ರಿಪ್ಪನ್ಪೇಟೆ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಈ ಬಾರಿ ಕಾಂಗ್ರೆಸ್ ಪಕ್ಷ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಹಾಗೂ ಸೊರಬ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಿಪ್ಪನ್ಪೇಟೆ ಸಮೀಪದ ಕಗ್ಗಲಿಜಡ್ಡು ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶದಿಂದ ಶರಾವತಿ ಮುಳುಗಡೆಯಾಗಿ ಅಲ್ಲಿನ ರೈತರು ಮನೆಮಠವನ್ನು ಕಳೆದುಕೊಂಡರು. ಆ ಸಂತ್ರಸ್ತರಲ್ಲಿ ಹೆಚ್ಚು ಜನರು ಹೊಸನಗರ ತಾಲೂಕಿನಲ್ಲಿ ನೆಲೆಸಿದ್ದಾರೆ. ರಾಜ್ಯಕ್ಕೆ ಬೆಳಕು ನೀಡಿದ ಸಂತ್ರಸ್ತರು ಹಣತೆಯ ಬುಡದಲ್ಲಿನ ಕತ್ತಲೆಯಲ್ಲಿ ಬದುಕುವಂತಾಗಿದೆ. ಅವರ ಜೀವನೋಪಾಯಕ್ಕಾಗಿ ಬಗರ್ಹುಕುಂ ಜಮೀನು ಸಾಗುವಳಿ ಮಾಡಿರುವ ರೈತರಿಗೆ ಹಕ್ಕು ಪತ್ರ ನೀಡುವಲ್ಲಿ ರಾಜ್ಯದ ಬಿಜೆಪಿ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ನಾನು ಸರ್ಕಾರದ ಗಮನಸೆಳೆಯುವ ಉದ್ದೇಶದಿಂದಾಗಿ ಪಾದಯಾತ್ರೆ ನಡೆಸಿದ್ದೇನೆ. ಆಗ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿಯವರು 15 ದಿನದೊಳಗೆ ನಿರಾಶ್ರಿತರಿಗೆ ಹಕ್ಕುಪತ್ರ ಕೊಡುವುದಾಗಿ ಸುಳ್ಳು ಭರವಸೆ ನೀಡಿದರು.” ಎಂದು ದೂರಿದರು.
ಬಿಜೆಪಿಯವರ ಡಬಲ್ ಎಂಜಿನ್ ಸರ್ಕಾರದವರಿಗೆ ಗ್ರಾಮೀಣ ರೈತರ ಬವಣೆ ತಿಳಿಯಲ್ಲಿಲ್ಲವೇ ಎಂದ ಅವರು “ನಮ್ಮ ತಂದೆ ಬಂಗಾರಪ್ಪ ಅವರ ಆಭಿಮಾನಿ ದೇವರು ನೀವು. ನಿಮ್ಮನ್ನು ತಂದೆಯ ಸ್ಥಾನದಲ್ಲಿ ನೋಡುವ ಪುಣ್ಯ ನನಗೆ ಬಂದಿದೆ” ಎಂದು ಹೇಳಿದರು.
“ಗ್ಯಾರಂಟಿ ಕಾರ್ಡ್ ಮತ್ತು ಉಚಿತ 200 ಯುನಿಟ್ ವಿದ್ಯುತ್, ಬಿಪಿಎಲ್ ಪಡಿತರದಾರರಿಗೆ 10 ಕೆ.ಜಿ.ಅಕ್ಕಿ ಹೀಗೆ ಹಲವು ಜನಹಿತ ಕಾರ್ಯಕ್ರಮಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕಾರ್ಯಗತಗೊಳಿಸಲಾಗುವುದು. ನಮ್ಮ ಕಾರ್ಯಕರ್ತರು ಈ ಗ್ಯಾರೆಂಟಿ ಕಾರ್ಡ್ ಕುರಿತು ಮತದಾರರಲ್ಲಿ ಮನವರಿಕೆ ಮಾಡಬೇಕು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಳಲೆಯ ಬೇಕರಿ ಸುರೇಶ್ ಮತ್ತು ಇನ್ನಿತರ ಯುವಕರ ತಂಡ ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ ಪಕ್ಷಕ್ಕೆ ಮಧು ಬಂಗಾರಪ್ಪ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.
ಸಭೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಬಿ.ಪಿ.ರಾಮಚಂದ್ರ, ಶ್ವೇತಾ ಆರ್.ಬಂಡಿ, ಎಐಸಿಸಿ ವಕ್ತಾರ ಆದರ್ಶ ಹುಂಚದಕಟ್ಟೆ, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಬಿ.ಜಿ.ಚಂದ್ರುಮೌಳಿ, ತಳಲೆಗೌರಮ್ಮ, ಕಲ್ಲೂರು ವಾಸಪ್ಪಗೌಡ, ಅಮ್ಮಿರ್ಹಂಜಾ ರಿಪ್ಪನ್ಪೇಟೆ, ಕಲ್ಲೂರು ತೇಜಮೂರ್ತಿ, ಕೆ.ಎಸ್.ಲೋಕಪ್ಪಗೌಡ, ಷಣ್ಮುಖಪ್ಪ, ವೀರಪ್ಪ, ಸಳ್ಳಿ ಸ್ವಾಮಿರಾವ್, ಮಳವಳ್ಳಿ ಮಂಜುನಾಥ, ಗುರುಜಯನಗರ, ಧರ್ಮಪ್ಪ ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.