ರಾಯಚೂರು: ಡಮ್ಮಿ ಕ್ಯಾಂಡಿಡೇಟ್ ಅಂದ್ರೆ ಏನು? ನನಗೆ ಅದರ ಅರ್ಥವೇ ಗೊತ್ತಿಲ್ಲ. ನಾನು ಎಲ್ಲ ಅಭ್ಯರ್ಥಿಗಳಿಗಿಂತಲೂ ಫುಲ್ ಸ್ಟ್ರಾಂಗ್ (Full Strong) ಇದ್ದೇನೆ ಎಂದು ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹಮ್ಮದ್ ಶಾಲಂ ಗುಡುಗಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಚಾರಕ್ಕೆ ಹೋದಾಗ ನನಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ವಿರೋಧಿಗಳು ನನ್ನನ್ನು ಡಮ್ಮಿ ಕ್ಯಾಂಡಿಡೇಟ್ ಎಂದಿದ್ದಾರೆ. ಆದರೆ, ಅದರ ಅರ್ಥ ನನಗೆ ಗೊತ್ತಿಲ್ಲ. ನಾನು ಎಲ್ಲರಿಗಿಂತಲೂ ಫುಲ್ ಸ್ಟ್ರಾಂಗ್ ಇದ್ದೇನೆ. ಅಷ್ಟೇ ಅಲ್ಲ ಎಲ್ಲ ಅಭ್ಯರ್ಥಿಗಳಂತೆ ಎಲೆಕ್ಷನ್ ಎದುರಿಸುವ ಸಾಮರ್ಥ್ಯ ಕೂಡ ನನಗಿದೆ ಎಂದರು.
ನನ್ನ ಚುನಾವಣೆ ಮಾಡುವುದು ನನಗೆ ಗೊತ್ತಿಲ್ಲವಾ ?
ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಸೈಯದ್ ಯಾಸೀನ್ ಅವರ ಪರ ಚುನಾವಣೆಯ ನೇತೃತ್ವ ವಹಿಸಿದ್ದೆ. ಅವರ ಪರವಾಗಿ ಸಂಪೂರ್ಣ ಜವಾಬ್ದಾರಿ ಹೊತ್ತು ಚುನಾವಣೆ ಮಾಡಿದ ಅನುಭವ ನನಗಿದೆ. ಹೀಗೆ ಬೇರೆಯವರ ಚುನಾವಣೆಯನ್ನು ನಾನು ಮಾಡಿದ್ದೀನಿ. ನನ್ನ ಚುನಾವಣೆ ಮಾಡುವುದು ನನಗೆ ಗೊತ್ತಿಲ್ಲವಾ? ಎನ್ನುವ ಮೂಲಕ ಡಮ್ಮಿ ಎಂದವರಿಗೆ ಮಹಮ್ಮದ್ ಶಾಲಂ ತೀರುಗೇಟು ನೀಡಿದರು.
ಇದನ್ನೂ ಓದಿ: Karnataka Election 2023: ಕುಣಿಯುತ್ತಿದೆ ಕುರುಡು ಕಾಂಚಾಣ; 265 ಕೋಟಿ ರೂ. ಮೌಲ್ಯದ ನಗದು, ಆಭರಣ ಜಪ್ತಿ
ಬೋಸರಾಜ್ ಫ್ಯಾಮಿಲಿಯವರ ರಬ್ಬರ್ ಸ್ಟಾಂಪ್ ನಾನಲ್ಲ
ರಾಯಚೂರು ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಎಂದು ಗುರುತಿಸಿಕೊಂಡಿರುವ ಬೋಸರಾಜ್ ಕುಟುಂಬದವರ ರಬ್ಬರ್ ಸ್ಟಾಂಪ್ ನಾನಲ್ಲ. ವಿರೋಧಿಗಳು ನನ್ನನ್ನು ರಬ್ಬರ್ ಸ್ಟಾಂಪ್ ಎಂದು ಅಪಪ್ರಚಾರ ಮಾಡುತ್ತಾರೆ. ಅಂತಹವರಿಗೆ ಉತ್ತರ ಕೊಡುವ ಅವಶ್ಯಕತೆ ನನಗಿಲ್ಲ. ನನಗೆ ಈ ಬಾರಿಯ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ ಎಂದರು.
ರಾಯಚೂರು ನಗರದಲ್ಲಿ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮಾಜದ ಬಂಧುಗಳು ದೊಡ್ಡ ಮಟ್ಟದಲ್ಲಿ ಬೆಂಬಲ ಸೂಚಿಸಿದ್ದಾರೆ. ಬಹಳಷ್ಟು ಮತಗಳ ಅಂತರದಿಂದ ಗೆದ್ದು ವಿಧಾನಸಭೆ ಪ್ರವೇಶ ಮಾಡುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.