ಬೆಂಗಳೂರು: ಇದುವರೆಗೆ ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದ ಮುಳಬಾಗಿಲಿನ ಪಕ್ಷೇತರ ಶಾಸಕ ಎಚ್. ನಾಗೇಶ್ ಅವರು ಕಾಂಗ್ರೆಸ್ ಪಕ್ಷ ಸೇರಲು (Karnataka Election) ಮುಂದಾಗಿದ್ದಾರೆ.
ಸೋಮವಾರ ಅವರು ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಪಕ್ಷ ಸೇರ್ಪಡೆಗೆ ಉತ್ಸುಕತೆ ತೋರಿದರು ಎನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೊತ್ತೂರು ಮಂಜುನಾಥ್ ಅವರು ಕೊನೆಯ ಕ್ಷಣದಲ್ಲಿ ತಾಂತ್ರಿಕ ಕಾರಣಗಳಿಗಾಗಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ಆಗ ಕಾಂಗ್ರೆಸ್ ನಾಗೇಶ್ ಅವರನ್ನು ಬೆಂಬಲಿಸಿತ್ತು. ಮತ್ತು ಈ ಕಾರಣದಿಂದ ನಾಗೇಶ್ ಗೆಲುವು ಸಾಧಿಸಿದ್ದರು. ಮೈತ್ರಿ ಸರಕಾರದ ಅವಧಿಯಲ್ಲಿ ಸರಕಾರವನ್ನು ಬೆಂಬಲಿಸಿದ್ದ ನಾಗೇಶ್ ಬಳಿಕ ಆಪರೇಷನ್ ಕಮಲದ ಮೂಲಕ ಹುಟ್ಟಿಕೊಂಡ ಬಿಜೆಪಿ ನೇತೃತ್ವದ ಸರಕಾರದ ಬೆಂಬಲಕ್ಕೆ ನಿಂತರು. ಈ ವೇಳೆ ಅವರನ್ನು ಮಂತ್ರಿ ಮಾಡಿ ಅಬಕಾರಿ ಖಾತೆಯನ್ನೂ ನೀಡಲಾಗಿತ್ತು.
ಈಗ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಹವಾ ಹೆಚ್ಚಾಗಿರುವುದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಲು ನಿರ್ಧರಿಸಿದ್ದು ಎಚ್. ನಾಗೇಶ್ ಅವರನ್ನು ಕೈ ಪಕ್ಷದ ಕಡೆಗೆ ಸೆಳೆದಿದೆ ಎನ್ನಲಾಗಿದೆ.
ಟಿಕೆಟ್ ಕೊಟ್ಟರೆ ಸೇರುತ್ತೇನೆ ಎಂದ ನಾಗೇಶ್, ಭರವಸೆ ನೀಡದ ಡಿಕೆಶಿ
ಮುಳಬಾಗಿಲು ಕ್ಷೇತ್ರದಿಂದ ಟಿಕೆಟ್ ನೀಡುವುದಾದರೆ ತಾನು ಕಾಂಗ್ರೆಸ್ ಸೇರಲು ಸಿದ್ಧ ಎಂದು ಎಚ್. ನಾಗೇಶ್ ಅವರು ಡಿ.ಕೆ. ಶಿವಕುಮಾರ್ ಮುಂದೆ ಹೇಳಿದರು ಎನ್ನಲಾಗಿದೆ. ಆದರೆ, ಟಿಕೆಟ್ ನೀಡುವ ಬಗ್ಗೆ ಡಿಕೆ ಶಿವಕುಮಾರ್ ಭರವಸೆ ನೀಡಿಲ್ಲ ಎನ್ನಲಾಗಿದೆ.
ಮುಳಬಾಗಿಲಿನಲ್ಲಿ ಈ ಬಾರಿ ಹೆಚ್ಚು ಆಕಾಂಕ್ಷಿಗಳು ಇದ್ದಾರೆ. ಕೆ. ಮುನಿಯಪ್ಪ, ಕೊತ್ತೂರು ಮಂಜುನಾಥ್ ಸೇರಿದಂತೆ ಒಂಬತ್ತು ಜನ ಆಕಾಂಕ್ಷಿಗಳು ಇದ್ದಾರೆ. ಹೀಗಾಗಿ ಈ ಕ್ಷಣದಲ್ಲೇ ಟಿಕೆಟ್ ಭರವಸೆ ನೀಡಲಾಗದು. ಮೊದಲು ಪಕ್ಷ ಸೇರಿಕೊಳ್ಳಿ. ನಾನು ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡಿ ತಿಳಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು ಎನ್ನಲಾಗಿದೆ. ಪಕ್ಷ ಸೇರ್ಪಡೆಗೆ ದಿನಾಂಕವನ್ನು ತಿಳಿಸುವುದಾಗಿ ಡಿಕೆಶಿ ತಿಳಿಸಿದರು ಎನ್ನಲಾಗಿದೆ.
ಇದನ್ನೂ ಓದಿ | Karnataka Election | ಸಿದ್ದರಾಮಯ್ಯ ಸ್ಪರ್ಧಾ ಅಖಾಡವಾಯ್ತು ಕೋಲಾರ; ಶುರುವಾಗಿದೆ ರಾಜಕೀಯ ಲೆಕ್ಕಾಚಾರ