2023-24ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ (Karnataka Budget 2023 Live Updates) ಇಂದು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಈ ಸಲದ ಕೊನೇ ಬಜೆಟ್ ಇದು. 2023ರ ಮೇ ತಿಂಗಳ ಒಳಗೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಬೊಮ್ಮಾಯಿ ಅವರು ಮಂಡಿಸಲಿರುವ ‘ಚುನಾವಣಾ ವರ್ಷದ ಬಜೆಟ್’ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲಿದ್ದು, ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯನ್ನೂ ನಡೆಸಲಿದ್ದಾರೆ.
ಹಿಂದುಳಿದ ವರ್ಗಗಳ ಹಾಸ್ಟೆಲ್ ಮೂಲಸೌಕರ್ಯ, ದುರಸ್ತಿಗೆ 250 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್, 20 ಹೊಸ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿಗಮಗಳಿಗೆ 596 ಕೋಟಿ ರೂಪಾಯಿ ಅನುದಾನ ಘೋಷಿಸಿದ ಬಸವರಾಜ ಬೊಮ್ಮಾಯಿ
ಸರ್ಕಾರಿ ಪದವಿ ಪೂರ್ವ, ಪದವಿ ಶಿಕ್ಷಣ ಫ್ರೀ
ರಾಜ್ಯದ ಎಲ್ಲಾ ಪ್ರೌಢ ಶಾಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಹೊಂದಲು ಅನುವು ಮಾಡಿಕೊಡುವ ದೃಷ್ಟಿಯಿಂದ ‘ಮುಖ್ಯಮಂತ್ರಿ ವಿದ್ಯಾಶಕ್ತಿ’ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಇದರಡಿಯಲ್ಲಿ ಸರ್ಕಾರಿ ಪದವಿಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗುವುದು. ಈ ಉಚಿತ ಉನ್ನತ ಶಿಕ್ಷಣದಿಂದ ರಾಜ್ಯದ 8 ಲಕ್ಷ ವಿದ್ಯಾರ್ಥಿಗಳು ಅನುಕೂಲ ಪಡೆಯಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗ್ರಾಮ ಸಹಾಯಕರ ಹುದ್ದೆಗೆ ‘ಜನಸೇವಕ’ ಎಂದು ಮರುನಾಮಕರಣ
ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮಾಡುತ್ತಿರುವ ಸಾಗುವಳಿಯನ್ನು ಸಕ್ರಮಗೊಳಿಸಲು ನಮೂನೆ-57 ರಲ್ಲಿ ಅರ್ಜಿ ಸಲ್ಲಿಸಲು ದಿನಾಂಕ: 30.05.2022 ರಿಂದ ಅನ್ವಯ ಆಗುವಂತೆ ಒಂದು ವರ್ಷದ ಅವಧಿಯವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ. ರೈತರಿಗೆ ತುರ್ತಾಗಿ ಭೂಮಾಪನಾ ನಕ್ಷೆ ಬೇಕಾಗಿದ್ದಲ್ಲಿ ಸ್ವಾವಲಂಬಿ ಯೋಜನೆಯಡಿ ಸ್ವತಃ ನಕ್ಷೆ ತಯಾರಿಸಲು ಅವಕಾಶ ಕಲ್ಪಿಸಲಾಗಿದೆ.
ಗ್ರಾಮ ಸಹಾಯಕರ ಹುದ್ದೆಯನ್ನು ‘ಜನಸೇವಕ’ ಎಂದು ಮರುನಾಮಕರಣ ಮಾಡಿ ಸರ್ಕಾರದ ವತಿಯಿಂದ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಸರಿಯಾಗಿ ಜನರಿಗೆ ತಲುಪುತ್ತಿದೆಯೇ ಎಂದು ಖಾತರಿ ಪಡಿಸುವ ಜವಾಬ್ದಾರಿಯನ್ನು ನೀಡಲಾಗುವುದು. ಇವರಿಗೆ ನೀಡುತ್ತಿರುವ ಮಾಸಿಕ ಗೌರವಧನವನ್ನು 13,000 ರೂ. ಗಳಿಂದ 14,000 ರೂ. ಗಳಿಗೆ ಹೆಚ್ಚಿಸಲಾಗುವುದು.
ಪ್ರಮುಖ ಆರೋಗ್ಯ ಯೋಜನೆಗಳು
ಜೀವಸುಧೆ ಯೋಜನೆಯಡಿ ಕ್ಯಾನ್ಸರ್ ತಪಾಸಣಾ ಶಿಬಿರ, ‘ವಾತ್ಸಲ್ಯ’ ಯೋಜನೆಯಡಿ 6 ವರ್ಷದ ಮಕ್ಕಳಿಗೆ ಆರೋಗ್ಯ ತಪಾಸಣಾ ಶಿಬಿರ ಘೋಷಣೆ ಮತ್ತು ಹಾವೇರಿಯ ಸವಣೂರಿನಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣದ ಘೋಷಣೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಹಾಗೇ, ರಕ್ತಹೀನತೆ ನಿವಾರಣೆಗೆ 100 ಕೋಟಿ ರೂಪಾಯಿ ವೆಚ್ಚದಲ್ಲಿ ಆರೋಗ್ಯ ಪುಷ್ಟಿ ಯೋಜನೆ, ನಿಮ್ಹಾನ್ಸ್ ಆವರಣದಲ್ಲಿ 146 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಮೊದಲ ಅಂಗಾಂಗ ಜೋಡಣೆ ಆಸ್ಪತ್ರೆ ನಿರ್ಮಾಣ.
ಬೈಂದೂರಿನ ಕಂಬದಕೋಣೆಯಲ್ಲಿ ಸೀಫುಡ್ ಪಾರ್ಕ್, ಯಾದಗಿರಿ, ರಾಯಚೂರು, ಬಳ್ಳಾರಿಯಲ್ಲಿ ಸೀಗಡಿ ಕೃಷಿ ಕ್ಲಸ್ಟರ್, ಶಿಡ್ಲಘಟ್ಟದಲ್ಲಿ 75 ಕೋಟಿ ರೂ.ವೆಚ್ಚದ ಹೈಟೆಕ್ ರೇಷ್ಮೆ ಗೂಡು ಕೇಂದ್ರ ಮತ್ತು ತುಮಕೂರಿನ ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ