Site icon Vistara News

ತಪ್ಪು ತಪ್ಪು ಕನ್ನಡದಲ್ಲಿ ಸರ್ಕಾರದ ಆದೇಶ; ಕಠಿಣ ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ

govt order error

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಚಿತ್ರೀಕರಣ ನಿಷೇಧಿಸಿದ್ದ ಆದೇಶವನ್ನು ಹಿಂಪಡೆಯಲು ಶುಕ್ರವಾರ ತಡರಾತ್ರಿ ಹೊರಡಿಸಿದ ಆದೇಶದಲ್ಲಿ ಅಕ್ಷರ ದೋಷಗಳಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಸರ್ಕಾರ ತಪ್ಪುಗಳನ್ನು ಸರಿಪಡಿಸಿ, ಹೊಸ ಆದೇಶ ಹೊರಡಿಸಿತ್ತು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಆದೇಶದಲ್ಲಿ ಕನ್ನಡದ ತಪ್ಪಾದ ಪದಗಳನ್ನು ಬಳಸಿರುವ ಅಧಿಕಾರಿ/ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದೆ.

ಈ ಸಂಬಂಧ ಪ್ರಾಧಿಕಾರಕ್ಕೆ ಮರಿಲಿಂಗಗೌಡ ಎಂಬುವರು ದೂರು ನೀಡಿದ್ದು, ಈ ದೂರನ್ನು ಆಧಾರವಾಗಿಟ್ಟುಕೊಂಡು ಪ್ರಾಧಿಕಾರ ಈ ಸೂಚನೆ ನೀಡಿದೆ.

ಸರ್ಕಾರದಲ್ಲಿ ಗೌರವಾನ್ವಿತ ಹುದ್ದೆಯಲ್ಲಿ ಇದ್ದು ಈ ರೀತಿಯ ತಪ್ಪುಗಳಿಂದ ಕೂಡಿದ ಆದೇಶ ಹೊರಡಿಸಿರುವುದು ಸರ್ಕಾರದ ಜವಾಬ್ದಾರಿ ಅಧಿಕಾರಿಯಾಗಿ ಮಾಡಿರುವ ನಿರ್ಲಕ್ಷ್ಯವಾಗಿದೆ. ಆದೇಶದಲ್ಲಿ ಕ್ಕಡದ ತಪ್ಪಾದ ಪದಗಳನ್ನು ಬಳಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಇನ್ನು ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರವಹಿಸಬೇಕೆಂದು ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್‌. ನಾಗಾಭರಣ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ| ಫೋಟೊ, ವಿಡಿಯೊ ನಿಷೇಧ ಕುರಿತು ಮಧ್ಯರಾತ್ರಿ ಹೊರಡಿಸಿದ ಆದೇಶದಲ್ಲಿ ಏಳು ತಪ್ಪುಗಳು

Exit mobile version