ಬೆಂಗಳೂರು: ವಿಧಾನಸಭೆ ಚುನಾವಣೆಗೂ ಪೂರ್ವ ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿ (Karnataka Congress Guarantee)ಗಳಲ್ಲಿ, ‘ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ (Free Bus Ride For Woman)’ ಎಂಬುದೂ ಒಂದಾಗಿತ್ತು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿದೆ. ಎಲ್ಲೆಲ್ಲೂ ಗ್ಯಾರಂಟಿಗಳ ಬಗ್ಗೆಯೂ ಚರ್ಚೆ. ಸಾಮಾನ್ಯ ಜನರಲ್ಲಿ ನಿರೀಕ್ಷೆಯೂ ಹೆಚ್ಚಾಗಿದೆ. ಅದರಂತೆ ಈ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಬಗ್ಗೆ ಹಲವು ಗೊಂದಲಗಳು ಎದ್ದಿದ್ದವು. ಎಲ್ಲ ಮಹಿಳೆಯರಿಗೂ ಅನ್ವಯ ಆಗುತ್ತಾ? ಉದ್ಯೋಗಸ್ಥ ಮಹಿಳೆಯರಿಗೆ ಮಾತ್ರನಾ? ಎಪಿಎಲ್-ಬಿಪಿಎಲ್ ಕಾರ್ಡ್ ಎಂಬ ನಿಯಮ ಹೇರಲ್ಪಡುತ್ತದೆಯಾ ಎಂಬಿತ್ಯಾದಿ ಪ್ರಶ್ನೆಗಳು ಎದ್ದಿದ್ದವು. ಈ ಪ್ರಶ್ನೆಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ. ಯಾವುದೇ ನಿರ್ಬಂಧವಿಲ್ಲ, ರಾಜ್ಯಾದ್ಯಂತ ಎಲ್ಲ ಮಹಿಳೆಯರಿಗೂ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಉಚಿತವಾಗಿ ಇರುತ್ತದೆ ಎಂದಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿದ ಸಚಿವ ರಾಮಲಿಂಗಾರೆಡ್ಡಿ, ‘ಈ ಯೋಜನೆ ಖಂಡಿತ ಅನುಷ್ಠಾನಕ್ಕೆ ಬರುತ್ತದೆ. ಯಾವಾಗಿನಿಂದ ಜಾರಿ ಎಂಬುದನ್ನು ಶೀಘ್ರವೇ ತಿಳಿಸುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಮೇ 31ರ ಮಧ್ಯಾಹ್ನ 12ಕ್ಕೆ ಸಭೆ ಇದೆ. ಖರ್ಚು-ವೆಚ್ಚದ ಬಗ್ಗೆ ಅವರು ವಿವರ ಕೇಳಿದ್ದೇವೆ. ನಾವು ಎಲ್ಲ ವಿವರಗಳನ್ನೂ ಕೊಡುತ್ತೇವೆ. ನಾಳೆ ಸಭೆ ಬಳಿಕ ಕ್ಯಾಬಿನೆಟ್ ಸಭೆ ಇದೆ. ಅದಾದ ಮೇಲೆ ಮುಖ್ಯಮಂತ್ರಿಯವರೇ ಈ ಯೋಜನೆ ಯಾವಾಗಿಂದ ಜಾರಿ ಎಂಬುದನ್ನು ಘೋಷಣೆ ಮಾಡುತ್ತಾರೆ. ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಬಿಜೆಪಿಯವರಿಂದ ನಾವು ಹೇಳಿಸಿಕೊಳ್ಳಬೇಕಿಲ್ಲ’ ಎಂದು ಹೇಳಿದ್ದಾರೆ.
ಹಾಗೇ, ‘ಈಗಾಗಲೇ ಸಾರಿಗೆ ಇಲಾಖೆ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜತೆ ಸಭೆ ನಡೆಸಿದ್ದೇವೆ. ಆರ್ಥಿಕ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದೇವೆ. ನೇಮಕಾತಿಗಳು, ಬಸ್ಗಳ ಖರೀದಿ ಬಗ್ಗೆಯೂ ಚರ್ಚೆ ನಡೆದಿದೆ’ ಎಂದು ಹೇಳಿದ್ದಾರೆ. ಸಚಿವರು ಹೇಳಿರುವ ಪ್ರಕಾರ ರಾಜ್ಯಾದ್ಯಂತ ಸರ್ಕಾರಿ ಬಸ್ಗಳಲ್ಲಿ ಎಲ್ಲ ಮಹಿಳೆಯರಿಗೆ ಪ್ರಯಾಣ ಉಚಿತವಾಗಲಿದೆ. ಇದಕ್ಕೆ ಕಿಲೋಮೀಟರ್ ಮಿತಿಯಲ್ಲ ಎನ್ನಲಾಗಿದೆ. ಈ ಬಗ್ಗೆ ಇನ್ನುಳಿದ ಮಾಹಿತಿಗಳು ಮೇ 31ರಂದು ಪ್ರಕಟಗೊಳ್ಳಲಿವೆ.
ಇದನ್ನೂ ಓದಿ: Karnataka Govt: ಬಿಜೆಪಿ ಯೋಜನೆಗಳ ವಿರುದ್ಧ ತನಿಖಾಸ್ತ್ರ ಪ್ರಯೋಗ: ಪರಿಶೀಲನೆ, ತಡೆಗೆ ಮುಂದಾದ ಕಾಂಗ್ರೆಸ್ ಸರ್ಕಾರ