ತುಮಕೂರು: ತಮಿಳುನಾಡಿಗೆ ಕಾವೇರಿ ನೀರು (Cauvery water dispute) ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು, ರೈತ ಸಂಘಗಳು ಕರ್ನಾಟಕ ಬಂದ್‌ಗೆ (Karnataka Bandh) ಕರೆ ಕೊಟ್ಟಿವೆ. ತುಮಕೂರಿನಲ್ಲೂ ಪ್ರತಿಭಟನೆ ಬಿಸಿ ಜೋರಾಗಿದೆ. ಕನ್ನಡಪರ ಸಂಘಟನೆ ಮುಖಂಡರು ವಿಭಿನ್ನವಾಗಿ ಪ್ರತಿಭಟನೆಯ ಮೂಲಕ ತಮಿಳುನಾಡು ಸಿಎಂ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ತಮಿಳುನಾಡು ಸಿಎಂ ಸ್ಟಾಲಿನ್‌ರ ಅಣಕು ಶವಯಾತ್ರೆಯ ಮೂಲಕ ಮೆರವಣಿಗೆ ನಡೆಸುತ್ತಿದ್ದಾರೆ. ಚಟ್ಟ ಕಟ್ಟಿ, ಸ್ಟ್ಯಾಲಿನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಅಣುಕು ಶವದ ಎದುರು ಬಾಯಿ ಬಾಯಿ ಬಡಿದುಕೊಂಡು ಕಿಡಿಕಾರಿದ್ದಾರೆ. ನಗರದ ಟೌನ್ ಹಾಲ್ ವೃತ್ತದಿಂದ ಚಟ್ಟ ಹೊತ್ತು, ಜಿಲ್ಲಾಧಿಕಾರಿ ಕಚೇರಿವರೆಗೆ ಕೈಲಾಸರಥದಲ್ಲಿ ಮೆರವಣಿಗೆ ನಡೆಸಿದ್ದಾರೆ. ಪ್ರಾಣ ಕೊಟ್ಟೆವು ಕಾವೇರಿ ನೀರು ಬಿಡೇವು ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ಕೊನೆಯಲ್ಲಿ ಅಣಕುಶವಕ್ಕೆ ಅಗ್ನಿಸ್ಪರ್ಶ ಮಾಡಲಿದ್ದಾರೆ.
ಕರ್ನಾಟಕ ಬಂದ್ ಹಿನ್ನೆಲೆ ತುಮಕೂರು ಜಿಲ್ಲೆಯಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಟೋ ಸಂಚಾರ ಅತೀ ವಿರಳವಾಗಿದ್ದು, ಖಾಸಗಿ ಬಸ್‌ಗಳು ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿವೆ. ಅಂಗಡಿ ಮುಂಗಟ್ಟು ಬಂದ್ ಮಾಡಿ ಮಾಲೀಕರು ಬೆಂಬಲ ನೀಡಿದ್ದಾರೆ. ಇನ್ನು ಕೆಲವು ಖಾಸಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆಯನ್ನು ಮಾಡಲಾಗಿದೆ. ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣಗಳು ಖಾಲಿ ಖಾಲಿ ಆಗಿವೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ