ತೀರ್ಥಹಳ್ಳಿ: ʼಆರಗ ಜ್ಞಾನೇಂದ್ರ ಅಡಕೆ ಬೆಳೆಯಬೇಡಿ ಎಂದು ಹೇಳುತ್ತೀರಾ? ನಮ್ಮಲ್ಲಿ ವೀಳ್ಯದೆಲೆ ಅಡಕೆ ಇಟ್ಟು ದೇವರಂತೆ ಕಾಣುತ್ತೇವೆ. ಇದು ನಮ್ಮ ಸಂಸ್ಕೃತಿ. ಇಂತಹ ಸಂಸ್ಕೃತಿಯ ಭಾಗವಾದ ಅಡಕೆಯನ್ನು ಬೇಡ ಎಂದು ಹೇಳುವ ನಿಮ್ಮ ಸಂಸ್ಕೃತಿ ಯಾವುದು?ʼ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಅವರು ತೀರ್ಥಹಳ್ಳಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ʼಬೆಳಗಾವಿಯಲ್ಲಿ ಆರಂಭವಾದ ಪ್ರಜಾಧ್ವನಿ ಯಾತ್ರೆಯು ಜಿಲ್ಲಾ ಕೇಂದ್ರ ಪ್ರವಾಸ ಮುಗಿಸಿ ತಾಲೂಕು ಕೇಂದ್ರಗಳಿಗೆ ಬಂದಿದೆʼ ಎಂದರು.
‘ನಾನು ತೀರ್ಥಹಳ್ಳಿ ಜನರ ಮೇಲೆ ನಂಬಿಕೆ ಇಟ್ಟು ಇಲ್ಲಿಗೆ ಬಂದಿದ್ದೇನೆ. ಇದುವರೆಗೂ ಮಾಡಿರುವ ಸಭೆಗಳಲ್ಲಿ ಸೌಮ್ಯ, ತಾಳ್ಮೆ ಹಾಗೂ ಶಾಂತಿಯುತ ಸಭೆ ನೋಡಿರಲಿಲ್ಲ. ನಿಮ್ಮಲ್ಲಿ ಪ್ರಜ್ಞಾವಂತಿಕೆ ಎದ್ದು ಕಾಣುತ್ತಿದೆ’ ಎಂದು (Karnataka Election) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ʼನಾವು ಉತ್ತಮ ಆಡಳಿತ ನೀಡಿದ್ದರೂ ಜನ ನಮ್ಮನ್ನು ಬೆಂಬಲಿಸಲಿಲ್ಲ. ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನು ದೂರವಿಡಲು ಕುಮಾರಸ್ವಾಮಿ ಅವರಿಗೆ ಬೇಷರತ್ ಬೆಂಬಲ ನೀಡಿದೆವು. ನಾನು 40 ವರ್ಷ ಅವರ ಕುಟುಂಬದ ವಿರುದ್ಧ ರಾಜಕೀಯ ಹೋರಾಟ ಮಾಡಿಕೊಂಡು ಬಂದಿದ್ದರೂ, ಈ ರಾಜ್ಯಕ್ಕಾಗಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿ ಕೆಲಸ ಮಾಡಿದೆ. ಕುಮಾರಸ್ವಾಮಿ ಅವರು ಸರ್ಕಾರ ಉಳಿಸಿಕೊಳ್ಳಲಿಲ್ಲ. ಬಿಜೆಪಿ ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿತು. ಅಧಿಕಾರಕ್ಕೆ ಬಂದ ನಂತರ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಚುನಾವಣೆಗೂ ಮುನ್ನ 600 ಭರವಸೆ ನೀಡಿದ್ದರು. 550 ಭರವಸೆಯನ್ನೂ ಈಡೇರಿಸಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ 165 ಭರವಸೆ ನೀಡಿ 159 ಅನ್ನು ಈಡೇರಿಸಿದೆʼ ಎಂದು ಹೇಳಿದರು.
ʼಮೋದಿ ಅವರು ಅಚ್ಛೇ ದಿನ್ ನೀಡುತ್ತೇವೆ ಎಂದರು. ಆದರೆ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದ್ರಾ? ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದರು, ಕಪ್ಪು ಹಣವನ್ನು ತಂದು ನಿಮ್ಮ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದರು. ಅವರು ಕೊಟ್ಟ ಮಾತಿನಂತೆ ಯಾವುದಾದರೂ ಕೆಲಸ ಮಾಡಿದ್ದಾರಾ?ʼ ಎಂದು ಪ್ರಶ್ನಿಸಿದರು.
ʼಆರಗ ಜ್ಞಾನೇಂದ್ರ ಅವರು ಕಾರ್ಯಕರ್ತರ ಮೇಲೆ ಕೇಸು ಹಾಕಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ಒಎಂಆರ್ ಶೀಟ್ ತಿದ್ದಿ ಅಕ್ರಮ ಮಾಡಲಾಗಿದೆ. ಸದನದಲ್ಲಿ ಅಕ್ರಮವೇ ನಡೆದಿಲ್ಲ ಎಂದು ಸುಳ್ಳು ಹೇಳಿದರು. ತಪ್ಪು ನಡೆದಿಲ್ಲವಾದರೆ ಐಪಿಎಸ್ ಸೇರಿದಂತೆ ನೂರಕ್ಕೂ ಹೆಚ್ಚು ಜನ ಜೈಲು ಸೇರಿದ್ದು ಯಾಕೆ? ಯುವಕರ ಭವಿಷ್ಯದ ಜತೆ ಈ ಸರ್ಕಾರ ಚೆಲ್ಲಾಟವಾಡುತ್ತಿದೆ. ಅಧಿಕಾರಿಗಳನ್ನು ಜೈಲಿಗೆ ಹಾಕುವುದರ ಜತೆಗೆ ಇದಕ್ಕೆ ಕಾರಣರಾದ ಮಂತ್ರಿಗಳನ್ನು ಒಳಗೆ ಹಾಕಬೇಕು. ಈ ಸರ್ಕಾರದ ಅವಧಿ ಇನ್ನು 60 ದಿನ ಮಾತ್ರ. ಬಿಜೆಪಿಯವರು ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಜನ ಇವರನ್ನು ಮನೆಗೆ ಕಳಿಸುವ ಸಂಕಲ್ಪ ಮಾಡಿದ್ದಾರೆʼ ಎಂದು ಹೇಳಿದರು.
ʼಆರಗ ಜ್ಞಾನೇಂದ್ರ ಅಡಕೆ ಬೆಳೆಯಬೇಡಿ ಎಂದು ಹೇಳುತ್ತೀರಾ? ನಮ್ಮಲ್ಲಿ ವೀಳ್ಯದೆಲೆ ಅಡಕೆ ಇಟ್ಟು ದೇವರಂತೆ ಕಾಣುತ್ತೇವೆ. ಇದು ನಮ್ಮ ಸಂಸ್ಕೃತಿ. ಇಂತಹ ಸಂಸ್ಕೃತಿಯ ಭಾಗವಾದ ಅಡಕೆಯನ್ನು ಬೇಡ ಎಂದು ಹೇಳುವ ನಿಮ್ಮ ಸಂಸ್ಕೃತಿ ಯಾವುದು?ʼ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Pakistan Financial Crisis : ಪಾಕಿಸ್ತಾನದಲ್ಲಿ ಪೆಟ್ರೋಲ್ ಖಾಲಿ! ಪ್ರಮುಖ ನಗರಗಳ ಪೆಟ್ರೋಲ್ ಬಂಕ್‌ಗಳೂ ಬಂದ್!
ʼಶಿವಮೊಗ್ಗ ಅಭಿವೃದ್ಧಿ ಆಗಿದೆ ಎಂದು ಹೇಳುತ್ತಾರೆ. ಅಭಿವೃದ್ಧಿ ಆಗಿದ್ದರೆ, ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆಯಲ್ಲಿ 10 ಲಕ್ಷ ಕೋಟಿ ರೂ. ಬಂದಿದೆ ಎಂದರು. ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಬಂಡವಾಳವೇ ಬಂದಿಲ್ಲ. ಈ ಬಂಡವಾಳ ಬಂದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಆದರೆ ಈ ಸರ್ಕಾರ ಮಲೆನಾಡು ಕರಾವಳಿ ಭಾಗದಲ್ಲಿ ಜಾತಿ, ಧರ್ಮಗಳ ನಡುವೆ ಜಗಳ ಸೃಷ್ಟಿಸಿ ರಾಜಕಾರಣ ಮಾಡುತ್ತಿದೆʼ ಎಂದು ಟೀಕಿಸಿದರು.
ʼನಮ್ಮ ಪಕ್ಷ ಕರಾವಳಿ, ಮಲೆನಾಡು ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ನೀಡಲು ನಿರ್ಧರಿಸಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಈಗಾಗಲೇ ವಿಶೇಷ ಯೋಜನೆ ಘೋಷಣೆ ಮಾಡಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಕಾರ್ಯಕ್ರಮ ಘೋಷಿಸಿದ್ದೇವೆʼ ಎಂದರು.
ಇದನ್ನೂ ಓದಿ: Sara Ali Khan: ಉದಯಪುರದಲ್ಲಿ ಸಾರಾ ಅಲಿ ಖಾನ್-ಕಾರ್ತಿಕ್ ಆರ್ಯನ್; ʻಸಾರ್ತಿಕ್ʼ ಒಂದಾಗಲಿದ್ದಾರೆ ಎಂದ ನೆಟ್ಟಿಗರು
ʼಈ ಸರ್ಕಾರದಲ್ಲಿ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಶೇ.40 ಕಮಿಷನ್ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಹೇಳುತ್ತಾರೆ. ಯತ್ನಾಳ್ ಅವರು ಸಿಎಂ ಹುದ್ದೆಗೆ 2,500 ಕೋಟಿ ರೂ., ಮಂತ್ರಿ ಹುದ್ದೆಗೆ 100 ಕೋಟಿ ರೂ. ನೀಡಬೇಕು ಎಂದಿದ್ದಾರೆ. ಬಿಜೆಪಿ ಶಾಸಕರೇ ಆದ ಗೂಳಿಹಟ್ಟಿ ಶೇಖರ್ ಅವರು ನೀರಾವರಿ ಇಲಾಖೆಯಲ್ಲಿ 22 ಸಾವಿರ ಕೋಟಿ ರೂ. ಅಕ್ರಮದ ಬಗ್ಗೆ ಸಿಎಂಗೆ ದೂರು ನೀಡಿದ್ದಾರೆ. ಈ ಸರ್ಕಾರ ಕಳೆದ ಮೂರುವರೆ ವರ್ಷಗಳಲ್ಲಿ ಜನರ ಬದುಕಿನಲ್ಲಿ ಬದಲಾವಣೆ ತರಲು ಯಾವುದಾದರೂ ಒಂದು ಕಾರ್ಯಕ್ರಮ ಮಾಡಿದ್ದರೆ ಅದನ್ನು ಘೋಷಿಸಲಿ. ಅವರು ಕೇವಲ ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ನಾವು ಬದುಕಿನ ಮೇಲೆ ರಾಜಕೀಯ ಮಾಡುತ್ತಿದ್ದೇವೆʼ ಎಂದು ಹೇಳಿದರು.
ʼಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ. ಈ ಕ್ಷೇತ್ರದಲ್ಲಿ ಇಬ್ಬರು ಟಿಕೆಟ್ ಗೆ ಅರ್ಜಿ ಹಾಕಿದ್ದಾರೆ. ಈ ಇಬ್ಬರನ್ನು ನಾವು ವಿಧಾನ ಸೌಧದಲ್ಲಿ ಕೂರುವಂತೆ ಮಾಡುತ್ತೇವೆ. ನೀವು ಒಗ್ಗಟ್ಟಾಗಿ ಕೆಲಸ ಮಾಡಿ. ನಾವು ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೆ ನೀವು ಅವರ ಪರವಾಗಿ ಕೆಲಸ ಮಾಡಬೇಕುʼ ಎಂದು ಮನವಿ ಮಾಡಿದರು.
ಇದನ್ನೂ ಓದಿ: WhatsApp New Feature: ವಾಟ್ಸಾಪ್‌ನ ಚಾಟ್‌ನೊಳಗೇ 100 ಮೀಡಿಯಾ ಫೈಲ್ ಷೇರ್ ಮಾಡಬಹುದು!
ʼಇನ್ನು ಮುಂದೆ 200 ಯೂನಿಟ್ ವಿದ್ಯುತ್ ಉಚಿತ. ಹೀಗಾಗಿ ನೀವು 200 ಯೂನಿಟ್ ಒಳಗೆ ವಿದ್ಯುತ್ ಬಳಸಿದರೆ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ. ಕೊಡುತ್ತೇವೆ. ವರ್ಷಕ್ಕೆ ಒಟ್ಟು 42 ಸಾವಿರ ರೂ.ವಿನಂತೆ 5 ವರ್ಷಕ್ಕೆ 2 ಲಕ್ಷ ರೂ. ಕೊಡುತ್ತೇವೆ. ನಾನು ಸಿದ್ದರಾಮಯ್ಯ ಸಹಿ ಹಾಕಿರುವ ಗ್ಯಾರಂಟಿ ಕಾರ್ಡ್ ನಿಮ್ಮ ಮನೆಗೆ ಬರುತ್ತದೆ. ಪ್ರತಿ ಮನೆಗೆ ನೀಡಲಾಗುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಏರಿಕೆ ಮಾಡುತ್ತೇವೆ. ಈ ಯೋಜನೆ ಹೇಗೆ ಮಾಡುತ್ತೀರಿ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ಇಂಧನ ಸಚಿವನಾಗಿದ್ದಾಗ 10 ಸಾವಿರ ಮೆ.ವ್ಯಾ ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಅನ್ನು ನಾನು ಅಧಿಕಾರದಿಂದ ಕೆಳಗೆ ಇಳಿಯುವಾಗ 20 ಸಾವಿರ ಮೆ.ವ್ಯಾ ಗೆ ಏರಿಸಿದ್ದೇನೆʼ ಎಂದರು.
ಇದನ್ನೂ ಓದಿ: CA Kuttappa: ಭಾರತ ಬಾಕ್ಸಿಂಗ್ ತಂಡದ ಕೋಚ್ ಸ್ಥಾನಕ್ಕೆ ಕುಟ್ಟಪ್ಪ ಮರು ನೇಮಕ
ʼಬಿಜೆಪಿಯವರು ಮಾತೆತ್ತಿದರೆ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಈ ದೇಶದಲ್ಲಿ ಅಣೆಕಟ್ಟು, ಕೆರೆಗಳನ್ನು ಕಟ್ಟಿದ್ದು ಯಾರು? ಮೆಡಿಕಲ್ ಕಾಲೇಜು, ಎಂಜಿನಿಯರ್ ಕಾಲೇಜು, ಐಐಟಿ, ಸಾರ್ವಜನಿಕ ಉದ್ದಿಮೆ ಆರಂಭಿಸಿದ್ದು ಕಾಂಗ್ರೆಸ್ ಪಕ್ಷʼ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್, ಮಾಜಿ ಸಚಿವರಾದ ಮೋಟಮ್ಮ, ಎಚ್ ಎಂ ರೇವಣ್ಣ, ಕಿಮ್ಮನೆ ರತ್ನಾಕರ, ಮಾಜಿ ಸಂಸದರಾದ ಸಿ ನಾರಾಯಣಸ್ವಾಮಿ, ವಿ ಎಸ್ ಉಗ್ರಪ್ಪ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ, ಮಾಜಿ ಶಾಸಕ ಮಧು ಬಂಗಾರಪ್ಪ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್, ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಮಂಜುನಾಥ್ ಗೌಡ, ಡಿಸಿಸಿ ಅಧ್ಯಕ್ಷ ಸುಂದರೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿಕೇತ್ ರಾಜ್ ಮೌರ್ಯ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ: Dhanush: ಧನುಷ್ ನಟನೆಯ ದ್ವಿಭಾಷಾ ಚಿತ್ರ ವಾತಿ ಟ್ರೈಲರ್ ಔಟ್