ಮಸ್ಕಿ: ತಾಲೂಕಿನ ಗುಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿಹಾಳ, ರತ್ನಾಪುರ ಹಟ್ಟಿ ಗ್ರಾಮದ ಕೆರೆ ಹೂಳು ಎತ್ತುವ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿಕಾರರಿಗೆ ಮಸ್ಕಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಾನಂದರೆಡ್ಡಿ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರತಿಯೊಬ್ಬರು ಮತದಾನ ಮಾಡಿ
ಈ ವೇಳೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರ ಕಾರ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಮತದಾನ ಮಾಡಿ ಪ್ರಜಾಪ್ರಭುತ್ವದ ನೈಜತೆಯನ್ನು ಕಾಪಾಡಬೇಕು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಚುನಾವಣಾ ಆಯೋಗ ಕಾಲ ಕಾಲಕ್ಕೆ ತೆಗೆದುಕೊಂಡ ಕ್ರಮಗಳಿಂದ ಅತ್ಯಂತ ಪಾರದರ್ಶಕವಾಗಿ ಚುನಾವಣೆ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಳ್ಳಲು ಎಲ್ಲರ ಸಹಕಾರ ಅತ್ಯಗತ್ಯ. ವಯೋವೃದ್ಧರು, ಅಂಗವಿಕಲರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ಆಯೋಗ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಿಸಬೇಕು ಎಂದರು.
ಕೂಲಿಕಾರರ ಹಾಜರಾತಿ ಪರಿಶೀಲನೆ
ನರೇಗಾ ಕಾಮಗಾರಿ ಸ್ಥಳದಲ್ಲಿ ಎನ್ಎಂಎಸ್ಎಸ್ ತಂತ್ರಾಂಶದಲ್ಲಿ ಕೂಲಿಕಾರರ ಹಾಜರಾತಿಯನ್ನು ಸಹಾಯಕ ನಿರ್ದೇಶಕ ಶಿವಾನಂದರೆಡ್ಡಿ ಪರಿಶೀಲಿಸಿದರು. ಕೂಲಿಕಾರರ ಹಾಜರಾತಿಯನ್ನು ಸಮರ್ಪಕವಾಗಿ ದಾಖಲಿಸುವ ನಿಟ್ಟಿನಲ್ಲಿ ಸರ್ಕಾರ ನೂತನ ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಮೇಟಿಗಳಿಗೆ ಕೂಲಿಕಾರರು ಸಹಕರಿಸಬೇಕು. ರತ್ನಾಪುರ ಹಟ್ಟಿಯಲ್ಲಿರುವ ಹಳ್ಳವನ್ನು ನರೇಗಾದಡಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಇದನ್ನೋ ಓದಿ: Eid Mubarak: ಸಮಾಜದಲ್ಲಿ ಸೌಹಾರ್ದತೆಯ ಮನೋಭಾವ ಹೆಚ್ಚಲಿ; ಈದ್ ಉಲ್ ಫಿತರ್ ಶುಭಾಶಯ ಕೋರಿದ ಪ್ರಧಾನಿ ಮೋದಿ
ಈ ವೇಳೆ ಮಸ್ಕಿ ತಾಪಂ ಐಇಸಿ ಸಂಯೋಜಕ ಜಿ. ಸತೀಶ್, ಬಿಎಫ್‌ಟಿ ಅನಂತ, ಕಂಪ್ಯೂಟರ್ ಆಪರೇಟರ್‌ಗಳಾದ ದುರ್ಗೇಶ್, ವಸಂತ ಇತರರು ಪಾಲ್ಗೊಂಡಿದ್ದರು.