ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ (ಫೆ.೧೭) ಮಂಡಿಸಿದ ಬಜೆಟ್ (Karnataka Budget 2023) ಕೇವಲ ಲೆಕ್ಕ ಪತ್ರದ ಪುಸ್ತಕದಂತಿದ್ದು, ಬಡವರು, ಯುವಕರು, ಮಹಿಳೆಯರು ಮತ್ತು ಕಾರ್ಮಿಕರಿಗೆ ಯಾವುದೇ ನೆರವು ನೀಡದೆ ಬಿಜೆಪಿ ಸುಳ್ಳಿನ ಪಕ್ಷ ಎಂಬುದನ್ನು ಸಾಬೀತು ಮಾಡಿದಂತಿದೆ ಎಂದು ಶಾಸಕರು, ಮಾಜಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಬಿ. ಮಂಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಅವರು ಅಭಿಪ್ರಾಯಪಟ್ಟಿದ್ದಾರೆ.
“ಬಜೆಟ್ ಅಂದರೆ ಮುಂದಿನ ವರ್ಷದ ರಾಜ್ಯದ ಅಭಿವೃದ್ಧಿ ಎಂಬಂತಿರಬೇಕು. ಆದರೆ ಈ ಬಜೆಟ್ ಕೇವಲ ಖರ್ಚು ವೆಚ್ಚಕ್ಕೆ ಸೀಮಿತಗೊಳಿಸಿದಂತಿದೆ” ಎಂದು ತಿಳಿಸಿದ್ದಾರೆ.
“ಬಡವರು ಮತ್ತು ಕಾರ್ಮಿಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಈ ಬಜೆಟ್‌ನಲ್ಲಿ ಯಾವುದೇ ವರ್ಗಕ್ಕೂ ಏನೂ ಸೌಲಭ್ಯ ನೀಡದೆ ರಾಜ್ಯದ ಜನತೆಗೆ ದ್ರೋಹ ಬಗೆಯಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ ಸಂಸ್ಕರಣೆ ಘಟಕ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳು ಇದ್ದು ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಉಪಯೋಗ ಇಲ್ಲದಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ರಾಜ್ಯದ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತರು ಕಳೆದ ಎರಡು ಮೂರು ತಿಂಗಳಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಅವರ ಯಾವುದೇ ಬೇಡಿಕೆಗಳನ್ನು ಬಜೆಟ್‌ನಲ್ಲಿ ಈಡೇರಿಸಿಲ್ಲ. ಅಲ್ಲದೆ ಒಪಿಎಸ್ ಪಿಂಚಣಿ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪಿಸದೆ ಸರ್ಕಾರಿ ನೌಕರರನ್ನು ವಂಚಿಸಲಾಗಿದೆ. ಇಂಥ ಜನ ವಿರೋಧಿ ಬಜೆಟ್ ಅನ್ನು ಕೇವಲ ಬಿಜೆಪಿಯಿಂದ ಮಾತ್ರ ನೀಡಲು ಸಾಧ್ಯ” ಎಂದು ಲೇವಡಿ ಮಾಡಿದ್ದಾರೆ.