Site icon Vistara News

Karnataka Budget 2024: ಅತಿ ಹೆಚ್ಚು ಸಾಲ ಮಾಡಿರುವುದೇ ಸಿದ್ದರಾಮಯ್ಯ ಬಜೆಟ್ ದಾಖಲೆ: ಬೊಮ್ಮಾಯಿ

Basavaraj Bommai talks on budget

ಬೆಂಗಳೂರು: 15 ಬಾರಿ ಬಜೆಟ್ ಮಂಡಿಸಿ 1.5 ಲಕ್ಷ ಕೋಟಿ ಸಾಲ ಮಾಡಿರುವ ದಾಖಲೆ ಸೃಷ್ಟಿಸಿರುವ ಸಿದ್ದರಾಮಯ್ಯ ಅವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳಿನ ಕಂತೆಯ ರಾಜಕೀಯ ಬಜೆಟ್ (Karnataka Budget 2024) ಮಂಡಿಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರವನ್ನು ವಿರೋಧಿಸಲು ಬಜೆಟ್‌ ಅನ್ನು ಬಳಸಿಕೊಂಡಿದ್ದು, ಬಜೆಟ್‌ನ ಪಾವಿತ್ರ್ಯತೆಯನ್ನು ಸಿದ್ದರಾಮಯ್ಯ ಹಾಳು ಮಾಡಿದ್ದಾರೆ. ಕೇಂದ್ರ ಸರ್ಕಾರದ ಅನುದಾನ‌ ಪಡೆಯಲು ಅನೇಕ ವೇದಿಕೆಗಳಿವೆ. ಜಿಎಸ್‌ಟಿ ಕೌನ್ಸಿಲ್, ನೀತಿ ಆಯೋಗ ಇದೆ. ಒಂದು ಬಾರಿಯೂ ನೀತಿ ಆಯೋಗದ ಸಭೆಗೆ ಹಾಜರಾಗದೇ ಆ ಸಂದರ್ಭದಲ್ಲಿ ಮಾತನಾಡದೇ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವನ್ನು ವಿರೋಧಿಸಿರುವುದು, ರಾಜಕೀಯಕ್ಕಾಗಿ ಬಜೆಟ್ ಬಳಸಿಕೊಂಡಿರುವುದು ಖಂಡನೀಯ ಎಂದು ಹೇಳಿದರು.

ಇದನ್ನೂ ಓದಿ | Karnataka Budget 2024 : ಮಹಿಳೆಯರೇ ನಡೆಸುವ 50 ಕೆಫೆ ಸಂಜೀವಿನಿ ಸ್ಥಾಪನೆ; ಏನಿದು ಸ್ಪೆಷಲ್‌ ಫುಡ್‌ ಜಾಯಿಂಟ್‌?

ಕಳೆದ ವರ್ಷಕ್ಕಿಂತ ಸುಮಾರು 25 ಸಾವಿರ ಕೋಟಿ‌ ರೂ. ಸಾಲ ಮಾಡಿ ಅದರಲ್ಲಿ ಅಭಿವೃದ್ಧಿಗೆ ಕೇವಲ ಒಂದು ಸಾವಿರ‌ ಕೋಟಿ ಮಾತ್ರ ಬಳಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಕಳೆದ ವರ್ಷ ಬಂಡವಾಳ ವೆಚ್ಚ 54 ಸಾವಿರ ಕೋಟಿ ಇತ್ತು ಈ ವರ್ಷ ಕೇವಲ 55 ಸಾವಿರ ಕೋಟಿಗೆ ಹೆಚ್ಚಳ ಮಾಡಿದ್ದಾರೆ. ಅತಿ ಹೆಚ್ಚಿನ ದರದಲ್ಲಿ ಬಡ್ಡಿ ಸಾಲ ತಂದು ಅನುತ್ಪಾದಕ ವೆಚ್ಚಗಳಿಗೆ ಬಜೆಟ್ ಹಣ ವೆಚ್ಚ ಮಾಡುತ್ತಿದ್ದಾರೆ. ರಾಜ್ಯದ ಹಣಕಾಸು ಸ್ಥಿತಿ ಹದಗೆಟ್ಟಿರುವುದು ಈ ಬಜೆಟ್‌ನಲ್ಲಿ ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದರು.

ತೆರಿಗೆ ಸಂಗ್ರಹದಲ್ಲಿಯೂ 14 ಸಾವಿರ ಕೋಟಿ ರೂ. ಕೊರತೆಯಾಗಿದೆ. ಅವರೇ ಹೇಳಿರುವಂತೆ 1.75 ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡುವ ಗುರಿ ಇಟ್ಟುಕೊಂಡಿದ್ದರು. ಆದರೆ ಕೇವಲ 1.61 ಲಕ್ಷ ಕೋಟಿ ಮಾತ್ರ ತೆರಿಗೆ ಸಂಗ್ರಹವಾಗಿದೆ. ಹೀಗಾಗಿ 14 ಕೋಟಿ ರೂ. ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಕೇಂದ್ರ ಸರ್ಕಾರದಿಂದ ಬರುವ ಅನುದಾನ ಸಂಪೂರ್ಣ ಬಂದಿದೆ. ಇವರ ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಿದೆ. ಅದನ್ಮು ಮುಚ್ಚಿಡಲು ಸುಳ್ಳಿನ ಕಂತೆಯ ಬಜೆಟ್ ಮಂಡನೆ ಮಾಡಿದ್ದಾರೆ. ಎಸ್‌ಸಿಪಿ, ಟಿಎಸ್‌ಪಿಗೆ ಹಣ ನೀಡಿಲ್ಲ, ಶಿಕ್ಷಣ, ನೀರಾವರಿಗೆ ಹಣ ಇಟ್ಟಿಲ್ಲ. ರಾಜ್ಯವನ್ನು ದಿವಾಳಿ ಮಾಡಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ | Karnataka Budget 2024: ತೀರ್ಥ ಯಾತ್ರಿಕರಿಗೆ ವಸತಿ, ಅರ್ಚಕರ ಖಾತೆಗೆ ನೇರ ಹಣ; ಸಿದ್ದು ಘೋಷಣೆ

ಚುನಾವಣೆಗೋಸ್ಕರ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕೃಷ್ಣಾ, ಭದ್ರಾ, ಮಹಾದಾಯಿ ಯೋಜನೆಗಳಿಗೆ ಯಾವುದೇ ಹಣ ನೀಡಿಲ್ಲ. ನೀರಾವರಿಗೆ ಸಂಪೂರ್ಣ ಅನ್ಯಾಯ ಮಾಡಿದ್ದಾರೆ. ಎಸ್ಸಿ ಎಸ್ಟಿಗಳಿಗೆ ಮೋಸದ ಬಜೆಟ್, ವಿದ್ಯಾರ್ಥಿಗಳಿಗೆ, ರೈತರಿಗೆ, ಮಹಿಳೆಯರಿಗೆ ಶೂನ್ಯ ಬಜೆಟ್ ಆಗಿದೆ. ರಾಜ್ಯದ ಇತಿಹಾಸದಲ್ಲಿ ಪ್ರತಿಪಕ್ಷ ಸಭಾತ್ಯಾಗ ಮಾಡುವ ಪರಿಸ್ಥಿತಿಗೆ ರಾಜ್ಯ ಸರ್ಕಾರ ಬಂದಿದೆ. ಸರ್ಕಾರದ ಈ ಜನವಿರೋಧಿ ನೀತಿಯನ್ನು ಜನರಿಗೆ ತಲುಪಿಸುತ್ತೇವೆ ಎಂದು ಹೇಳಿದರು.

Exit mobile version