Site icon Vistara News

Karnataka Election: ಕರ್ನಾಟಕದಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿದೆ ಎಂದು ದೇಶದ ಎಲ್ಲೇ ಕೇಳಿದರೂ 40 ಪರ್ಸೆಂಟ್‌ ಹೇಳುತ್ತಾರೆ: ಸುರ್ಜೇವಾಲ

Randeep Singh Surjewala karwar

#image_title

ಕಾರವಾರ: “ದೇಶದ ಯಾವುದೇ ಮೂಲೆಗೆ ತೆರಳಿ, ಕರ್ನಾಟಕದಲ್ಲಿ ಯಾವ ಸರ್ಕಾರದ ಆಡಳಿತ ಇದೆ ಎಂದು ಕೇಳಿದರೆ 40 ಪರ್ಸೆಂಟ್ ಸರ್ಕಾರ ಎನ್ನುತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಯಾರು ಎಂದು ಕೇಳಿದರೆ ಪೇ ಸಿಎಂ ಎನ್ನುತ್ತಾರೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಹಳಿಯಾಳ ಪಟ್ಟಣದ ಚಂದಾವನದಲ್ಲಿ ಸೋಮವಾರ (ಮಾ.6) ಆಯೋಜಿಸಲಾಗಿದ್ದ ಕಾಂಗ್ರೆಸ್ ಯೋಜನೆಗಳ ಗ್ಯಾರೆಂಟಿ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

“ಪ್ರಧಾನಿ ನರೇಂದ್ರ ಮೋದಿ 8 ಬಾರಿ ರಾಜ್ಯಕ್ಕೆ ಭೇಟಿ ನೀಡಿ ತೆರಳಿದ್ದಾರೆ. ಆದರೆ ಎಲ್ಲಿಯೂ 40 ಪರ್ಸೆಂಟ್ ಆರೋಪದ ಬಗ್ಗೆ ಉತ್ತರಿಸಿಲ್ಲ. ಬಿಜೆಪಿ ಕಾರ್ಯಕರ್ತರೇ ಆಗಿದ್ದ ಮೃತ ಸಂತೋಷ್ ಪಾಟೀಲ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಸಂತೋಷ್‌ ಅವರು ಬಿಜೆಪಿ ಪರ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದರು. ಆದರೆ ತಮ್ಮ ಕಾರ್ಯಕರ್ತರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ” ಎಂದು ಆರೋಪಿಸಿದರು.

ಇದನ್ನೂ ಓದಿ: Elephant death: ವಿದ್ಯುತ್ ತಂತಿ ತಗುಲಿ ಮೂರು ಕಾಡಾನೆಗಳ ದಾರುಣ ಸಾವು; ಕಣ್ಣಂಚಲ್ಲಿ ನೀರು ತರಿಸಿದ ತಬ್ಬಲಿ ಮರಿಗಳ ಗೋಳಾಟ

ಬಿಜೆಪಿಯವರೇ, ನಿಮಗೆ ಇನ್ನೆಷ್ಟು ಹಣ ಬೇಕು ಎಂದು ಹೇಳಿ‌, ನಾವು ಪ್ರತಿಯೊಬ್ಬರ ಬಳಿ ಹಣ ಸಂಗ್ರಹಿಸಿಯಾದರೂ ನೀಡುತ್ತೇವೆ. ಆದರೆ, ಸಂತೋಷ್‌ ಪಾಟೀಲ್ ಅವರನ್ನು ವಾಪಸ್ ನೀಡುವುದು ನಿಮಗೆ ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು. ಕೆಲ ದಿನಗಳ ಹಿಂದೆ ಬಿಜೆಪಿ ಶಾಸಕನ ಪುತ್ರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣದಲ್ಲಿ ಶಾಸಕ ನಾಪತ್ತೆಯಾಗಿ ನಾಲ್ಕು ದಿನ ಕಳೆದರೂ ಆತನನ್ನು ಹುಡುಕಲು ಸರ್ಕಾರದಿಂದ ಆಗಿಲ್ಲ. ಲುಕ್‌ಔಟ್ ನೋಟಿಸ್ ನೀಡಿದರೂ ಅವರದ್ದೇ ಪಕ್ಷದ ಶಾಸಕನನ್ನು ಹಿಡಿಯಲು ಆಗಿಲ್ಲ, ಇನ್ನು ಅಪರಾಧಿಗಳನ್ನು, ಗೂಂಡಾಗಳನ್ನು ಹಿಡಿಯುವುದು ಈ ಸರ್ಕಾರದಿಂದ ಸಾಧ್ಯವಿದೆಯೇ?” ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: JDS Politics: ಲಕ್ಷ್ಮೀನರಸಿಂಹ ಸ್ವಾಮಿ‌ ದೇವಾಲಯದ ಸಂಪೂರ್ಣ ಉಸ್ತುವಾರಿ ಹೊತ್ತ ಪ್ರಜ್ವಲ್‌ ರೇವಣ್ಣ; ಮುಂದುವರಿದ ಕೈ-ದಳ ಜಟಾಪಟಿ

“ಬಿಜೆಪಿಯಂತಹ ಬೆಕ್ಕನ್ನು ಹಾಲು ಕಾಯಲು ನಿಯೋಜಿಸಲಾಗಿದೆ. ಇವರು ನಮ್ಮ ಮಕ್ಕಳ ಭವಿಷ್ಯವನ್ನು ಕಸಿಯುತ್ತಿದ್ದಾರೆ. ಗುತ್ತಿಗೆ ಕಾಮಗಾರಿ, ಹುದ್ದೆಗಳ ವರ್ಗಾವಣೆ, ಉದ್ಯೋಗಗಳನ್ನೂ ಬಿಜೆಪಿ ಸರ್ಕಾರ ಹಣ ಮಾಡಲು ಬಳಸಿಕೊಳ್ಳುತ್ತಿದೆ. ನಾವೆಲ್ಲರೂ ಒಟ್ಟಾಗಿ ನಿಂತುಕೊಳ್ಳದಿದ್ದಲ್ಲಿ ಬಿಜೆಪಿ ಇಡೀ ಕರ್ನಾಟಕವನ್ನೇ ಮಾರಾಟ ಮಾಡಲಿದೆ. ಇದೀಗ ಬಿಜೆಪಿಯಲ್ಲಿ ಹಿಂಸೆಯ ರಾಜಕಾರಣ ಪ್ರಾರಂಭವಾಗಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿಯಂತಹ ಹಲವಾರು ಮುಖಂಡರು ಹಿಂಸೆಯ ರಾಜಕಾರಣಕ್ಕೆ ಬಲಿಯಾಗಿದ್ದಾರೆ. ಆದರೆ, ಇಷ್ಟೆಲ್ಲ ಬಲಿದಾನಗಳಾಗಿದ್ದರೂ ಭಾರತ ಇನ್ನೂ ಜೀವಂತವಾಗಿದೆ. ನಾಳೆ ಸಿ‌ದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಆರ್.ವಿ.ದೇಶಪಾಂಡೆ ಸೇರಿ ಎಲ್ಲ ಮುಖಂಡರನ್ನೂ ಹತ್ಯೆ ಮಾಡಿದರೂ ದೇಶ ಜೀವಂತವಾಗಿರಲಿದೆ” ಎಂದು ಹೇಳಿದರು.

ಇದನ್ನೂ ಓದಿ: WPL 2023: ಡೆಲ್ಲಿ ಕ್ಯಾಪಿಟಲ್ಸ್​ ಸವಾಲಿಗೆ ಸಜ್ಜಾದ ಯುಪಿ ವಾರಿಯರ್ಸ್​

“ಕಾಂಗ್ರೆಸ್ ಘೋಷಿಸಿರುವ ಗ್ಯಾರೆಂಟಿ ಯೋಜನೆಗಳಿಗೆ ಹೆದರಿ ಬಿಜೆಪಿಯವರು ಕಾಂಗ್ರೆಸ್ ಮುಖಂಡರನ್ನು ಹತ್ಯೆ ಮಾಡುವ ಮಾತನ್ನಾಡುತ್ತಿದ್ದಾರೆ. ಹೀಗಾಗಿ ಕರ್ನಾಟಕಕ್ಕಾಗಿ ಎಲ್ಲರೂ ಒಟ್ಟಾಗಿ ಕಾಂಗ್ರೆಸ್‌ನೊಂದಿಗೆ ನಿಂತುಕೊಳ್ಳಿ. ಕಾಂಗ್ರೆಸ್ ಮುಖಂಡರನ್ನು ಹತ್ಯೆ ಮಾಡಿದರೂ ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ಗ್ಯಾರೆಂಟಿ ಯೋಜನೆಗಳನ್ನು ತಲುಪಿಸಲಿದ್ದಾರೆ” ಎಂದು ಸುರ್ಜೇವಾಲ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ ಪಟೇಲ್, ಶಾಸಕ ಆರ್ ವಿ ದೇಶಪಾಂಡೆ, ಕಾಂಗ್ರೆಸ್ ಮುಖಂಡರಾದ ಸಲೀಂ ಅಹ್ಮದ್, ಅಹ್ಮದ್ ನಲಪಾಡ್ ಸೇರಿದಂತೆ ಜಿಲ್ಲೆಯ ನಾಯಕರು ಉಪಸ್ಥಿತರಿದ್ದರು.

ಇದನ್ನೂ ಓದಿ: Karnataka Board Exams 2023 : 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆ; ಪ್ರವೇಶ ಪತ್ರ ಬಿಡುಗಡೆ

Exit mobile version