ಸೊರಬ: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ (Karnataka Election 2023) ಸರಳ ವ್ಯಕ್ತಿತ್ವದ ದಂತ ವೈದ್ಯ ಡಾ. ಎಚ್.ಇ. ಜ್ಞಾನೇಶ್ ಅವರಿಗೆ ಸೊರಬ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ. ಅವರ ಅಭಿಮಾನಿಗಳು ಮತ್ತು ಗೆಳೆಯರ ಬಳಗವನ್ನು ಒಳಗೊಂಡ ನಿಯೋಗ ಶುಕ್ರವಾರ (ಮಾ.24) ಶಿಕಾರಿಪುರ ಪಟ್ಟಣದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಭೇಟಿ ಮಾಡಿತು.
“ಡಾ. ಎಚ್.ಇ. ಜ್ಞಾನೇಶ್ ಅವರು, ಈಗಾಗಲೇ ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದಾರೆ. ಸಂಘ-ಪರಿವಾರದ ಕಾರ್ಯಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಮತದಾರರು ಬದಲಾವಣೆಯನ್ನು ಬಯಸುತ್ತಿದ್ದು, ಜ್ಞಾನೇಶ್ ಅವರಿಗೆ ಟಿಕೆಟ್ ನೀಡಿದರೆ ಗೆಲುವು ನಿಶ್ಚಿತ. ಈ ನಿಟ್ಟಿನಲ್ಲಿ ಪಕ್ಷದಿಂದ ಜ್ಞಾನೇಶ್ ಅವರಿಗೆ ಟಿಕೆಟ್ ನೀಡಬೇಕು. ಜೊತೆಗೆ ಪಕ್ಷದ ಹಿರಿಯರನ್ನೂ ತಾವು ಗಮನ ಸೆಳೆಯಬೇಕು” ಎಂದು ಜ್ಞಾನೇಶ್ ಅಭಿಮಾನಿಗಳು ಸಂಸದರಲ್ಲಿ ವಿನಂತಿಸಿದರು.
ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಂಸದ ಬಿ.ವೈ. ರಾಘವೇಂದ್ರ, “ಡಾ.ಎಚ್.ಇ. ಜ್ಞಾನೇಶ್ ಅವರ ಬಗ್ಗೆ ತಿಳಿದಿದ್ದೇನೆ. ಈ ಕುರಿತು ಪಕ್ಷದ ಹಿರಿಯರ ಗಮನಕ್ಕೆ ತರಲಾಗುವುದು. ಆದರೆ, ಟಿಕೆಟ್ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ಈ ನಿಟ್ಟಿನಲ್ಲಿ ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಲಾಗುವುದು. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ” ಎಂದರು.
ಇದನ್ನೂ ಓದಿ: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್; ಚಿನ್ನದ ನಿರೀಕ್ಷೆಯಲ್ಲಿ ಭಾರತದ ನಾಲ್ಕು ಬಾಕ್ಸರ್ಗಳು
ಇದಕ್ಕೂ ಮೊದಲು ನೂರಾರು ಕಾರು ಮತ್ತು ಬೈಕ್‌ಗಳ ಮೂಲಕ ಸೊರಬ ಪಟ್ಟಣದಲ್ಲಿ ಬೃಹತ್ ರ್‍ಯಾಲಿ ನಡೆಸಲಾಯಿತು. ರ್‍ಯಾಲಿಯು ಶಿಕಾರಿಪುರ ಪಟ್ಟಣದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದವರೆಗೆ ತಲುಪಿತು. ಈ ಸಂದರ್ಭದಲ್ಲಿ ಮಾಲತೇಶ್ ಕೊಡಕಣಿ, ಸುರೇಂದ್ರ ಮಾವಲಿ, ಗಣಪತಿ ಕಪ್ಪಗಳಲೆ, ಯಶೋಧರ, ಬಸವಂತಪ್ಪ ಹಿರೇಮಾಗಡಿ, ಮೋಹನ್ ಗುಡ್ಡೆಕೊಪ್ಪ, ಹೇಮಪ್ಪ ಶಾಂತಗೇರಿ, ಕೃಷ್ಣಪ್ಪ ಓಟೂರು, ಶ್ರೀಧರ್ ಕೊಡಕಣಿ, ಶಿವಾನಂದ ಸೊರಬ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜ್ಞಾನೇಶ್ ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ಪಾಲ್ಗೊಂಡಿದ್ದರು.