ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ಸರ್ಕಾರದ ಕೊನೇ ಬಜೆಟ್ನ್ನು ಮಂಡನೆ (Karnataka Budget 2023) ಮಾಡಿದರು. 2 ಗಂಟೆ 40 ನಿಮಿಷಗಳ ಕಾಲ ಅವರು ಬಜೆಟ್ ಓದಿದ್ದಾರೆ. ಈ ಸಲದ ಬಜೆಟ್ನಲ್ಲಿ ಅವರು ‘ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ’ ಎಂಬ ಧ್ಯೇಯವಾಕ್ಯದಡಿ ಆರೋಗ್ಯ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
ಸಮಾಜದ ತಳಹಂತದಲ್ಲಿಯೂ ಆರೋಗ್ಯ ಸೇವೆಗಳನ್ನು ಬಲಪಡಿಸುವ ಸಲುವಾಗಿ, ಎಲ್ಲರಿಗೂ ಆರೋಗ್ಯ ಸೇವೆ ಸಿಗುವಂತೆ ಮಾಡಲು 100 ಸಮುದಾಯ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿ 53 ಸಮುದಾಯ ಆರೋಗ್ಯ ಕೇಂದ್ರಗಳು, 26 ತಾಲೂಕು ಆಸ್ಪತ್ರೆ ಮತ್ತು 1 ಜಿಲ್ಲಾಸ್ಪತ್ರೆಯನ್ನು ಉನ್ನತೀಕರಿಸಿ, ಲೋಕಾರ್ಪಣೆಗೊಳಿಸಲಾಗಿದೆ. ಉಳಿದ ಕಾಮಗಾರಿಯನ್ನೂ ಶೀಘ್ರದಲ್ಲೇ ಸಂಪೂರ್ಣಗೊಳಿಸುತ್ತೇವೆ. ಇದಕ್ಕಾಗಿ 781 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹಾಗೇ, ರಾಜ್ಯದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಮ್ಯಾಪಿಂಗ್ ಮಾಡುವ ಸ್ಥಳೀಯವಾಗಿ ಹೃದ್ರೋಗ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ ಎಂದೂ ಹೇಳಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ
ಖಾನಾಪುರ, ಆನೇಕಲ್, ಶಿರಹಟ್ಟಿ, ಶೃಂಗೇರಿ, ಯಳಂದೂರು, ನೆಲಮಂಗಲ ಮತ್ತು ಹೊಸಕೋಟೆ ತಾಲೂಕುಗಳಲ್ಲಿ ತಾಲೂಕು ಮಟ್ಟದ ಆಸ್ಪತ್ರೆಗಳೇ ಇರಲಿಲ್ಲ. ಈ ಸಲದ ಬಜೆಟ್ನಲ್ಲಿ ಈ ತಾಲೂಕುಗಳಿಗೆ ಒಂದು ಗುಡ್ನ್ಯೂಸ್ ಕೊಡಲಾಗಿದೆ. ಈ ಪ್ರದೇಶಗಳಲ್ಲಿ ಇದ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನೇ ಮೇಲ್ದರ್ಜೆಗೆ ಏರಿಸಲಾಗುವುದು. 100 ಹಾಸಿಗೆ ಸಾಮರ್ಥ್ಯಕ್ಕೆ ಏರಿಸಿ, ತಾಲೂಕು ಆಸ್ಪತ್ರೆಗಳನ್ನಾಗಿ ಪರಿವರ್ತಿಸುವುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅದರೊಂದಿಗೆ ಕೋಲಾರ, ಬಾಗಲಕೋಟೆ, ಯಾದಗಿರಿ, ಮಂಗಳೂರುಗದಗ, ಚಿಕ್ಕಮಗಳೂರು, ರಾಮನಗರ, ವಿಜಯನಗರ ಮತ್ತು ದೊಡ್ಡಬಳ್ಳಾಪುರ ಆಸ್ಪತ್ರೆಗಳಲ್ಲಿ 50 ಹಾಸಿಗೆಯ ಹಾಗೂ ತುಮಕೂರು ಮತ್ತು ಬೆಂಗಳೂರಿನಲ್ಲಿ 100 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ಗಳನ್ನು ಸ್ಥಾಪಿಸುವುದಾಗಿಯೂ ತಿಳಿಸಿದರು.
ತಾಯಿ ಮತ್ತು ನವಜಾತ ಶಿಶು ಮರಣ ತಡೆಗೆ ಕ್ರಮ
ರಾಜ್ಯದಲ್ಲಿ ತಾಯಿ ಮತ್ತು ನವಜಾತ ಶಿಶುಗಳ ಮರಣ ತಡೆಯುವ ಸಲುವಾಗಿ ಹೆಚ್ಚೆಚ್ಚು ವ್ಯವಸ್ಥೆಗಳುಳ್ಳ ಆಸ್ಪತ್ರೆ ನಿರ್ಮಾಣಕ್ಕೆ ಈ ಸಲದ ಬಜೆಟ್ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ವೇಳೆ ಹೇಳಿದರು. ರಾಜ್ಯದಲ್ಲಿ ಒಟ್ಟಾರೆ 165 ಕೋಟಿ ರೂಪಾಯಿ ವೆಚ್ಚದಲ್ಲಿ 10 ತಾಯಿ-ಮಕ್ಕಳ ಆಸ್ಪತ್ರೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಹಾವೇರಿಯ ಸವಣೂರಿನಲ್ಲಿ ಒಂದು ಹೊಸ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಆರೋಗ್ಯ ಪುಷ್ಟಿ ಯೋಜನೆ
ಬಹುದೊಡ್ಡ ಸವಾಲಾಗಿರುವ ರಕ್ತಹೀನತೆಯನ್ನು ತೊಡೆದು ಹಾಕುವ ಸಲುವಾಗಿ ‘ಆರೋಗ್ಯ ಪುಷ್ಟಿ’ ಎಂಬ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿಯಲ್ಲಿ ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಮತ್ತು ಸಂತಾನೋತ್ಪತ್ತಿ ವಯಸ್ಸಿನ (15-49 ವರ್ಷಗಳು) ಮಹಿಳೆಯರಲ್ಲಿ ರಕ್ತಹೀನತೆ ಹಾಗೂ ಅಪೌಷ್ಟಿಕತೆಯನ್ನು ನಿವಾರಿಸಲು ಉದ್ದೇಶಿತ ಪರೀಕ್ಷೆ, ಚಿಕಿತ್ಸೆ, ಜನಜಾಗೃತಿ ಮೂಡಿಸಲು ಹಾಗೂ ತರಬೇತಿ ನೀಡಲು ಈ ಸಲ ಬಜೆಟ್ನಲ್ಲಿ 100 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಮನೆಮನೆಗೆ ಆರೋಗ್ಯ
ಬಸವರಾಜ ಬೊಮ್ಮಾಯಿ ಅವರು ಬಜೆಟ್ನಲ್ಲಿ ‘ಮನೆಮನೆಗೆ ಆರೋಗ್ಯ’ ಎಂಬ ಕಾರ್ಯಕ್ರಮ ಘೋಷಿಸಿದ್ದಾರೆ. ಇದರಡಿಯಲ್ಲಿ ಪ್ರಸಕ್ತ ವರ್ಷದಲ್ಲಿ ಹಳ್ಳಿಗಳಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಎರಡು ಬಾರಿ ಆರೋಗ್ಯ ಶಿಬಿರ ನಡೆಸಲಾಗುವುದು. ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮನೆ ಬಾಗಿಲಿಗೇ ಔಷಧ ತಲುಪಿಸಲು ವ್ಯವಸ್ಥೆ ಮಾಡಲಾಗುವುದು. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು ರಾಜ್ಯಾದ್ಯಂತ ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
‘ಜೀವ ಸುಧೆ’ಯಡಿ ಕ್ಯಾನ್ಸರ್ ಪತ್ತೆ
ಮಾರಣಾಂತಿಕ ಕ್ಯಾನ್ಸರ್ ರೋಗವನ್ನು ರೋಗಿಗಳಲ್ಲಿ ಪ್ರಾರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ, ಸೂಕ್ತ ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಬಹುದು ಎಂಬ ಕಾರಣಕ್ಕೆ, ಸ್ತನ, ಬಾಯಿ ಮತ್ತು ಗರ್ಭಕಂಠದ ಕ್ಯಾನ್ಸರ್ ಪತ್ತೆ ಹಚ್ಚಲು ‘ಜೀವಸುಧೆ’ ಹೆಸರಿನಲ್ಲಿ ರಾಜ್ಯಾದ್ಯಂತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುವುದಾಗಿ ಬಜೆಟ್ನಲ್ಲಿ ತಿಳಿಸಲಾಗಿದೆ. ಕ್ಯಾನ್ಸರ್ ಪತ್ತೆಗೆ ಅಗತ್ಯವಿರುವ ಸಾಧನಗಳ ಖರೀದಿಗಾಗಿ 12 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದೂ ಹೇಳಲಾಗಿದೆ.
ಇದನ್ನೂ ಓದಿ: Karnataka budget 2023 : ಉತ್ತರಕನ್ನಡದ ಬಹುದಿನಗಳ ಬೇಡಿಕೆ ಈಡೇರಿಕೆ, ಕುಮಟಾದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ
ಆರೋಗ್ಯ ಕ್ಷೇತ್ರದ ಇನ್ನಿತರ ಪ್ರಮುಖ ಘೋಷಣೆಗಳು
- ಮಿದುಳಿನ ಆರೋಗ್ಯ ಕಾಪಾಡಲು ಮತ್ತು ಜನರಲ್ಲಿ ಆ ಬಗ್ಗೆ ಅರಿವು ಮೂಡಿಸಲು ನಿಮ್ಹಾನ್ಸ್ ಸಹಯೋಗದೊಂದಿಗೆ 25 ಕೋಟಿ ರೂ. ವೆಚ್ಚದಲ್ಲಿ, ಕರ್ನಾಟಕ ಮೆದುಳು ಆರೋಗ್ಯ ಯೋಜನೆ ಇಡೀ ರಾಜ್ಯಕ್ಕೆ ವಿಸ್ತರಣೆ
- ಎಲ್ಲಾ ಜಿಲ್ಲೆಗಳಲ್ಲಿ Hand Held X-ray ಯಂತ್ರಗಳ ಸಹಾಯದಿಂದ ಕ್ಷಯ ರೋಗಿಗಳ ಆರಂಭಿಕ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸಮುದಾಯ ಆಧಾರಿತ ತಪಾಸಣೆ ಚಟುವಟಿಕೆ ನಡೆಸಲು 12.50 ಕೋಟಿ ರೂ. ಪ್ರಸ್ತಾಪ
- ಉಚಿತ ಡಯಾಲಿಸಿಸ್ ಸೇವೆಯನ್ನು 60,000 ಸೈಕಲ್ಗಳಿಂದ 1 ಲಕ್ಷ ಡಯಾಲಿಸಿಸ್ ಸೈಕಲ್ ಗಳಿಗೆ ಹೆಚ್ಚಿಸಲಾಗುವುದು.
- 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಮಾಡಲು ವಾತ್ಸಲ್ಯ ಯೋಜನೆ. ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಹಾಗೂ ಸ್ಥಳೀಯವಾಗಿಯೇ ಪ್ರಯೋಗಾಲಯಗಳ ಸೇವೆಗಳನ್ನು ಒದಗಿಸಲು 129 ತಾಲೂಕುಗಳಲ್ಲಿ, ಎಲ್ಲ ಜಿಲ್ಲೆಗಳಲ್ಲಿ ಪ್ರಯೋಗಾಲಯ ಸ್ಥಾಪನೆ
- ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಲ್ಲಿ ಆರೋಗ್ಯ ಸೇವೆ ಸುಧಾರಣೆಗಾಗಿ 720 ಕೋಟಿ ರೂ. ವೆಚ್ಚದಲ್ಲಿ ಕ್ರಮ. ಅದರಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ 345 ಕೋಟಿ ರೂಪಾಯಿ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಈಗಾಗಲೇ ನಿರ್ಮಿಸಲಾದ 14 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದ್ವಿತೀಯ ಆರೈಕೆ ಸೇವೆಗಳನ್ನು ಬಲಪಡಿಸಲು 35 ಕೋಟಿ ರೂ. ಅನುದಾನ. ಆರೋಗ್ಯ ಸಂಸ್ಥೆಗಳ ಮೂಲಭೂತ ಸೌಕರ್ಯ ಮತ್ತು ಮಾನವ ಸಂಪನ್ಮೂಲ ಹೆಚ್ಚಿಸಲು 150 ಕೋಟಿ ರೂಪಾಯಿ. 137 ಕೋಟಿ ರೂ. ವೆಚ್ಚದಲ್ಲಿ 65 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಮತ್ತು ಪರಿಣಾಮಕಾರಿ ತಪಾಸಣೆ, ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು 50 ಕೋಟಿ ರೂ.
- 202 ಕೋಟಿ ರೂ. ವೆಚ್ಚದಲ್ಲಿ ಮೈಸೂರು, ಶಿವಮೊಗ್ಗ ಮತ್ತು ಕಲಬುರಗಿಗಳಲ್ಲಿ ಕಿದ್ವಾಯಿ ಸಂಸ್ಥೆಯಡಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ. ಜಯದೇವ ಸಂಸ್ಥೆಯ ಅಡಿಯಲ್ಲಿ 263 ಕೋಟಿ ರೂ. ವೆಚ್ಚದಲ್ಲಿ, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಮತ್ತು ಹುಬ್ಬಳ್ಳಿಯಲ್ಲಿ 430 ಹಾಸಿಗೆ ಸಾಮರ್ಥ್ಯದ ಹೃದ್ರೋಗ ಚಿಕಿತ್ಸಾ ಆಸ್ಪತ್ರೆಗಳ ನಿರ್ಮಾಣ. ಉತ್ತರ ಕನ್ನಡದ ಕುಮಟಾದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮತ್ತು ರಾಯಚೂರಿನಲ್ಲಿ ಏಮ್ಸ್ ಮಾದರಿ ಆಸ್ಪತ್ರೆ ನಿರ್ಮಾಣ
- ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಕಲಬುರಗಿಯ 4 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ, 6 ಕೋಟಿ ರೂಪಾಯಿ ವೆಚ್ಚದಲ್ಲಿ IVF ಕ್ಲಿನಿಕ್ಗಳ ಪ್ರಾರಂಭ
- ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಸ್ವಯಂಚಾಲಿತ ಮತ್ತು ಕೇಂದ್ರೀಕೃತ ರಕ್ತನಿಧಿ ನಿರ್ವಹಣಾ ವ್ಯವಸ್ಥೆ ಸ್ಥಾಪನೆ.
- ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆ ಆವರಣದಲ್ಲಿ 146 ಕೋಟಿ ರೂಪಾಯಿ ವೆಚ್ಚದಲ್ಲಿ, ದೇಶದ ಪ್ರಥಮ ಅಂಗಾಂಗ ಜೋಡಣೆ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ.