಾಷಣಾಭಿವ್ಯಕ್ತಿ (ಡೈಲಾಗ್ ಡೆಲಿವರಿ), ಸೂಕ್ತವಾದ ವಸ್ತ್ರವಿನ್ಯಾಸ, ಸರಳವಾದರೂ ಬಹು ಆಕರ್ಷಕವಾದ ದೃಶ್ಯ-ದೃಶ್ಯಕ್ಕೂ ವೈವಿಧ್ಯದಿಂದ ಕೂಡಿದ ವಿನೂತನ ರಂಗತಂತ್ರದ ಬಳಕೆಯು ಪ್ರಯೋಗವನ್ನು ಗೆಲುವಾಗಿಸಿತ್ತು. ಐತಿಹಾಸಿಕವಾದ ವಿಚಾರಗಳನ್ನು, ಸಂಗತಿಗಳನ್ನು ನಿರೂಪಿಸುವಾಗ ಪ್ರೊಜೆಕ್ಟರ್ ಮೂಲಕ ಬಿತ್ತರಿಸಿದ್ದು, ಪ್ರೇಕ್ಷಕರ ಮನಮುಟ್ಟುವಲ್ಲಿ, ಉತ್ತಮ ರಂಗಾನುಭವ ನೀಡುವಲ್ಲಿ ಯಶಸ್ವಿಯಾಯಿತು. ಉದಾಹಾರಣೆಗೆ ವೀರ ಸಾವರ್ಕರ್ ಸಮುದ್ರಕ್ಕೆ ಹಾರಿದ್ದು, ಮಾಜಿ ಪ್ರಧಾನಿ ವಾಜಪೇಯಿ ಅವರು ಸಾವರ್ಕರ್ ಕುರಿತು ಮಾಡಿದ ಅಮೋಘ ಭಾಷಣ ಇವುಗಳನ್ನು ಪರದೆಯ ಮೇಲೆ ಸಂದರ್ಭೋಚಿತವಾಗಿ ತೋರಿಸಿದ್ದು ಆಕರ್ಷಕವಾಗಿತ್ತು.
ಪ್ರಯೋಗದ ಯಶಸ್ಸಿಗೆ ಕಾರಣವಾದ ಮತ್ತೊಂದು ಅಂಶವನ್ನೂ ಹೇಳಬೇಕು. ಸುಭಾಷ್ ಚಂದ್ರ ಬೋಸ್, ವಾಜಪೇಯಿ ಮುಂತಾದ ಪಾತ್ರಗಳ ಆಯ್ಕೆಯಲ್ಲಿ (ಕ್ಯಾಸ್ಟಿಂಗ್) ಆ ಪಾತ್ರಗಳಿಗೆ ಒದುವ ಮುಖಚಹರೆವುಳ್ಳವರನ್ನು ಆರಿಸಿಕೊಂಡಿದ್ದು ಅತ್ಯಂತ ಸಮಂಜಸವಾಗಿತ್ತು. ತರುಣ ಸಾವರ್ಕರ್ ಮತ್ತು ಹಿರಿಯ ವಯೋಮಾನದ ಸಾವರ್ಕರ್ ಪಾತ್ರವನ್ನು ಇಬ್ಬರು ಪಾತ್ರಧಾರಿಗಳು ಅತ್ಯಂತ ಆಕರ್ಷಕವಾಗಿ ನಿರ್ವಹಿಸಿದರು. ಇಡೀ ನಾಟಕದಲ್ಲಿ ಇದ್ದದ್ದು, ಒಂದೇ ಸ್ತ್ರೀ ಪಾತ್ರ. ಈ ನಾಟಕಕ್ಕೆ ವಸ್ತ್ರವಿನ್ಯಾಸ ಮಾಡಿದ ಹಾಗೂ ಸ್ವತಃ ರಂಗಕರ್ಮಿಯೂ ಆದ ಹಿರಿಯ ನಟಿ ಅಡ್ಡಂಡ ಕಾರ್ಯಪ್ಪ ಅವರ ಪತ್ನಿ ಅನಿತಾ ಅವರು, ಸಾವರ್ಕರ್ ಪತ್ನಿ ಯಮುನಾ ಬಾಯಿಯಾಗಿ ಸಹಜವಾದ ಮನಮುಟ್ಟುವ ಅಭಿನಯ ನೀಡಿದರು.
ಒಂದು ರಂಗಪ್ರಯೋಗ ಕಳೆಗಟ್ಟಲು ಅನೇಕ ಅಂಶಗಳು ಬೆಸೆದುಕೊಳ್ಳಬೇಕಷ್ಟೆ, ಇದರಲ್ಲಿ ಸಂಗೀತ ಮತ್ತು ಬೆಳಕು ಬಹು ಪ್ರಮುಖ ಪಾತ್ರವಹಿಸುತ್ತವೆ. ‘ಕರಿನೀರ ವೀರ’ ಈ ನಾಟಕದಲ್ಲಿ ಈ ಮುಖ್ಯ ಅಂಶಗಳು ಹದವಾಗಿ ಬೆರೆತು ಒಟ್ಟಾರೆ ಪ್ರಸ್ತುತಿ ಅತ್ಯಂತ ತೃಪ್ತಿದಾಯಕವಾಗಿತ್ತು. ಬ್ರಿಟಿಷ್ ಪಾರತಂತ್ರ್ಯದ ಪಾಶವೀ ಆಡಳಿತದಲ್ಲಿ ಒಬ್ಬ ಮಹಾನ್ ಮೇಧಾವಿ, ಕ್ರಾಂತಿಕಾರಿಯ ಬದುಕು ಅದೆಷ್ಟು ಘೋರವಾಗಿತ್ತು ಎಂಬುದನ್ನು ಕರಿನೀರ ವೀರ ಅಮೋಘವಾಗಿ ಕಟ್ಟಿಕೊಟ್ಟಿದೆ.
ನಾಟಕವನ್ನು ರಚಿಸಿ, ಬಹು ಪ್ರಯಾಸಪಟ್ಟು ಪ್ರಯೋಗಕ್ಕೂ ಅಳವಡಿಸಿದ ಅಡ್ಕೊಂಡ ಕಾರ್ಯಪ್ಪನವರ ರಂಗನಿಷ್ಠೆ, ರಾಷ್ಟ್ರನಿಷ್ಠೆ ಹಾಗೂ ಪ್ರತಿಭೆ ಈ ಮೂರೂ ಮುಪ್ಪುರಿಗೊಂಡು ನೋಡುಗರ ಆಂತರ್ಯವನ್ನು ತಟ್ಟುತ್ತಿತ್ತು. ನಾಟಕದ ಮಧ್ಯ ಬೀಳುತ್ತಿದ್ದ ಚಪ್ಪಾಳೆಯ ಸುರಿಮಳೆ ಪ್ರೇಕ್ಷಕರನ್ನು ಹಾಗೂ ಪ್ರಯೋಗವನ್ನೂ ಏಕಸೂತ್ರದಲ್ಲಿ ಬಂಧಿಸಿ ನಾಟಕಕಾರರ ರಂಗಕೌಶಲವನ್ನು ಸಾರಿ ಹೇಳುತ್ತಿತ್ತು.
ಇದನ್ನೂ ಓದಿ | Raja Marga Column : ಊರ ಕೆಸರು ಕ್ಲೀನ್ ಮಾಡೋದು ಸಾಧ್ಯವಿಲ್ಲ, ಕಾಲಿಗೆ ಚಪ್ಪಲಿ ಹಾಕೋಬೇಕು ಅಷ್ಟೆ!
ವೀರ ಸಾವರ್ಕರ್ ಅವರ ಕುರಿತ ಮೊದಲ ಕನ್ನಡ ನಾಟಕವನ್ನು ಅತ್ಯಂತ ಸಮರ್ಪಕವಾಗಿ ಪ್ರಯೋಗಿಸಿದ ಕಾರ್ಯಪ್ಪ ಮತ್ತು ಅವರ ತಂಡ ಎಲ್ಲರ ವಂದನೆ ಮತ್ತು ಅಭಿನಂದನೆಗಳಿಗೆ ಪಾತ್ರವಾಗಿದೆ. ಹಾಗೆಯೇ ಧನ್ಯವಾದಗಳನ್ನೂ ಸಹ ಸಲ್ಲಿಸಬೇಕು.