Site icon Vistara News

Karnataka Election | ಸುಳ್ಳಿಗೆ ಪುಷ್ಟಿ ಕೊಡಲು ಉಗ್ರರಿಗೆ ಸರ್ಟಿಫಿಕೇಟ್ ಕೊಡುವ ಕಾಂಗ್ರೆಸ್‌ ಬಸ್ ಯಾತ್ರೆ: ಎನ್. ರವಿಕುಮಾರ್ ಟೀಕೆ

karnataka-election-N Ravikumar lashes out over congress prajadhwani yatre

ಬೆಂಗಳೂರು: ಕಾಂಗ್ರೆಸ್ ಪಕ್ಷದ ಬಸ್ ಯಾತ್ರೆ ಇಂದು ವಿಧ್ಯುಕ್ತವಾಗಿ ಆರಂಭವಾಗಿದೆ. ಈ ಬಸ್ ಯಾತ್ರೆ ಸುಳ್ಳಿಗೆ ಮತ್ತಷ್ಟು ಪುಷ್ಟಿ ಕೊಡಲು ಮತ್ತು ಭಯೋತ್ಪಾದಕರು, ಉಗ್ರರಿಗೆ ಸರ್ಟಿಫಿಕೇಟ್ ಕೊಡುವ ಯಾತ್ರೆ. ಕಾಂಗ್ರೆಸ್‍ನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಆ ಪಕ್ಷದ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಕುಕ್ಕರ್ ಸ್ಫೋಟಕ್ಕೆ ಸಂಬಂಧಿಸಿ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.

“ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿಕುಮಾರ್‌, ಅವರು ಭಯೋತ್ಪಾದಕರೇ ಅಲ್ಲ; ಉಗ್ರರಲ್ಲ. ಅದೇನೋ ಆಟೋದಲ್ಲಿ ಹೋಗುವಾಗ ಆಕಸ್ಮಿಕವಾಗಿ ಸ್ಫೋಟ ಆಗಿದೆ. ಅವರೆಲ್ಲ ಅಮಾಯಕರು. ಅವರನ್ನು ಭಯೋತ್ಪಾದಕರೆಂದು ಬಿಂಬಿಸುತ್ತಿದ್ದೀರಿ ಎಂದಿದ್ದರು. ಕಾಂಗ್ರೆಸ್ ಪಕ್ಷವು ಭಯೋತ್ಪಾದನೆ ಬೆಳೆಸುವವರಿಗೆ, ಸುಳ್ಳು ಹೇಳುವವರಿಗೆ, ರಾಜ್ಯದ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಮೈಸೂರು ಸೇರಿ ಉಗ್ರರ ವ್ಯಾಪ್ತಿಯನ್ನು ಹೆಚ್ಚಿಸುವವರಿಗೆ ಶಕ್ತಿ ತುಂಬುವ ಸ್ವಾರ್ಥಿಗಳನ್ನು ಹೊಂದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅದರ ನಾಯಕರು ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದ ಬಸ್ ಯಾತ್ರೆಯಲ್ಲಿ ಶೇ 40 ಕಮಿಷನ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಕುರಿತು ಪ್ರಧಾನಿಯವರಿಗೂ ಪತ್ರ ಬರೆದಿದ್ದಾರೆ. ಕೆಂಪಣ್ಣನವರು ಕೋರ್ಟಿನಲ್ಲಿ ದಾಖಲೆ ಕೊಡುವುದಾಗಿ ಹೇಳಿದ್ದರು. ಆದರೆ, ಯಾವುದೇ ಕೋರ್ಟಿಗೆ ದಾಖಲೆ ನೀಡಿಲ್ಲ ಎಂದರಲ್ಲದೆ, ಯಾವುದನ್ನು ಸಲ್ಲಿಸಿದ್ದಾರೆ ಸ್ವಾಮಿ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದರು. ಬಿಜೆಪಿಯನ್ನು ಬ್ರ್ಯಾಂಡ್ ಮಾಡಲು ಷಡ್ಯಂತ್ರ ಮತ್ತು ಸಂಚು ಈ ಆರೋಪದ ಹಿಂದಿದೆ ಎಂದು ತಿಳಿಸಿದರು.

ಈಗ ಎಲ್ಲರಿಗೂ ಉಚಿತ ವಿದ್ಯುತ್ ಕೊಡುವುದಾಗಿ ನಾಟಕ ಮಾಡುತ್ತಿದ್ದಾರೆ. ದೇಶದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಾದಾಗ ಬಿಜೆಪಿ ಆಡಳಿತ ಇರುವ ಎಲ್ಲ ರಾಜ್ಯಗಳಲ್ಲಿ ದರವನ್ನು ನಾವು ಕಡಿಮೆ ಮಾಡಿದ್ದೆವು. ಕೇಂದ್ರವೂ ದರ ಕಡಿಮೆ ಮಾಡಿತ್ತು. ಕಾಂಗ್ರೆಸ್ ಆಡಳಿತದ ಸರ್ಕಾರಗಳು ಒಂದು ಪೈಸೆ ಕಡಿಮೆ ಮಾಡಿಲ್ಲ. ನೀವೆಲ್ಲಿ ಉಚಿತ ವಿದ್ಯುತ್ ಕೊಡಲು ಸಾಧ್ಯ ಎಂದು ಸವಾಲೆಸೆದರು. ಕಾಂಗ್ರೆಸ್ ಆಡಳಿತದಲ್ಲಿ ಸಾಕಷ್ಟು ವಿದ್ಯುತ್ ಇರಲಿಲ್ಲ. ಸಾಕಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿರುವುದು ನಮ್ಮ ಅವಧಿಯಲ್ಲಿ ಎಂದು ತಿಳಿಸಿದರು.

ನಾವು ಈಗಾಗಲೇ ಎಸ್‍ಸಿ, ಎಸ್‍ಟಿಗಳಿಗೆ 75 ಯೂನಿಟ್ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಮನೆಮನೆಗೆ ಅಕ್ಕಿ ಕೊಡುತ್ತಿದ್ದೇವೆ. ನಿಮ್ಮ ಸರ್ಕಾರದಲ್ಲಿ ಹಳ್ಳಿಗಳಿಗೆ ರಸ್ತೆ ಇರಲಿಲ್ಲ. ರೈತರು ಸಂಕಷ್ಟದಲ್ಲಿದ್ದರು. ಪ್ರವಾಹ ಬಂದಾಗ ಮನೆಗೆ ನೀವು ಒಂದು ಲಕ್ಷ ಕೊಟ್ಟರೆ ನಾವು 5 ಲಕ್ಷ ಕೊಡುತ್ತಿದ್ದೇವೆ. ನಾವು ಊರು ಊರುಗಳಿಗೆ ರಸ್ತೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದ ಉಚಿತ ವಿದ್ಯುತ್ ನಾಟಕಕ್ಕೆ ಜನರು ಸರಿಯಾದ ಉತ್ತರ ಕೊಡಲಿದ್ದಾರೆ ಎಂದು ತಿಳಿಸಿದರು.

ತ್ಯಾಗ ಅಲ್ಲ ಅದು ಆಮಿಷ- ಆಡಿಯೋ ಬಿಡುಗಡೆ
ಸಿದ್ದರಾಮಯ್ಯ ಅವರು ಅಲೆಮಾರಿ; ಎಲ್ಲಿಯೂ ನಿಜ ಹೇಳದ, ಅಭಿವೃದ್ಧಿ ಮಾಡದ ವ್ಯಕ್ತಿ. ವರುಣಾ ಇತ್ತು. ಚಾಮುಂಡೇಶ್ವರಿಗೆ ಬಂದರು. ಅಲ್ಲಿ 30 ಸಾವಿರ ಮತಗಳಿಂದ ಸೋಲಿಸಿ ಕಳುಹಿಸಿದರು. ಅಲ್ಲಿಂದ ಬಾದಾಮಿಗೆ ಬಂದರು. ಅಲ್ಲಿಂದ ಕೋಲಾರಕ್ಕೆ ಬಂದಿದ್ದಾರೆ. ಇದೀಗ ಕೊನೆ ಚುನಾವಣೆ ಎನ್ನುತ್ತ ಶ್ರೀನಿವಾಸ ಗೌಡ್ರು ನನಗಾಗಿ ಸೀಟು ತ್ಯಾಗ ಮಾಡಿದ್ದಾಗಿ ಹೇಳಿದ್ದಾರೆ. ಯಾಕೆ ತ್ಯಾಗ ಮಾಡಿದ್ದಾರೆ. ಲಾಭ ಇಲ್ಲದೇ ತ್ಯಾಗ ಮಾಡಿದರೇ ಎಂದು ಕೇಳಿದರು. ಶ್ರೀನಿವಾಸ ಗೌಡ್ರು ಮಾತನಾಡಿದ ಯಾಕೆ ಸೀಟು ತ್ಯಾಗ ಮಾಡಿದ್ದೆಂದು ತಿಳಿಸುವ ಆಡಿಯೋವನ್ನು ಅವರು ಬಿಡುಗಡೆ ಮಾಡಿದರು. ಇದಕ್ಕೆ ಸಿದ್ದರಾಮಯ್ಯರವರು ಉತ್ತರ ಕೊಡಬೇಕೆಂದು ಎನ್.ರವಿಕುಮಾರ್ ಅವರು ಆಗ್ರಹಿಸಿದರು.
17.5 ಕೋಟಿ ರೂಪಾಯಿ ಸಾಲ ತೀರಿಸುವುದಾಗಿ ಹೇಳಿದ್ದಕ್ಕೆ ಸೀಟು ಬಿಟ್ಟುಕೊಟ್ಟಿದ್ದಾರೆ. ತ್ಯಾಗ ಮಾಡಿಲ್ಲ ಎಂದು ತಿಳಿಸಿದ ಅವರು, ನೀವು ಹೇಗೆ ಸಾಲ ತೀರಿಸುತ್ತೀರಿ ಎಂದು ಪ್ರಶ್ನಿಸಿದರು. ಎಂಎಲ್‍ಸಿ ಮಾಡಿ ಸಚಿವರನ್ನಾಗಿ ಮಾಡುವ ಭರವಸೆ ಕೊಟ್ಟ ವಿವರ ಇದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಜನಕ ಎಂದು ತಿಳಿಸಿದರಲ್ಲದೆ, ದೆಹಲಿಯಲ್ಲಿ 100 ರೂಪಾಯಿ ಬಿಡುಗಡೆ ಮಾಡಿದರೆ 85 ರೂಪಾಯಿ ಸೋರಿಹೋಗುತ್ತದೆ. 15 ರೂಪಾಯಿ ಮಾತ್ರ ಫಲಾನುಭವಿಗೆ ಸಿಗುತ್ತದೆ ಎಂದು ನಿಮ್ಮ ನಾಯಕ ರಾಜೀವ್ ಗಾಂಧಿಯವರು ಹೇಳಿದ್ದರಲ್ಲವೇ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ರಮೇಶ್‍ಕುಮಾರ್ ಅವರೂ 3-4 ತಲೆಮಾರಿಗೆ ಆಗುವಷ್ಟು ನಾವು ಗಳಿಸಿಕೊಂಡಿದ್ದೇವೆ. ಹಾಗಾಗಿ ನಾವು ಕಷ್ಟದಲ್ಲಿರುವ ಸೋನಿಯಾ ಗಾಂಧಿಯವರಿಗೆ ಬೆಂಬಲವಾಗಿ ನಿಲ್ಲೋಣ ಎಂದಿದ್ದರು. ಉಗ್ರಪ್ಪ ಮತ್ತು ಸಲೀಂ ಅವರ ಡಿ.ಕೆ.ಶಿವಕುಮಾರ್ ಕುರಿತ ಸಂಭಾಷಣೆಗೂ ಕಾಂಗ್ರೆಸ್‍ನವರು ಉತ್ತರಿಸಿಲ್ಲ ಎಂದು ಗಮನ ಸೆಳೆದರು.
ಎಸ್.ಸಿ.ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಶೇ 40 ಎಂಬುದು ಕಾಂಗ್ರೆಸ್ ಪಕ್ಷದ ಟೂಲ್‍ಕಿಟ್. ಅವರ ಮಾತಿನಲ್ಲಿ ಹುರುಳಿಲ್ಲ. ಶೇ 40 ಸರ್ಕಾರ ನಮ್ಮದಲ್ಲ. 2016-18ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅದಕ್ಕಿಂತ ಹೆಚ್ಚು ಕಮಿಷನ್ ಇತ್ತು. 115 ಕೋಟಿ ಮೊತ್ತದ ಟೆಂಡರ್ ಶೂರ್ ಕಾಮಗಾರಿಯಲ್ಲಿ 53.86 ಶೇಕಡಾ ಕಮಿಷನ್ ಇತ್ತು. ಅದರ ದಾಖಲೆಗಳು ನಮ್ಮಲ್ಲಿವೆ ಎಂದು ತಿಳಿಸಿದರು.
86.46 ಕೋಟಿಯ ಇನ್ನೊಂದು ಕಾಮಗಾರಿಯಲ್ಲಿ 48 ಶೇ ಕಮಿಷನ್ ಇತ್ತು ಎಂದು ತಿಳಿಸಿದರು. ಇನ್ನೊಂದು ಕಾಮಗಾರಿಯಲ್ಲಿ 36.6 ಶೇಕಡಾ ಕಮಿಷನ್ ಇತ್ತು ಎಂದು ಆರೋಪಿಸಿದರು. ಕಾಂಗ್ರೆಸ್‍ನದು ಶೇ 54 ಸರ್ಕಾರ. ಅದಕ್ಕಾಗಿಯೇ ಅವರನ್ನು ಜನರು ತಿರಸ್ಕರಿಸಿದರು ಎಂದು ತಿಳಿಸಿದರು.
ಸದಾಶಿವ ಆಯೋಗದ ವರದಿ ನೀಡಿ ಅಧಿಕಾರದಲ್ಲಿ ಆರು ವರ್ಷ ಇದ್ದಾಗ ಅನುಷ್ಠಾನ ಮಾಡದವರು ಇವತ್ತು ಅಧಿಕಾರಕ್ಕೆ ಬಂದರೆ ಸದನದ ಮೊದಲ ಅಧಿವೇಶನದಲ್ಲೇ ಜಾರಿ ಮಾಡುವ ಭರವಸೆ ನೀಡುತ್ತಿದ್ದಾರೆ. ಯಾರನ್ನು ದಾರಿ ತಪ್ಪಿಸುತ್ತೀರಿ ನೀವು? ಅವತ್ಯಾಕೆ ಮಾಡಿಲ್ಲ ಎಂದು ಕೇಳಿದರು.

ಇದನ್ನೂ ಓದಿ | Prajadhwani Yatre | ರೈತರಿಗೆ, ಯುವಕರಿಗೆ ಟೋಪಿ ಹಾಕಿದೆ ಬಿಜೆಪಿ: ಸಿದ್ದರಾಮಯ್ಯ ವಾಗ್ದಾಳಿ

Exit mobile version