ಸಾಗರ: “ಕ್ಷೇತ್ರ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿ ಇದ್ದು, ಎಲ್ಲ ರಾಜಕೀಯ ಪಕ್ಷಗಳು ನ್ಯಾಯಸಮ್ಮತ ಚುನಾವಣೆಗೆ ಸಹಕಾರ ನೀಡಬೇಕು” ಎಂದು ಚುನಾವಣಾಧಿಕಾರಿ ಪಲ್ಲವಿ ಸಾತೇನಹಳ್ಳಿ ತಿಳಿಸಿದರು.
ಇಲ್ಲಿನ ಉಪ ವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ (ಮಾ.30) ನಡೆದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷದ ಪ್ರಮುಖರು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಗವಳ್ಳಿ, ಚೂರಿಕಟ್ಟೆ, ನಾಗೋಡಿ, ಜಂಬಗಾರು ಮತ್ತು ಬಟ್ಟೆಮಲ್ಲಪ್ಪದಲ್ಲಿ ಚೆಕ್‍ಫೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆ ನಡೆಸಲಾಗುತ್ತಿದೆ. ಚುನಾವಣಾ ಅಕ್ರಮ ತಡೆಯಲು ಸಾರ್ವಜನಿಕರು ಆಡಳಿತಕ್ಕೆ ಸಹಕಾರ ನೀಡಬೇಕು. ಅಕ್ರಮ ಕಂಡು ಬಂದಲ್ಲಿ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 08183-226601ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಯಾರು ಬೇಕಾದರೂ ಕರೆ ಮಾಡಿ ದೂರು ನೀಡಬಹುದು. ವ್ಯಕ್ತಿಯೊಬ್ಬರು ಒಂದು ಲಕ್ಷ ರೂ.ವರೆಗೆ ನಗದು ತೆಗೆದುಕೊಂಡು ಹೋಗಬಹುದು. ಹೆಚ್ಚಿನ ಮೊತ್ತ ತೆಗೆದುಕೊಂಡು ಹೋಗುವವರು ಹಣಕ್ಕೆ ಸಂಬಂಧಪಟ್ಟ ಅಗತ್ಯ ದಾಖಲೆ ನೀಡಬೇಕು. ಇಲ್ಲವಾದಲ್ಲಿ ಅದನ್ನು ವಶಪಡಿಸಿಕೊಳ್ಳಲಾಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: Air India : ಎಸ್‌ಬಿಐ, ಬಿಒಬಿಯಿಂದ 14,000 ಕೋಟಿ ರೂ. ಸಾಲ ಪಡೆದ ಏರ್ ಇಂಡಿಯಾ
“ಚುನಾವಣೆಗೆ ಸಂಬಂಧಪಟ್ಟಂತೆ ಸಭೆ ಸಮಾರಂಭ ನಡೆಸುವವರ ಅನುಕೂಲಕ್ಕಾಗಿ ಸಿಂಗಲ್ ವಿಂಡೋ ಸಿಸ್ಟಂನಡಿ ಪರವಾನಿಗೆ ನೀಡಲಾಗುತ್ತದೆ. ಈಗಾಗಲೇ ಶಾಂತಿಯುತ ಚುನಾವಣೆ ನಡೆಸಲು ಬೇಕಾದ ಅಗತ್ಯ ಸಿದ್ಧತೆಯನ್ನು ಆಡಳಿತ ಮಾಡಿಕೊಂಡಿದ್ದು, ವಿವಿಧ ಇಲಾಖೆಯ ಅಧಿಕಾರಿಗಳ ಜತೆ ಪೊಲೀಸ್ ಇನ್ನಿತರ ತಂಡ ರಚಿಸಲಾಗಿದೆ” ಎಂದು ಹೇಳಿದರು.
ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನಾಗೇಶ್ ಬ್ಯಾಲಾಳ್, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರಮುಖರು ಹಾಜರಿದ್ದರು.