ಗಂಗಾವತಿ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka election 2023) ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಉಮೇದುವಾರರೊಬ್ಬರ ನಾಮಪತ್ರ ತಿರಸ್ಕೃತಗೊಂಡಿದೆ. ನಾಮಪತ್ರಕ್ಕೆ ಅವರು ಸಹಿ ಹಾಕುವುದನ್ನು ಮರೆತು ನಾಮಪತ್ರ ಸಲ್ಲಿಸಿದ್ದೇ ಇದಕ್ಕೆ ಕಾರಣವಾಗಿದೆ.
ಸಹಿ ಹಾಕುವುದನ್ನೇ ಮರೆತ ಅಭ್ಯರ್ಥಿ
ದೇವಪ್ಪ ಎಂಬ ವ್ಯಕ್ತಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ನಾಮಪತ್ರಗಳ ಪರಿಶೀಲಿಸುವ ಸಂದರ್ಭದಲ್ಲಿ ನಾಮಪತ್ರಕ್ಕೆ ಈ ವ್ಯಕ್ತಿ ಸಹಿ ಮಾಡದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ನಾಮಪತ್ರ ಕ್ರಮಬದ್ಧವಾಗಿಲ್ಲ ಎಂದು ಅಧಿಕಾರಿಗಳು ನಾಮಪತ್ರವನ್ನು ಅಸಿಂಧುಗೊಳಿಸಿದ್ದಾರೆ.
ಇದನ್ನೂ ಓದಿ: Karnataka Election 2023: ಡಿಕೆ ಶಿವಕುಮಾರ್ ನಾಮಪತ್ರ ಅಂಗೀಕಾರ, ಇಂದು ಟೆಂಪಲ್ ರನ್
ಇದು ಒಂದೆ ಕಡೆಯಾದರೆ ಗಂಗಾವತಿಯ ಅಖಾಡದಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ ಬೆಂಗಳೂರು ಮೂಲದ ಗೀತಾ ಎಂಬುವವರ ನಾಮಪತ್ರವೂ ತಿರಸ್ಕೃತಗೊಂಡಿದೆ. ಗೀತಾ ಅವರು ತಮ್ಮ ವಿಳಾಸದ ದೃಢೀಕೃತ ದಾಖಲೆಗಳನ್ನು ಸಲ್ಲಿಸಿದ ಹಿನ್ನೆಲೆ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕಾರ ಮಾಡಿದ್ದಾರೆ. ಗಂಗಾವತಿ ವಿಧಾನಸಭೆ ಕ್ಷೇತ್ರಕ್ಕೆ ಒಟ್ಟು 33 ನಾಮಪತ್ರ ಸಲ್ಲಿಕೆಯಾಗಿದ್ದು, ಈ ಪೈಕಿ ಎರಡು ನಾಮಪತ್ರಗಳು ತಿರಸ್ಕೃತವಾಗಿವೆ. ಇನ್ನುಳಿದ 31 ನಾಮಪತ್ರ ಕ್ರಮಬದ್ಧವಾಗಿವೆ. ಇದರಲ್ಲಿ ಒಬ್ಬರು ಮಹಿಳೆ ಕಣದಲ್ಲಿ ಉಳಿದುಕೊಂಡಿದ್ದಾರೆ. ಎಂಟು ಜನ ಪಕ್ಷೇತರರು ಸೇರಿದಂತೆ ಒಟ್ಟು 31 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.