Site icon Vistara News

Karnataka Election 2023: ನಾನು ಜೈಲಿಗೆ ಹೋಗಿ ಬಂದಿದ್ದೇನೆ; ರಾಹುಲ್, ಸೋನಿಯಾ, ಡಿಕೆಶಿ ಕತೆ ಏನು?: ಜನಾರ್ದನ ರೆಡ್ಡಿ

Karnataka election 2023 I have gone to jail what is the story of Rahul Sonia DK Former minister Janardhana Reddy Tong

ಗಂಗಾವತಿ: ನಾನು ಜೈಲಿಗೆ ಹೋಗಿ ಬಂದಿದ್ದೇನೆ ಎಂದು ಕಾಂಗ್ರೆಸ್‌ ಮುಖಂಡ ಇಕ್ಬಾಲ್ ಅನ್ಸಾರಿ ಆರೋಪ ಮಾಡಿರುವುದು ಸರಿ. ಆದರೆ, ನಿಮ್ಮದೇ ಪಕ್ಷದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ (Sonia Gandhi) ಪರಿಸ್ಥಿತಿ ಏನು? ಅಷ್ಟೇ ಏಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಕತೆ ಏನು? ಎಂದು ಮಾಜಿ ಸಚಿವ, ಕೆಆರ್‌ಪಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಪ್ರಶ್ನಿಸಿದರು.

ನಗರದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ನಮ್ಮತ್ತ ಒಂದು ಬೆರಳು ತೋರಿಸಬಹುದು. ಆದರೆ, ಮಿಕ್ಕ ಮೂರು ಬೆರಳು ನಿಮ್ಮತ್ತ ತೋರಿಸುತ್ತದೆ ಎಂಬುವುದನ್ನು ಮರೆಯಬಾರದು. ಜೈಲಿಗೆ ಹೋಗಿ ಬಂದವರೆಲ್ಲರೂ ಅಪರಾಧಿಗಳು, ಆರೋಪಿಗಳು ಎಂದಲ್ಲ. ಆದರೆ ಯಾವ ಕಾರಣಕ್ಕೆ ಜೈಲಿಗೆ ಹೋಗಿದ್ದರು ಎಂಬುವುದನ್ನು ಮನಗಾಣಬೇಕು. ಇಂದಿನ ದಿನಗಳಲ್ಲಿ ಚುನಾಯಿತ ಪ್ರತಿನಿಧಿಗಳು ಜೈಲಿಗೆ ಹೋಗಿ ಬರುತ್ತಿರುವುದು ಸಹಜವೇ ಆಗಿದ್ದರೂ, ಯಾವ ಕಾರಣ ಎಂಬುವುದು ಅರಿಯಬೇಕು ಎಂದರು.

ಎರಡನೇ ಅತಿದೊಡ್ಡ ನಗರವನ್ನಾಗಿಸಲು ಯೋಜನೆ

ಈ ಚುನಾವಣೆಯ ಬಳಿಕ ಬಳ್ಳಾರಿ ನಗರವನ್ನು ಬೆಂಗಳೂರು ಹೊರತುಪಡಿಸಿದ ಬಳಿಕ ರಾಜ್ಯದ ಎರಡನೇ ಅತಿ ದೊಡ್ಡ ನಗರವನ್ನಾಗಿ ರೂಪಿಸಲು ಯೋಜನೆ ರೂಪಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: Drowned in pond : ಕುರಿ ತೊಳೆಯಲು ಕೆರೆಗೆ ಇಳಿದಿದ್ದ ಒಂದೇ ಕುಟುಂಬದ ಮೂವರು ನೀರುಪಾಲು

ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ರೆಡ್ಡಿ

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಈದ್ಗಾ ಮೈದಾನದಲ್ಲಿ ಮುಸಲ್ಮಾನ ಬಾಂಧವರೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾತನಾಡಿ, ನಾನು ಅಧಿಕಾರದಲ್ಲಿದ್ದಾಗ ಬಳ್ಳಾರಿಯನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಮುಂದಿನ 20 ವರ್ಷದ ದೂರದೃಷ್ಟಿ ಇಟ್ಟುಕೊಂಡು ನನ್ನ ಅಧಿಕಾರದ ಅವಧಿಯಲ್ಲಿ ಬಳ್ಳಾರಿಯ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿತ್ತು. ಈ ಬಾರಿ ನನ್ನ ಪತ್ನಿ ಲಕ್ಷ್ಮಿ ಅರುಣಾ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರೆ ಬಳ್ಳಾರಿ ನಗರವನ್ನು ರಾಜ್ಯದ ಎರಡನೇ ಅತಿ ದೊಡ್ಡ ನಗರವನ್ನಾಗಿ ಮಾಡುತ್ತೇನೆ ಎಂದು ಹೇಳಿದರು.

ಕ್ಷೇತ್ರದ ಅಭಿವೃದ್ಧಿಗೆ ನಾನಾ ಯೋಜನೆ

ನಾನು ಗಂಗಾವತಿಗೆ ಕಾಲಿಟ್ಟು ನೂರು ದಿನವಾಗಿದೆ. ಗಂಗಾವತಿಯಲ್ಲಿ ಸಂಚರಿಸಿ ಇಡೀ ನಗರವನ್ನು ನೋಡಿದ್ದೇನೆ. ನಗರ, ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಕಲ್ಪನೆ ಯೋಜನೆಗಳಿವೆ. ಕ್ಷೇತ್ರದಲ್ಲಿ ಐತಿಹಾಸಿಕ, ಧಾರ್ಮಿಕ ತಾಣಗಳನ್ನು ಗಮನದಲ್ಲಿರಿಸಿಕೊಂಡು ಅಭಿವೃದ್ಧಿಯನ್ನು ಅನುಷ್ಠಾನಕ್ಕೆ ತರುತ್ತೇನೆ ಎಂದರು.

ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರ ಕುರಿತು ಮಾತನಾಡಿದ ರೆಡ್ಡಿ, ನಾನು ಚಿಕ್ಕವನಿದ್ದಾಗಿನಿಂದಲೂ ನೆರೆ-ಹೊರೆಯವರೊಂದಿಗೆ ಉತ್ತಮ ಬಾಂಧವ್ಯವಿರಿಸಿಕೊಂಡವನು. ಅದರಲ್ಲೂ ಮುಸ್ಲಿಂ ಬಾಂಧವರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡವನು. ನಾನು ಬಿಜೆಪಿಯಲ್ಲಿದ್ದರೂ ಬಳ್ಳಾರಿ ನಗರಪಾಲಿಕೆಯಲ್ಲಿ ಮೊದಲ ಬಾರಿಗೆ ಏಳು ಜನ ಮುಸ್ಲಿಮರನ್ನು ಆರಿಸಿಕೊಂಡು ಬಂದಿದ್ದೆವು. ಆ ಏಳು ಜನ ಗೆದ್ದ ಸಂಭ್ರಮಾಚರಣೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದಾಗ ಸುಷ್ಮಾ ಸ್ವರಾಜ್ ಕೂಡ ಅವರೊಂದಿಗೆ ಹೆಜ್ಜೆ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು. ಬಳಿಕ ಬಳ್ಳಾರಿ ಮಹಾನಗರ ಪಾಲಿಕೆ 35ರಲ್ಲಿ 32 ಜನ ಬಿಜೆಪಿಗರು ಆಯ್ಕೆಯಾಗಿ ಬಿಜೆಪಿ ವಶವಾದಾಗಲೂ 11 ಜನ ಮುಸ್ಲಿಮರು ನಮ್ಮೊಂದಿಗೆ ಇದ್ದರು. ನನ್ನ ಅಧಿಕಾರವಧಿಯಲಿ ಮುಸ್ಲಿಮರಿಗೆ ಉಪ ಮೇಯರ್, ಜಿಲ್ಲಾ ಪಂಚಾಯಿತಿ ಸದಸ್ಯರಂತಹ ಸ್ಥಾನ ಸೇರಿ ಸಾಕಷ್ಟು ಪ್ರಮುಖ ಸ್ಥಾನಗಳನ್ನು ನೀಡಿದ್ದೇನೆ. ಹೀಗಾಗಿ ಗಂಗಾವತಿಯಲ್ಲೂ ಮುಸ್ಲಿಂ ಬಾಂಧವರು ನನ್ನೊಂದಿಗೆ ಅದೇ ವಿಶ್ವಾಸದಲ್ಲಿದ್ದಾರೆ ಎಂದರು.

ಇದನ್ನೂ ಓದಿ: Karnataka Election 2023: ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಕೊನೆಗೂ ಅಂಗೀಕಾರ; ಹೈಕೋರ್ಟ್‌ ಮೊರೆಗೆ ಕಾಂಗ್ರೆಸ್‌ ಚಿಂತನೆ

ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು

ರಾಷ್ಟ್ರೀಯ ಪಕ್ಷಗಳಿಗೆ ಸ್ಟಾರ್ ಪ್ರಚಾರಕರಿದ್ದಾರೆ. ಆದರೆ, ನನಗೆ ನನ್ನ ಪಕ್ಷದ ನಾಯಕರು, ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು. ಇವರು ಬಿಟ್ಟರೆ ನನಗೆ ಬೇರೆ ಯಾವುದೇ ಸ್ಟಾರ್ ಪ್ರಚಾರಕರು ಬೇಕಿಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಿಳಿಸಿದರು.

Exit mobile version