ಗುಬ್ಬಿ : ತುಮಕೂರಿನ ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ (Karnataka Election) ಎಸ್.ಡಿ. ದಿಲೀಪ್ ಕುಮಾರ್ ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ದುಷ್ಟ ಶಕ್ತಿಯನ್ನು ಸಂಹರಿಸಬೇಕೆಂದರೇ ಅಮಾವಾಸ್ಯೆ ಸರಿಯಾದ ದಿನವೆಂದು ಯೋಚಿಸಿ ಇಂದೇ ನಾಮಪತ್ರ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ದಿಲೀಪ್ ಕುಮಾರ್ ಅವರು ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ತಾಲೂಕು ಕಚೇರಿಯವರೆಗೆ ಸಾವಿರಾರು ಕಾರ್ಯಕರ್ತರ ಮೆರವಣಿಗೆಯಲ್ಲಿ ಸಾಗಿ ಬಂದರು. ನಂತರ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, “ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಹಾಗಾಗಿ ಜನರೇ ತಾಲೂಕಿನಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ಅದರಂತೆ ಈ ಬಾರಿ ಬದಲಾವಣೆಯಾಗುವುದು ಸತ್ಯ. ನಮ್ಮ ಡಬಲ್ ಎಂಜಿನ್ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳು ನಮಗೆಲ್ಲ ಶ್ರೀರಕ್ಷೆ ಆಗಿದೆ” ಎಂದು ಅವರು ಹೇಳಿದ್ದಾರೆ.
“ತಾಲೂಕಿನಲ್ಲಿ ನೀರಾವರಿ, ಶಿಕ್ಷಣ, ಕೈಗಾರಿಕೆ ಅಭಿವೃದ್ಧಿ ಮಾಡಲಾಗುವುದು. ನಮ್ಮದು ಕಲ್ಪತರು ಜಿಲ್ಲೆಯಾಗಿರುವುದರಿಂದ ತೆಂಗು ಪಾರ್ಕ್ ನಿರ್ಮಾಣ ಮಾಡುವ ಮೂಲಕ ನಮ್ಮ ರೈತರ ಬೆಳೆದಿರುವ ಬೆಳೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಗ್ರಾಮಾಂತರ ಭಾಗದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು ಹಾಗೆಯೇ ಎಲ್ಲ ಸಮುದಾಯಗಳಿಗೆ ಸಮುದಾಯ ಭವನ ವಸತಿ ನಿಲಯ ನೀಡುವುದು ನಮ್ಮ ಆಶಯವಾಗಿದೆ. ನಾನು ಶಾಸಕ ಎಂಬುದಕ್ಕಿಂತ ನಿಮ್ಮ ಸೇವಕನಾಗಿ ಕೆಲಸ ಮಾಡಲು ಸಿದ್ಧನಾಗಿದ್ದೇನೆ. ಈ ಬಾರಿ ತಾಲೂಕಿನಲ್ಲಿ ಇಡೀ ಪಕ್ಷದ ಮುಖಂಡರು ಕಾರ್ಯಕರ್ತರು ಒಂದಾಗಿದ್ದು ತಾಲೂಕಿನಲ್ಲಿ ಬಿಜೆಪಿ ವಿಜಯಪತಾಕೆ ಹಾರುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, “ಇಡೀ ರಾಜ್ಯದಲ್ಲಿ ಬಿಜೆಪಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಗುಬ್ಬಿ ತಾಲೂಕಿನ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಗೊಂದಲಗಳು ಇಲ್ಲದೆ ಎಲ್ಲ ಮುಖಂಡರು ಒಮ್ಮತದ ಅಭಿಪ್ರಾಯದಲ್ಲಿ ಎಸ್.ಬಿ. ದಿಲೀಪ್ ಕುಮಾರ್ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ” ಎಂದರು.
ಇದನ್ನೂ ಓದಿ: Dharma dangal : ಗುಬ್ಬಿ ದೇವಾಲಯಕ್ಕೂ ಹರಡಿದ ವ್ಯಾಪಾರ ದಂಗಲ್: ಜಾತ್ರೆಯಲ್ಲಿ ಅನ್ಯ ಧರ್ಮೀಯರ ಅಂಗಡಿಗೆ ವಿರೋಧ
“ಜಿ.ಎನ್. ಬೆಟ್ಟಸ್ವಾಮಿ ಪಕ್ಷದಿಂದ ಹೊರಗೆ ಹೋಗಿರುವುದು ಅವರ ವೈಯಕ್ತಿಕ ವಿಚಾರ. ಅದರಿಂದ ನಮಗೆ ಯಾವುದೇ ರೀತಿಯ ಸಮಸ್ಯೆಯೂ ಇಲ್ಲ. ಗುಬ್ಬಿ ತಾಲೂಕಿಗೆ ಎಚ್ಎಎಲ್ ಘಟಕ, ನೀರಾವರಿ ವ್ಯವಸ್ಥೆ ಮಾಡಿದ್ದು ಬಿಜೆಪಿ ಸರ್ಕಾರ. ನಾವು ಮಾಡಿರುವಂತಹ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದು ಹೇಳಿಕೊಂಡು ಓಡಾಡುತ್ತಿರುವವರು ಜಾಸ್ತಿ ಜನ ಇದ್ದಾರೆ. ಅದನ್ನೆಲ್ಲ ಜನರು ನೋಡಿದ್ದಾರೆ. ಈ ಬಾರಿ ಅವರು ಯಾರು ಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತಾರೆ” ಎಂದು ಸಂಸದರು ಹೇಳಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಬಾಬು ಮಾತನಾಡಿ, “ನನ್ನ ಸಹೋದರ ದಿಲೀಪ್, ಈ ಬಾರಿ ಟಿಕೆಟ್ ನೀಡಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಬಿಜೆಪಿ ಪಕ್ಷವನ್ನು ಗೆಲ್ಲಿಸುತ್ತೇವೆ ಎಂಬ ಭರವಸೆ ಇದೆ” ಎಂದು ಹೇಳಿದರು.
ಮೆರವಣಿಗೆಯಲ್ಲಿ ಬಿಜೆಪಿ ಚುನಾವಣೆ ಉಸ್ತುವಾರಿ, ಸಂಸದ ಸಂಜಯ್ ಬಾಟ್ಯಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ, ತಾಲೂಕು ಅಧ್ಯಕ್ಷ ಪಂಚಾಕ್ಷರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೈರಪ್ಪ, ಸದಸ್ಯರಾದ ಕೃಷ್ಣಮೂರ್ತಿ ಶಿವಕುಮಾರ್, ವೀರಭದ್ರಯ್ಯ, ಮುಖಂಡರಾದ ಬಲರಾಮಣ್ಣ, ಹಾರನಹಳ್ಳಿ ಪ್ರಭಾಕರ್, ನಂಜೇಗೌಡ, ವಿಜಯಕುಮಾರ್, ಹಿತೇಶ್, ಅ.ನಾ. ಲಿಂಗಪ್ಪ ಸೇರಿದಂತೆ ಸಾವಿರಾರು ಕಾರ್ಯಕರ್ತರು ಮುಖಂಡರು ಹಾಜರಿದ್ದರು.