Site icon Vistara News

Karnataka Election: ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ: ಆರ್‌.ವಿ. ದೇಶಪಾಂಡೆ ಎಚ್ಚರಿಕೆ

#image_title

ಹಳಿಯಾಳ: “ಜೆಡಿಎಸ್ ಅಭ್ಯರ್ಥಿ ಘೋಟ್ನೇಕರ್ ಅವರು ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಕಾನೂನು ಚೌಕಟ್ಟಿನಲ್ಲಿ ಮಾತನಾಡಬೇಕು. ನನಗೂ ಮಾತನಾಡಲು ಬರುತ್ತದೆ. ನಮಗೆ ಜವಾಬ್ದಾರಿ ಇದೆ. ಜವಾಬ್ದಾರಿ ಮರೆತು ಹೇಗೆ ನಾಲಿಗೆ ಹೊರಳುತ್ತದೆಯೋ ಹಾಗೆ ಮಾತನಾಡಬಾರದು” ಎಂದು ಶಾಸಕ ಆರ್.ವಿ. ದೇಶಪಾಂಡೆ (Karnataka Election) ಎಚ್ಚರಿಕೆ ನೀಡಿದರು.

ಗುರುವಾರ ಪಟ್ಟಣದ ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಕುಮಾರಸ್ವಾಮಿಯವರು ಜೆಡಿಎಸ್ ಪಕ್ಷದ ಪ್ರಚಾರ ನಿಮಿತ್ತ ಹಳಿಯಾಳಕ್ಕೆ ಬಂದಿದ್ದರು. ಕುಮಾರಸ್ವಾಮಿಯವರಿಗೆ ದೇಶಪಾಂಡೆಯ ಕುರಿತು ಮಾತನಾಡಿ ಎಂದು ಘೋಟ್ನೇಕರ್ ಅವರು ಪಕ್ಕದಲ್ಲಿ ನಿಂತು ಒತ್ತಿ ಒತ್ತಿ ಹೇಳಿದ್ದು ಎಷ್ಟರ ಮಟ್ಟಿಗೆ ಸರಿ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Karnataka Election 2023: ಶೋಭಾ ಕರಂದ್ಲಾಜೆ ಅವರೇ ನೀವು ಸೀತೆಯಾಗಿ, ಶೂರ್ಪನಖಿ ಆಗಬೇಡಿ: ರಮೇಶ್ ಬಾಬು ತಿರುಗೇಟು

“ಎಸ್.ಎಲ್.ಜಿ ಅವರು ಈ ಚುನಾವಣೆಯಲ್ಲಿ ಸೋತು ಹತಾಶರಾಗಿ ಈ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಸುಳ್ಳು ಸುದ್ದಿ ಹೇಳಿ ಮತಯಾಚನೆ ಮಾಡುವುದು ಕಾನೂನುಬಾಹಿರ. ಆ ಅಭ್ಯರ್ಥಿ ಒಂದು ವೇಳೆ ಗೆದ್ದರೂ ಸಹ ಚುನಾವಣೆ ಕೋರ್ಟ್ ರದ್ದು ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಿಚಾರ ಮಾಡಿ ಜವಾಬ್ದಾರಿಯಿಂದ ಮಾತನಾಡಬೇಕು. ಒಂದೆಡೆ ಬಿಜೆಪಿ ಅಭ್ಯರ್ಥಿ ಎಸ್.ಎಲ್.ಜಿ ಮತ್ತು ಆರ್.ವಿ.ಡಿ ಸಂಗ್ಯಾ ಬಾಳ್ಯಾ ಎಂದು ವರ್ಣನೆ ಮಾಡುತ್ತಾರೆ. ಇದು ಸರಿಯಲ್ಲ” ಎಂದು ಅವರು ಹೇಳಿದರು.

“ಅಳ್ಳಾವರಕ್ಕೆ ಕುಡಿಯುವ ನೀರು ಪೂರೈಸಿದ್ದು ಸರ್ಕಾರದ ಯೋಜನೆಯ ಮೂಲಕ ಹಾಗಂತ ಹೇಳಿ ಮನೆಗೆ ಬಂದವರಿಗೆ ನೀರು ಕೊಡದೆ ಇರುವಂತಹ ಸಂಪ್ರದಾಯ ನಮ್ಮದಲ್ಲ. ಯಾರು ಬಂದರೂ ಸಹ ನೀರು ಕೊಡುವ ಸಂಪ್ರದಾಯ ನಮ್ಮದು” ಎಂದರು.

ಇದನ್ನೂ ಓದಿ: Karnataka Election: ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿರುವ ಬಿಜೆಪಿಯನ್ನು ಸೋಲಿಸಿ: ಸಮಾನ ಮನಸ್ಕರ ಒಕ್ಕೂಟ

“ಎಚ್.ಡಿ. ಕುಮಾರಸ್ವಾಮಿಯವರು ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿದ್ದು ಎಂದು ಘೋಟ್ನೇಕರ್ ಹೇಳುತ್ತಾರೆ. ಆದರೆ ಕುಮಾರಸ್ವಾಮಿಯವರಿಗೆ ಸಕ್ಕರೆ ಕಾರ್ಖಾನೆ ಬಗ್ಗೆ ಮಾಹಿತಿಯೇ ಇಲ್ಲ. ಘೋಟ್ನೇಕರ್ ಮಾತುಗಳು ಸತ್ಯಕ್ಕೆ ದೂರವಾದದ್ದು. ಪೊಲೀಸ್ ಠಾಣೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕಾಗಿ ಅವರ ವಿರುದ್ಧ ಕೇಸ್ ದಾಖಲಾಗಿದೆ. ಮರಾಠ ಭವನದ ಹಣ ಗುಳುಂ ಮಾಡಿದ್ದಕ್ಕಾಗಿ ಕೇಸ್ ದಾಖಲಾಗಿದೆ. ಅವರ ಮೇಲೆ ದಾಖಲಾಗಿರುವ ಕೇಸುಗಳನ್ನು ತೆಗೆದುಹಾಕಲು ಕುಮಾರಸ್ವಾಮಿಯವರು ಸಿಎಂ ಆಗಬೇಕಾ?” ಎಂದು ವ್ಯಂಗ್ಯ ಮಾಡಿದರು.

“ದಾಂಡೇಲಿಯ ರೆಸಾರ್ಟ್‌ಗಳ ಮೂಲಕ ಸ್ವಯಂ ಉದ್ಯೋಗ ಸೃಷ್ಟಿಯಾಗಿದೆ. ಜೆಡಿಎಸ್ ಅಭ್ಯರ್ಥಿ ಕೂಡ ರೆಸಾರ್ಟ್ ಹಾಕಿದ್ದಾರೆ. ಅದು ಸಂತಸದ ಸುದ್ದಿ. ದಾಂಡೇಲಿ ಪೇಪರ್ ಮಿಲ್‌ನಲ್ಲಿ ಏಳು ಮಷಿನ್‌ಗಳನ್ನು ಹಾಕುತ್ತೇವೆ. 400ರಿಂದ 500 ಜನರಿಗೆ ನೇರ ಉದ್ಯೋಗ ಸಿಗುತ್ತದೆ” ಎಂದರು.

ಇದನ್ನೂ ಓದಿ: Karnataka Election : ಬಿಜೆಪಿಯವರು ಕರೆದಿಲ್ಲ, ಕರೆದಿದ್ದರೆ ಅವರ ಪ್ರಚಾರಕ್ಕೂ ಹೋಗ್ತಿದ್ದೆ ಎಂದ ಶಿವಣ್ಣ
“ಪ್ರತಿಯೊಬ್ಬರಿಗೂ ಅರಣ್ಯ ಹಕ್ಕು ನ್ಯಾಯ ಬದ್ಧವಾಗಿ ಸಿಗಬೇಕು. ಅವರಿಗೆ ದೊರಕಿಸಿ ಕೊಡುವುದರಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಸಿದ್ದಿ ಜನರಿಗೆ ಗೌಳಿ ಜನರಿಗೆ ಸಂರಕ್ಷಣೆ ಕೊಟ್ಟಿದ್ದೇನೆ. ಕುಮಾರಸ್ವಾಮಿ ಅವರ ಮೇಲೆ ಗೌರವವಿದೆ. ಆತ್ಮೀಯ ಸ್ನೇಹಿತರು ಅವರು. ಬಹಿರಂಗವಾಗಿ ನನ್ನ ಬಗ್ಗೆ ಆಪಾದನೆ ಮಾಡಿರುವುದರ ಬಗ್ಗೆ ನನಗೆ ನೋವಾಗಿದೆ” ಎಂದು ಅವರು ಹೇಳಿದರು.

“2018ರಲ್ಲಿ ಅತಿಕ್ರಮಣ ಮಾಡಿರುವ ಕುರಿತು ಸಿಎಂ ಆಗಿರುವ ಕುಮಾರಸ್ವಾಮಿ ಅವರು ಸದನದಲ್ಲಿ ಏಕೆ ನನ್ನನ್ನು ಬರ ಮಾಡಿಕೊಂಡಿದ್ದು? ಆಗ ಪ್ರಶ್ನಿಸಬಹುದಿತ್ತು. ಫಾರೆಸ್ಟ್ ಲ್ಯಾಂಡ್ ಇರಬಹುದು ಅಥವಾ ಕಂದಾಯ ಲ್ಯಾಂಡ್ ಇರಬಹುದು, ಇವುಗಳಲ್ಲಿ ಒಂದು ಇಂಚು ಜಾಗ ಅತಿಕ್ರಮಣ ಮಾಡಿದ್ದೇ ಆದಲ್ಲಿ ಅದನ್ನು ಸಾಕ್ಷಿ ಸಮೇತ ತೋರಿಸಿದ್ದಲ್ಲಿ ನಾನು ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ” ಎಂದು ದೇಶಪಾಂಡೆ ಹೇಳಿದರು.

ಇದನ್ನೂ ಓದಿ: Karnataka Election 2023 Live Updates : ನೀಟ್‌ ಪರೀಕ್ಷೆ; ಪ್ರಧಾನಿ ಮೋದಿ ರೋಡ್‌ ಶೋನಲ್ಲಿ ಬದಲಾವಣೆ; ದೇವೇಗೌಡರಿಂದ ಬಿರುಸಿನ ಪ್ರಚಾರ

“ಬೆಂಗಳೂರಿನ ಜಗ್ಗುರ್ ಕ್ರಾಸ್ ಅರಣ್ಯ ಪ್ರದೇಶದಲ್ಲಿ ಅತಿಕ್ರಮಣ ಮಾಡಿಕೊಂಡು 4.5 ಎಕರೆ ಪ್ರದೇಶದಲ್ಲಿ ಮನೆ ನಿರ್ಮಿಸಿದ್ದಾರೆ ಎಂದು ಆರೋಪ ಮಾಡಿ ಹೇಳಿರುವ ಕುಮಾರಸ್ವಾಮಿ ಅವರ ಹೇಳಿಕೆ ಶುದ್ಧ ಸುಳ್ಳು. ನನ್ನ ವಿರುದ್ಧ ಸುಳ್ಳು ಆಪಾದನೆಗೆ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಹೇಳಿಕೆಯನ್ನು ಹಿಂಪಡೆಯಬೇಕು. ಹಿಂಪಡೆಯದಿದ್ದರೆ ಅವರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹಾಕುತ್ತೇನೆ” ಎಂದರು.

Exit mobile version