Site icon Vistara News

Karnataka Election: ಚುನಾವಣಾ ಪರೀಕ್ಷೆಯಲ್ಲಿ ಬಿಜೆಪಿ ಫೇಲಾಗುವ ಭಯದಿಂದ ಈಶ್ವರಪ್ಪ ನಮ್ಮ ಪ್ರಣಾಳಿಕೆ ಸುಟ್ಟಿದ್ದಾರೆ: ಆರ್‌.ವಿ. ದೇಶಪಾಂಡೆ

ಮಾಧ್ಯಮದವರೊಂದಿಗೆ ಮಾತನಾಡಿದ ಆರ್‌.ವಿ.ದೇಶಪಾಂಡೆ

ಕಾರವಾರ: ಈ ಬಾರಿಯ ವಿಧಾನಸಭಾ ಚುನಾವಣಾ (Karnataka Election) ಪರೀಕ್ಷೆಯಲ್ಲಿ ನಾವು ಪಾಸಾಗಿ ಬಿಜೆಪಿಯವರು ಫೇಲಾಗುವ ಭಯ ಇರುವುದರಿಂದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ಪ್ರಣಾಳಿಕೆಯನ್ನು ಸುಟ್ಟು ಹಾಕಿದ್ದಾರೆ ಎಂದು ಮಾಜಿ ಸಚಿವ, ಹಳಿಯಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆರ್.ವಿ. ದೇಶಪಾಂಡೆ ಹೇಳಿದರು.

ಕಾರವಾರದಲ್ಲಿ ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಆರ್.ವಿ. ದೇಶಪಾಂಡೆ, “ಪ್ರಣಾಳಿಕೆಯನ್ನು ಸುಟ್ಟು ಹಾಕಿದ್ದಕ್ಕೆ ಕಾರಣ ಗೊತ್ತಿಲ್ಲ. ಆದರೆ, ಚುನಾವಣೆಯ ಪರೀಕ್ಷೆಯಲ್ಲಿ ಬಿಜೆಪಿಗೆ ಕೇವಲ ಶೇಕಡಾ 30 ಅಂಕ ಬಿದ್ದು, ಫೇಲ್ ಆಗುವ ಭಯ ಕಾಡುತ್ತಿರಬಹುದು” ಎಂದು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Karnataka Election : ಬಿಜೆಪಿ, ಕಾಂಗ್ರೆಸ್‌ ರೀತಿ ದುಡ್ಡು ಇದ್ದಿದ್ದರೆ ನಾನೂ 150-160 ಕ್ಷೇತ್ರ ಗೆಲ್ಲುತ್ತಿದ್ದೆ ಎಂದ ಎಚ್‌ಡಿಕೆ

“ಬಜರಂಗದಳದ ವಿಷಯವನ್ನು ಇಷ್ಟು ಬೆಳೆಸುವ ಅವಶ್ಯಕತೆ ಇರಲಿಲ್ಲ. ನಾನೂ ಹನುಮನ ಭಕ್ತ. ನನ್ನ ಅವಧಿಯಲ್ಲಿ ಹನುಮನ ಗುಡಿ, ದೇವಸ್ಥಾನಗಳ‌ ನಿರ್ಮಾಣಕ್ಕೆ ಸಾಕಷ್ಟು ಸಹಾಯ ಮಾಡಿದ್ದೇನೆ. ಯಾವುದೇ ಸಂಘಟನೆ ಜನರ ಪರವಾಗಿ, ಶಾಂತಿ ಸೌಹಾರ್ದತೆ ಕಾಯ್ದುಕೊಳ್ಳುವಂತೆ ಇರಬೇಕು. ಬಜರಂಗದಳ ಕಾಯ್ದೆ, ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಅವರಿಗೇನೂ ತೊಂದರೆಯಿಲ್ಲ. ಅದೂ ಅಲ್ಲದೆ ಸಂಘಟನೆಯನ್ನು ನಿಷೇಧ ಮಾಡುವುದು ಕೇಂದ್ರ ಸರ್ಕಾರದ ಅಧಿಕಾರವಾಗಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಹೇಬರೇ ಕುಳಿತಿದ್ದಾರಲ್ಲವೇ? ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ವಿಚಾರ ಏಕೆ ಅಳವಡಿಕೆಯಾಗಿದೆಯೋ ನನಗೆ ಗೊತ್ತಿಲ್ಲ. ಆದರೆ ನ್ಯಾಯಬದ್ಧವಾಗಿ ಕೆಲಸ ಮಾಡಿದರೆ ನಿರ್ಬಂಧ ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನ ಜಕ್ಕೂರಿನಲ್ಲಿ ಜಮೀನು ಅತಿಕ್ರಮಣ ಮಾಡಿ ಬಂಗಲೆ ಕಟ್ಟಿಕೊಂಡಿದ್ದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಕುಮಾರಸ್ವಾಮಿ ಆರೋಪಕ್ಕೆ ಹಳಿಯಾಳ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ್ ಕಾರಣ. ಹಳಿಯಾಳಕ್ಕೆ ಆಗಮಿಸಿ ಪ್ರಚಾರ ಸಭೆಯಲ್ಲಿ ಮಾತನಾಡುವ ವೇಳೆ ನನ್ನ ವಿರುದ್ಧ ಮಾತನಾಡುವಂತೆ ಒತ್ತಾಯಿಸಿದ್ದಾರೆ. ನಾನು ಒಂದು ಇಂಚು ಯಾವುದೇ ಜಮೀನು ಒತ್ತುವರಿ ಮಾಡಿದ್ದರೆ ಯಾವುದೇ ಕ್ರಮಕ್ಕೂ ಸಿದ್ಧನಿದ್ದೇನೆ. ಈ ಬಗ್ಗೆ ಸಾಬೀತುಪಡಿಸದಿದ್ದಲ್ಲಿ ಅವರು ನನ್ನ ಬಳಿ ಕ್ಷಮೆ ಕೇಳಬೇಕು” ಎಂದು ಜೆಡಿಎಸ್ ಅಭ್ಯರ್ಥಿ ವಿರುದ್ಧ ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka election 2023: ವಿಜಯನಗರ ಕ್ಷೇತ್ರದ ಅಭಿವೃದ್ಧಿ ಅವಲೋಕಿಸಿ ಮತ ನೀಡಿ: ಸಿದ್ದಾರ್ಥ ಸಿಂಗ್

“ರಾಜಕಾರಣ ಒಂದು ಕ್ರಿಕೆಟ್ ಮ್ಯಾಚ್‌ನಂತೆ ನಡೆಯಬೇಕು. ಆಪಾದನೆ ಮಾಡುವಾಗ ಜವಾಬ್ದಾರಿಯಿಂದ ಮಾಡಬೇಕು. ದಾಖಲೆ ತೋರಿಸಿ ಮಾತನಾಡಬೇಕೇ ವಿನಃ ಬೇಜವಾಬ್ದಾರಿಯ ಹೇಳಿಕೆ ಸರಿಯಲ್ಲ. ಜನರು ಅವರನ್ನು ಬಿಟ್ಟು ಹೋಗುತ್ತಿರುವುದರಿಂದ ಹಳಿಯಾಳ ಜೆಡಿಎಸ್ ಅಭ್ಯರ್ಥಿ ಹತಾಶರಾಗಿದ್ದಾರೆ. ಹೀಗಾಗಿ ಸುಳ್ಳು ಆರೋಪ ಹಬ್ಬಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಆರ್.ವಿ. ದೇಶಪಾಂಡೆ ಹೇಳಿದರು.

ಇನ್ನು ಪ್ರಧಾನಿ ನರೇಂದ್ರ ಮೋದಿ ಉತ್ತರ ಕನ್ನಡ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, “ಪ್ರಧಾನಿ ನರೇಂದ್ರ ಮೋದಿ ಆಗಮನದಿಂದ ಜಿಲ್ಲೆಗೆ ಸಾಕಷ್ಟು ನಿರೀಕ್ಷೆಗಳಿತ್ತು. ಪರಿಷತ್‌ನಲ್ಲಿ ಪರಿಹರಿಸಬೇಕಾದ ಜಿಲ್ಲೆಯ ಅನೇಕ ಸಮಸ್ಯೆಗಳಿದ್ದವು. ಇದ್ಯಾವುದನ್ನೂ ಮಾಡದೇ ಜೈ ಬಜರಂಗಬಲಿ ಎಂದು ಹೇಳಿ ಹೊರಟು ಹೋದರು” ಎಂದು ಆರ್.ವಿ. ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.

Exit mobile version