Site icon Vistara News

Karnataka Budget 2023: ಮಹಿಳಾ ಸಬಲೀಕರಣ ಯೋಜನೆಗಳಿಗಾಗಿ 46,278 ಕೋಟಿ ರೂ.ಮೀಸಲು; ಏನೆಲ್ಲ ಸೌಲಭ್ಯಗಳು?

Karnakta Budget 2023 schemes For Women Empowerment

#image_title

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಕೊನೇ ಬಜೆಟ್​ (Karnataka Budget 2023) ಇಂದು ಮಂಡನೆಯಾಗಿದೆ. ಈ ಬಜೆಟ್​ನಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದನ್ನು ಉತ್ತೇಜನ ನೀಡುವ ನಿಟ್ಟಿನಲ್ಲಿ ಸೌಲಭ್ಯಗಳನ್ನು ಘೋಷಿಸಲಾಗಿದೆ. ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ಮಹಿಳಾ ಆಯವ್ಯಯದಲ್ಲಿ ಒಟ್ಟಾರೆ 46,278 ಕೋಟಿ ರೂ. ಮೀಸಲಿಡಲಾಗಿದೆ.

ಸ್ವ ಸಹಾಯ ಗುಂಪುಗಳಿಗೆ ಪ್ರಮಾಣಿತ ಉತ್ಪನ್ನಗಳನ್ನು ತಯಾರಿಸಲು ನೆರವಾಗುವ ಸ್ತ್ರೀ ಸಾಮರ್ಥ್ಯ ಯೋಜನೆಯಡಿ 50 ಸಾವಿರ ಸ್ವಸಹಾಯ ಗುಂಪುಗಳಿಗೆ ತಲಾ ಒಂದು 1 ಲಕ್ಷ ರೂ. ನಂತೆ ಒಟ್ಟು 500 ಕೋಟಿ ರೂ. ಗಳ ಸಮುದಾಯ ಬಂಡವಾಳ ನಿಧಿ ನೀಡಲು ಕ್ರಮ ವಹಿಸಲಾಗುತ್ತಿದೆ. ಹಾಗೇ, ವಿವಿಧ ಸ್ವಯಂ ಉದ್ಯೋಗ ಯೋಜನೆಗಳಡಿ 7,239 ಸ್ವಸಹಾಯ ಸಂಘಗಳಿಗೆ 108 ಕೋಟಿ ರೂ. ಸಮುದಾಯ ಬಂಡವಾಳ ನಿಧಿ ಹಾಗೂ 5.68 ಲಕ್ಷ ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕ್ ಸಂಪರ್ಕದಡಿ 11,391 ಕೋಟಿ ರೂ. ಸಾಲ ಈಗಾಗಲೇ ಒದಗಿಸಲಾಗಿದ್ದು, ವೈಯಕ್ತಿಕ ಮತ್ತು ಗುಂಪುಗಳನ್ನೊಳಗೊಂಡ 9,688 ಫಲಾನುಭವಿಗಳಿಗೆ ಕಿರು ಉದ್ದಿಮೆ ಪ್ರಾರಂಭಿಸಲು ಬ್ಯಾಂಕ್ ಮೂಲಕ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 45,೦೦೦ ಮಹಿಳಾ ಸ್ವಸಹಾಯ ಗುಂಪುಗಳಿಗೆ 1,800 ಕೋಟಿ ರೂ. ಗಳಷ್ಟು ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ ಗುರಿ ಹೊಂದಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಗೃಹಿಣಿ ಶಕ್ತಿ ಯೋಜನೆ
ಸರ್ಕಾರವು ಪ್ರಸಕ್ತ ಬಜೆಟ್​​ನಲ್ಲಿ ಗೃಹಿಣಿ ಶಕ್ತಿ ಘೋಷಣೆ ಮಾಡಿದ್ದು ‘ಕುಟುಂಬ ನಿರ್ವಹಣೆಯೊಂದಿಗೆ ಮನೆಯ ಆರ್ಥಿಕ ಸುಧಾರಣೆಗಾಗಿ ಶ್ರಮಿಸುವ ಮಹಿಳಾ ಕೃಷಿ ಕಾರ್ಮಿಕರಿಗಾಗಿ ಶ್ರಮ ಶಕ್ತಿ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಅದರಡಿಯಲ್ಲಿ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿತಿಂಗಳೂ ತಲಾ 500 ರೂಪಾಯಿ ಸಹಾಯಧನವನ್ನು ಸರ್ಕಾರ ಡಿಬಿಟಿ ಮೂಲಕ ನೀಡಲಿದೆ. ಗೃಹಿಣಿಯರಿಗೆ ಮನೆಯಲ್ಲಿಯೇ ಲಾಭದಾಯಕ ಉದ್ಯಮ (Home based Industry) ಪ್ರಾರಂಭಿಸಲು ಅನುವಾಗುವಂತೆ ಪ್ರಸಕ್ತ ವರ್ಷದಲ್ಲಿ 1ಒಂದು ಲಕ್ಷ ಮಹಿಳೆಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲು ಸರ್ಕಾರ ಯೋಜನೆ ರೂಪಿಸಿದೆ.

ರಾಜ್ಯದ ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ ಶೇ.50 ರಷ್ಟು ರಿಯಾಯಿತಿ ಬಸ್ ಪಾಸ್ ಸೌಲಭ್ಯವನ್ನು ಸರ್ಕಾರ ಒದಗಿಸಲಿದ್ದು, ಇದಕ್ಕಾಗಿ 1000 ಕೋಟಿ ರೂಪಾಯಿ ಮೀಸಲಿಟ್ಟಿದೆ. ಅಷ್ಟಲ್ಲದೆ, ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ ʻವಿದ್ಯಾವಾಹಿನಿʼ ಎಂಬ ಯೋಜನೆಯಡಿಯಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಉಚಿತ ಬಸ್ ಪಾಸ್ ನೀಡಲಿದೆ. ಇದರಿಂದ ರಾಜ್ಯದಲ್ಲಿನ ಒಟ್ಟು 8 ಲಕ್ಷ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ.
ಸುಮಾರು 30 ಲಕ್ಷ ಮಹಿಳೆಯರಿಗೆ ಈ ಯೋಜನೆ ನೆರವಾಗಲಿದೆ. ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಯಲು ಹೊರತಂದಿರುವ ʻಆರೋಗ್ಯ ಪುಷ್ಟಿʼ ಯೋಜನೆಯಡಿ ಅರ್ಹ ವಿವಾಹಿತ ಮಹಿಳೆಯರಿಗೆ ಅಂಗನವಾಡಿಗಳಲ್ಲಿ ಬಿಸಿಯೂಟ ಮತ್ತು Prophylactic IFA ಮಾತ್ರೆಗಳನ್ನು ಜೀವಿತಾವಧಿಯಲ್ಲಿ ಒಂದು ಬಾರಿ ಗರಿಷ್ಠ 6 ತಿಂಗಳ ಅವಧಿಗೆ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಒದಗಿಸುವುದಾಗಿ ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Karnataka Budget 2023 : ಡಿ.ಕೆ ಶಿವಕುಮಾರ್‌ ಕಿವೀಲಿದ್ದ ಚೆಂಡು ಹೂವು ಕಿತ್ತಿದ್ದೇಕೆ ಯಡಿಯೂರಪ್ಪ? ಅಲ್ಲಿ ಏನಾಯಿತು?

ಆ್ಯಸಿಡ್​ ದಾಳಿ ಸಂತ್ರಸ್ತೆಯರಿಗೆ ಮಾಸಾಶನ ಹೆಚ್ಚಳ
ಆ್ಯಸಿಡ್​ ದಾಳಿ ಸಂತ್ರಸ್ತ ಮಹಿಳೆಯರಿಗೆ ನೀಡಲಾಗುತ್ತಿರುವ ಮಾಸಾಶನವನ್ನು 3,000 ರೂ. ದಿಂದ 10,000 ರೂ. ಗಳಿಗೆ ಹೆಚ್ಚಿಸಲಾಗಿದೆ. ಇವರಿಗೆ ಬದುಕಿನಲ್ಲಿ ಇನ್ನಷ್ಟು ಭದ್ರತೆಯನ್ನು ಒದಗಿಸಲು ರಾಜೀವ್ ಗಾಂಧಿ ವಸತಿ ನಿಗಮದಿಂದ ವಸತಿ ಸೌಲಭ್ಯ ಮತ್ತು ಸ್ವಯಂ ಉದ್ಯೋಗಕ್ಕಾಗಿ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು. ಉತ್ಕೃಷ್ಟ ಚಿಕಿತ್ಸೆ ಮತ್ತು ಕಾನೂನು ನೆರವು ನೀಡಲು ಮಹಿಳಾ ಅಭಿವೃದ್ಧಿ ನಿಗಮದಲ್ಲಿ ವಿಶೇಷ ನಿಧಿ ಸ್ಥಾಪಿಸಲಾಗುವುದು ಎಂದು ಸಿಎಂ ಬಜೆಟ್​ ಮಂಡನೆ ವೇಳೆ ತಿಳಿಸಿದ್ದಾರೆ.

ಮಹಿಳಾ ಸಬಲೀಕರಣದ ಇನ್ನಷ್ಟು ಯೋಜನೆಗಳು ಹೀಗಿವೆ

  1. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶಾಲೆಯಿಂದ ಹೊರಗುಳಿದ 14-18 ವರ್ಷದ ಪ್ರಾಯ ಪೂರ್ವ ಬಾಲಕಿಯರಿಗೆ, ಪೂರಕ ಪೌಷ್ಟಿಕ ಆಹಾರ ನೀಡುವ ಯೋಜನೆಯನ್ನು ಎಲ್ಲಾ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಿಗೆ ವಿಸ್ತರಣೆ
  2. ರಾಷ್ಟ್ರೀಯ ಶಿಕ್ಷಣ ನೀತಿ ಅನುಗುಣವಾಗಿ ಅಂಗನವಾಡಿ ಕೇಂದ್ರಗಳನ್ನು ಸಜ್ಜುಗೊಳಿಸಲು ಅಗತ್ಯ ಪಠ್ಯವಸ್ತುಗಳನ್ನು ವಿತರಿಸಲು ಹಾಗೂ ಮೇಲ್ವಿಚಾರಕಿಯರು ಮತ್ತು ಕಾರ್ಯಕರ್ತೆಯರಿಗೆ ತರಬೇತಿ ನೀಡಲು 30 ಕೋಟಿ ರೂಪಾಯಿ.
  3. 2023-24ನೇ ಸಾಲಿನಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಉಪಧನ. ಅದಕ್ಕಾಗಿ 40 ಕೋಟಿ ರೂಪಾಯಿ ಅನುದಾನ ಮೀಸಲು.
  4. 25 ವರ್ಷಗಳ ಅರ್ಹತಾ ಸೇವೆಯನ್ನು ಪೂರ್ಣಗೊಳಿಸಿರುವ, ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ 50,000 ರೂಪಾಯಿ ಹಾಗೂ ಅಂಗನವಾಡಿ ಸಹಾಯಕಿಯರಿಗೆ 30,000 ರೂ. ಗಳ ಆರ್ಥಿಕ ಭದ್ರತೆ ಒಂದು ಸಲ ನೀಡಿ, ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸಲಾಗುವುದು.
  5. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ದುಡಿಮೆಯಲ್ಲಿ ತೊಡಗಿಕೊಳ್ಳುವ ಮಹಿಳಾ ಕಾರ್ಮಿಕರ ಅನುಕೂಲಕ್ಕಾಗಿ ನಗರ ಪ್ರದೇಶದಲ್ಲಿ 4,000 ಶಿಶುಪಾಲನಾ ಕೇಂದ್ರಗಳು ಮತ್ತು ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯ ಒಗ್ಗೂಡಿಸುವಿಕೆಯ ಮೂಲಕ 500 ಶಿಶುವಿಹಾರಗಳನ್ನು ಪ್ರಾರಂಭ.
Exit mobile version