2023-24ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ (Karnataka Budget 2023 Live Updates) ಇಂದು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಈ ಸಲದ ಕೊನೇ ಬಜೆಟ್ ಇದು. 2023ರ ಮೇ ತಿಂಗಳ ಒಳಗೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಬೊಮ್ಮಾಯಿ ಅವರು ಮಂಡಿಸಲಿರುವ ‘ಚುನಾವಣಾ ವರ್ಷದ ಬಜೆಟ್’ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲಿದ್ದು, ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯನ್ನೂ ನಡೆಸಲಿದ್ದಾರೆ.
ಕ್ರೀಡಾಕ್ಷೇತ್ರಕ್ಕೆ ಉತ್ತೇಜನ
ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವ ಅಧಿಕೃತವಾಗಿ ನೋಂದಣಿಯಾಗಿರುವ ಖಾಸಗಿ ಕ್ರೀಡಾ ಸಂಸ್ಥೆಗಳಿಗೆ 25 ಲಕ್ಷ ರೂ. ಗಳವರೆಗೆ ಪ್ರೋತ್ಸಾಹಧನವನ್ನು ನೀಡಲಾಗುವುದು. ಬಾಸ್ಕೆಟ್ ಬಾಲ್ ಮತ್ತು ವಾಲಿ ಬಾಲ್ ಕ್ರೀಡೆಗಳನ್ನು ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಪರಿಚಯಿಸಲು ಹೊಸ ಅಂಕಣಗಳನ್ನು ಮತ್ತು ತರಬೇತಿ ಕೇಂದ್ರಗಳನ್ನು ನಿರ್ಮಿಸಲಾಗುವುದು. ಗ್ರಾಮೀಣ ಮತ್ತು ಸಾಂಪ್ರದಾಯಿಕ ಕ್ರೀಡೆಗಳಾದ ಖೋ-ಖೋ, ಕುಸ್ತಿ, ಕಬಡ್ಡಿ, ಕಂಬಳ, ಎತ್ತಿನಗಾಡಿ ಓಟ ಮುಂತಾದವುಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸಲು ಮತ್ತು ಉತ್ತೇಜಿಸಲು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತವಾದ ಕ್ರೀಡಾ ಅಂಕಣವನ್ನು ನರೇಗಾ ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಒಲಿಂಪಿಕ್ಸ್ ಮತ್ತು ಇತರ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕ ಪಡೆಯುವ ಉದ್ದೇಶಕ್ಕೆ ಅತ್ಯುನ್ನತ ತರಬೇತಿ ಹಾಗೂ ಸಲಕರಣೆಗಳನ್ನು ಪಡೆಯಲು ಅನುವಾಗುವಂತೆ 50 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಒಲಿಂಪಿಕ್ ಕನಸಿನ ಯೋಜನೆ ಅನುಷ್ಠಾನ.
ಯುವಸ್ನೇಹಿ ಯೋಜನೆಯಡಿ ನಿರುದ್ಯೋಗಿ ಯುವಜನರಿಗೆ 2 ಸಾವಿರ ರೂಪಾಯಿ ನೆರವು
ಪದವಿ ಶಿಕ್ಷಣವನ್ನು ಮುಗಿಸಿ, ಮೂರು ವರ್ಷಗಳ ನಂತರವೂ ಯಾವುದೇ ಉದ್ಯೋಗ ದೊರೆಯದ ಯುವಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಲು ‘ಯುವಸ್ನೇಹಿ’ ಎಂಬ ಹೊಸ ಯೋಜನೆಯಡಿ ತಲಾ 2,000 ರೂ. ಗಳ ಒಂದು ಬಾರಿಯ ಆರ್ಥಿಕ ನೆರವು ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ.
‘ಮಕ್ಕಳ ಬಸ್ಸು’ ಯೋಜನೆ
ಶಾಲಾ-ಕಾಲೇಜುಗಳಿಗೆ ಹೋಗಲು ಸಾರ್ವಜನಿಕ ಸಾರಿಗೆ ವಾಹನಗಳನ್ನು ಅವಲಂಬಿಸಿರುವ ಮಕ್ಕಳ ಅನುಕೂಲಕ್ಕಾಗಿ ‘ಮಕ್ಕಳ ಬಸ್ಸು’ ಯೋಜನೆ ಪ್ರಾರಂಭ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಈ ಯೋಜನೆಯಡಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಸಾರಿಗೆ ನಿಗಮಗಳ ಮೂಲಕ 1000 ಹೆಚ್ಚುವರಿ ಬಸ್ ಸಂಚಾರ ಪ್ರಾರಂಭ ಮಾಡಲಾಗುವುದು. ಇದರಿಂದ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾಲುಸಂಕ ನಿರ್ಮಾಣಕ್ಕೆ 250 ಕೋಟಿ ರೂಪಾಯಿ
ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ರಭಸದಿಂದ ಹರಿಯುವ ಹಳ್ಳ ತೊರೆಗಳನ್ನು ಸುರಕ್ಷಿತವಾಗಿ ದಾಟಲು ಹಾಗೂ ಸಂಪರ್ಕ ರಹಿತ ಜನ ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು 500 ಕಾಲು ಸಂಕಗಳ ನಿರ್ಮಾಣ ಕಾಮಗಾರಿಯನ್ನು 250 ಕೋಟಿ ರೂ. ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಕೊಡಗು ಜಿಲ್ಲೆಯ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ವಿಶೇಷ ಪ್ಯಾಕೇಜನ್ನು ನೀಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣ
ಧಾರವಾಡ ರೈಲ್ವೆ ಮಾರ್ಗ ನಿರ್ಮಿಸಲು ಭೂ ಸ್ವಾಧೀನಕ್ಕಾಗಿ 150 ಕೋಟಿ ರೂಪಾಯಿ ಒದಗಿಸಲು ನಿರ್ಧಾರ. ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿಯೇ ಪೂರ್ಣಗೊಳಿಸಲಾಗುವುದು. ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿ, ಹೊಸ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿ ಸ್ಪರ್ಧಾತ್ಮಕ ಬಿಡ್ ಪ್ರಕ್ರಿಯೆ ಮೂಲಕ PPP ಮಾದರಿಯಲ್ಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು. ಮೈಸೂರು ವಿಮಾನ ನಿಲ್ದಾಣವನ್ನು ಉನ್ನತೀಕರಿಸಲು ಭೂ ಸ್ವಾಧೀನಕ್ಕಾಗಿ ಕ್ರಮ ವಹಿಸಲಾಗಿದ್ದು, ಇದಕ್ಕಾಗಿ 320 ಕೋಟಿ ರೂ. ಗಳಷ್ಟು ಹಂಚಿಕೆ ಮಾಡಲಾಗಿದೆ.