ರಾಯಚೂರು: ರಾಜಕೀಯದಿಂದ ದಶಕ ಕಾಲ ದೂರವಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ಒಪ್ಪಿಕೊಳ್ಳದ ಕಾರಣ ಹೊಸದಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿ) ಕಟ್ಟಿದ್ದು, ಈಗ ರಾಯಚೂರಿನಲ್ಲಿ ಬೃಹತ್ ಬೈಕ್ ರ‍್ಯಾಲಿ ಹಾಗೂ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election) ಅಖಾಡವನ್ನು ಸಿದ್ಧಗೊಳಿಸುತ್ತಿದ್ದಾರೆ.
ರಾಯಚೂರಿನ ಸಿಂಧನೂರಿಗೆ ಶುಕ್ರವಾರ (ಜ.೬) ಬೆಳಗ್ಗೆ ಆಗಮಿಸಿದ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರ ಜತೆ ಸಣ್ಣ ಸಭೆ ನಡೆಸಿದ್ದಾರೆ. ಪಿಡಬ್ಲ್ಯಡಿ ಕ್ಯಾಂಪ್‌ನಿಂದ ಬೈಕ್ ರ‍್ಯಾಲಿ ಆರಂಭವಾಗಿದ್ದು, ನೂರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಇದೇ ವೇಳೆ ಕಾರಿನಲ್ಲಿ ಜನಾರ್ದನ ರೆಡ್ಡಿ ರೋಡ್ ಶೋ ನಡೆಸಿದ್ದು, ದಾರಿಯುದ್ದಕ್ಕೂ ಜನರು ಕೈಕುಲುಕಿ ಅಭಿನಂದಿಸಿದ್ದಾರೆ. ನೂತನ ಪಕ್ಷಕ್ಕೆ ಶುಭ ಕೋರಿದ್ದಾರೆ.
ದರ್ಗಾಕ್ಕೆ ಭೇಟಿ
ಬೈಕ್ ರ‍್ಯಾಲಿ ಮಾಡುತ್ತಾ ಕಾರ್ಯಕ್ರಮದ ವೇದಿಕೆಯತ್ತ ಬರುತ್ತಿದ್ದ ರೆಡ್ಡಿ, ದಾರಿ ಮಧ್ಯೆ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿರುವ ಸೈಯದ್ ಶಾಖಾದ್ರಿ ದರ್ಗಾಕ್ಕೆ ಭೇಟಿ ನೀಡಿದರು. ಮುಸ್ಲಿಂ ಸಂಪ್ರದಾಯದ ಕೆಲವು ಆಚರಣೆಯನ್ನು ಅಲ್ಲಿ ನೆರವೇರಿಸಿದರು. ಮಧ್ಯಾಹ್ನ ಸ್ತ್ರೀ ಶಕ್ತಿ ಭವನದಲ್ಲಿ ಸಾರ್ವಜನಿಕ ಸಭೆ, ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡರ ಪೂರ್ಣ ಲಿಖಿತ ಭಾಷಣ ಇಲ್ಲಿದೆ
ಫ್ರೀ ಪೆಟ್ರೋಲ್‌ಗಾಗಿ ನೂಕುನುಗ್ಗಲು
ಸಿಂಧನೂರಿನಲ್ಲಿ ಸಮಾವೇಶ ಹಮ್ಮಿಕೊಂಡಿರುವ ಸಲುವಾಗಿ ಸಮಾವೇಶಕ್ಕೆ ಬರುವ ಬೈಕ್‌ಗಳಿಗೆ ಪೆಟ್ರೋಲ್ ಉಚಿತ ಎಂದು ಜನಾರ್ದನ ರೆಡ್ಡಿ ಘೋಷಿಸಿದ್ದರು. ಹೀಗಾಗಿ ಉಚಿತ ಪೆಟ್ರೋಲ್ ಪಡೆಯುವ ಸಲುವಾಗಿ ನೂಕನುಗ್ಗಲು ಉಂಟಾಯಿತು.
ಉಚಿತವಾಗಿ ಪೆಟ್ರೋಲ್ ಹಾಕಿಸಲು ಎಚ್.ಪಿ. ಪೆಟ್ರೋಲ್ ಬಂಕ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಬೈಕ್‌ಗಳು ಸಾಲುಗಟ್ಟಿ ನಿಂತಿರುವುದು ಕಂಡುಬಂತು. ಬೈಕ್ ನಂಬರ್ ನೋಂದಣಿ ಮಾಡಿಕೊಂಡು ಸಿಬ್ಬಂದಿ ಪೆಟ್ರೋಲ್ ಹಾಕಿ ಕಳುಹಿಸಿದ್ದಾರೆ.