ಹೊನ್ನಾಳಿ: ಹೊನ್ನಾಳಿ ವಿಧಾನಸಭಾ (honnali constituency) (Karnataka Election) ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ( JDS candidate) ಶಿವಮೂರ್ತಿ ಗೌಡ ನಾಪತ್ತೆಯಾಗಿದ್ದಾರೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮ ನಾಮಪತ್ರ ಸಲ್ಲಿಸಿದ್ದ ಶಿವಮೂರ್ತಿ ಗೌಡ ಅವರು ಸೋಮವಾರದಂದು ಪಕ್ಷದ ಮುಖಂಡರಿಗೆ ತಿಳಿಸದೆ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಜೆಡಿಎಸ್ ತಾಲೂಕು ಕಾರ್ಯಕರ್ತರು ಹಾಗೂ ಮಹಿಳಾ ಅಧ್ಯಕ್ಷರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, “ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿ ಶಿವಮೂರ್ತಿ ಗೌಡ ಅವರು ನಮ್ಮನ್ನು ಕೇಳದೆ ನಾಮಪತ್ರವನ್ನು ವಾಪಸ್ ತೆಗೆದುಕೊಂಡಿದ್ದಾರೆ. ಈಗ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಯಾವ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ಗೊತ್ತಿಲ್ಲ. ಹಣದ ಆಮಿಷಕ್ಕೆ ಬಲಿಯಾಗಿ ಜೆಡಿಎಸ್ ಕಾರ್ಯಕರ್ತರಿಗೆ ಕೈಯಲ್ಲಿ ಚಿಪ್ಪು ಕೊಟ್ಟು ಓಡಿಹೋಗಿದ್ದಾರೆ. ಪಕ್ಷದ ಮರ್ಯಾದೆಯನ್ನು ತೆಗೆದಿದ್ದಾರೆ” ಎಂದು ದೂರಿದ್ದಾರೆ.
“ಇಂಥವರು ನಮ್ಮ ತಾಲೂಕಿನಲ್ಲಿ ಇದ್ದರೇನು? ಇಲ್ಲದಿದ್ದರೇನು? ಇಂಥವರಿಗೆ ಮತ ಹಾಕಲು ಯಾರೂ ಹೋಗಬಾರದು. ಶಿವಮೂರ್ತಿ ಅವರು ನಮ್ಮ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಅನ್ಯಾಯ ಮಾಡಿ ಹೋಗಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿದ ಶಿವಮೂರ್ತಿ ಗೌಡ ಹಾಗೂ ತಾಲೂಕು ಅಧ್ಯಕ್ಷರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ” ಎಂದು ತಿಳಿಸಿದರು.
ಹಾಗೆಯೇ “ನಾವು ತಾಲೂಕಿನಲ್ಲಿ ಸಂಘಟನೆಯನ್ನು ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೆವು. ಇಂತಹ ಅಭ್ಯರ್ಥಿಗೆ ನಾವು ಬಿ ಫಾರಂ ಕೊಡಿಸಿದ್ದು ನಮಗೆ ಮುಖಭಂಗವಾಗಿದೆ. ನಮ್ಮ ಜಿಲ್ಲಾಧ್ಯಕ್ಷರಿಗೂ ಹಾಗೂ ರಾಜ್ಯ ಅಧ್ಯಕ್ಷರಿಗೂ ನಾವು ಈ ವಿಷಯವನ್ನು ತಿಳಿಸುತ್ತೇವೆ” ಎಂದಿದ್ದಾರೆ.
ಇದನ್ನೂ ಓದಿ: Karnataka Election: ಕೊಟ್ಟ ಮಾತಿನಂತೆ ನಡೆಯುವ ಏಕೈಕ ಗಂಡು ಕುಮಾರಸ್ವಾಮಿ: ಎಚ್.ಡಿ. ದೇವೇಗೌಡ
“ನಾವೆಲ್ಲರೂ ಬೇರೆ ಯಾವ ಪಕ್ಷವನ್ನೂ ಬೆಂಬಲಿಸದೆ ಜೆಡಿಎಸ್ ಪಕ್ಷದಲ್ಲಿ ಇರುತ್ತೇವೆ. ಅನ್ಯಾಯದ ವಿರುದ್ಧ ಹೋರಾಡುತ್ತೇವೆ” ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ನ್ಯಾಮತಿ ಮಹಿಳಾ ಘಟಕದ ಅಧ್ಯಕ್ಷರು ಹಾಗೂ ನಾಮತಿ ಅಧ್ಯಕ್ಷರಾದ ಪಾರ್ವತಮ್ಮ ಮತ್ತು ಹೊನ್ನಾಳಿ ಘಟಕದ ಪಕ್ಷದ ಕಾರ್ಯದರ್ಶಿ ರಮೇಶ್ ಇನ್ನೂ ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.