Site icon Vistara News

Karnataka Election Results: ರಾಯಚೂರು ಜಿಲ್ಲೆಯ 4 ಕ್ಷೇತ್ರಗಳು ಕೈ ವಶ; ಕಮಲಕ್ಕೆ 2 ಸ್ಥಾನ ಭದ್ರ; ಜೆಡಿಎಸ್‌ಗೆ 1 ಸ್ಥಾನ ಲಾಸ್

Raichur district assembly election winning candidates

ನಾಗರಾಜ್ ಮಾಕಾಪೂರು ವಿಸ್ತಾರ ನ್ಯೂಸ್ ರಾಯಚೂರು.

ರಾಯಚೂರು: ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ(Karnataka Election Results) ಈಗಾಗಲೇ ಬಿಸಿಲನಗರಿ ರಾಯಚೂರು ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಮತದಾರ ಕೈ ಹಿಡಿದಿದ್ದಾನೆ. ಎರಡರಲ್ಲಿ ಕಮಲ, ಒಂದರಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಿದೆ.

ಒಟ್ಟು 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಕಾಂಗ್ರೆಸ್ ಒಂದು ಸ್ಥಾನ ಹೆಚ್ಚು ಗಳಿಸಿದರೆ, ಬಿಜೆಪಿ ತನ್ನ ಎರಡೂ ಸ್ಥಾನಗಳನ್ನು ಉಳಿಸಿಕೊಂಡಿದೆ. ಇತ್ತ ಈ ಬಾರಿ ಜೆಡಿಎಸ್ ಒಂದು ಸ್ಥಾನ ಕಳೆದುಕೊಂಡಿದೆ. ಈ ಬಾರಿ ಚುನಾವಣೆಯಲ್ಲಿ ನಾಲ್ಕು ಜನ ಹಾಲಿ ಶಾಸಕರು ಹೀನಾಯವಾಗಿ ಸೋಲು ಕಂಡಿದ್ದಾರೆ.

2018 ರ ಚುನಾವಣೆಯಲ್ಲಿ ರಾಯಚೂರು ನಗರ ಮತ್ತು ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಜಯಭೇರಿ ಕಂಡಿತ್ತು. ರಾಯಚೂರು ಗ್ರಾಮೀಣ, ಲಿಂಗಸಗೂರು, ಮಸ್ಕಿಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಕಂಡರೆ, ಮಾನ್ವಿ ಮತ್ತು ಸಿಂಧನೂರು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಲೆಕ್ಕಾಚಾರ ಉಲ್ಟಾ ಆಗಿದೆ. ಕಳೆದ ಚುನಾವಣೆಯಲ್ಲಿದ್ದ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರದ ಮತಗಳು ಬಹಳಷ್ಟು ‌ಕುಸಿತ ಕಂಡಿವೆ. ಜೆಡಿಎಸ್ ಅಭ್ಯರ್ಥಿಗಳು ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ: Karnataka Election 2023 : ಕಾಂಗ್ರೆಸ್‌ ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟಿಗೆ ಏನು ಕಾರಣ? ಇಲ್ಲಿದೆ ಇನ್‌ಸೈಡ್‌ ಸ್ಟೋರಿ!

ರಾಯಚೂರು ನಗರ ಕ್ಷೇತ್ರದಲ್ಲಿ ಶಿವರಾಜ್ ಪಾಟೀಲ್ ಹ್ಯಾಟ್ರಿಕ್ ಗೆಲುವು

ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಡಾ.ಶಿವರಾಜ್ ಪಾಟೀಲ್ ಹ್ಯಾಟ್ರಿಕ್ ಗೆಲುವು ಕಂಡಿದ್ದಾರೆ. ಒಟ್ಟು 18 ಜನ ಅಭ್ಯರ್ಥಿಗಳು ಕಣದಲ್ಲಿದ್ದರು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. ಕೊನೆ ಘಳಿಗೆಯಲ್ಲಿ ಡಾ.ಶಿವರಾಜ್ ಪಾಟೀಲ್ ಕಾಂಗ್ರೆಸ್ ‌ಪಕ್ಷದ ಅಭ್ಯರ್ಥಿ ಮಹಮ್ಮದ್ ಶಾಲಂ ವಿರುದ್ಧ 3,732 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ರಾಯಚೂರು ನಗರ ವಿಧಾನಸಭಾ ಕ್ಷೇತ್ರ
ಗೆಲುವು – ಡಾ.ಶಿವರಾಜ್ ಪಾಟೀಲ್ (ಬಿಜೆಪಿ)
ಪಡೆದ ಮತಗಳು – 69655
ಗೆಲುವಿನ ಅಂತರ – 3732
ಪ್ರತಿಸ್ಪರ್ಧಿ – ಕಾಂಗ್ರೆಸ್ -ಮೊಹಮ್ಮದ್ ಶಾಲಮ್ 65923

ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಮತ್ತೆ ಗೆದ್ದು ಬೀಗಿದ ಕಾಂಗ್ರೆಸ್

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ದದ್ದಲ್ ಎರಡನೇ ಬಾರಿಗೆ ಗೆಲುವು ಕಂಡಿದ್ದಾರೆ. ಕಳೆದ ಬಾರಿ ಇದೇ ಬಸನಗೌಡ ದದ್ದಲ್ ಎದುರಾಳಿ ಆಗಿ ಸ್ಪರ್ಧೆ ಮಾಡಿದ್ದ ಬಿಜೆಪಿ ಪಕ್ಷದ ಅಭ್ಯರ್ಥಿ ತಿಪ್ಪರಾಜ್ ಹವಾಲ್ದಾರ್ ಎರಡನೇ ‌ಬಾರಿ ಸೋಲು ಕಂಡಿದ್ದಾರೆ.

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ
ಗೆದ್ದವರು- ಬಸನಗೌಡ ದದ್ದಲ್ (ಕಾಂಗ್ರೆಸ್)
ಪಡೆದ ಮತಗಳು – 88694
ಗೆಲುವಿನ ಅಂತರ – 13801
ಪ್ರತಿಸ್ಪರ್ಧಿ – ಬಿಜೆಪಿ – ತಿಪ್ಪರಾಜ್ ಹವಾಲ್ದಾರ್ 74893

ದೇವದುರ್ಗ ‌ಕ್ಷೇತ್ರದಲ್ಲಿ ಜೆಡಿಎಸ್ ಅಲೆಗೆ ನೆಲಕಚ್ಚಿದ ಕಮಲ

ಜಿಲ್ಲೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ದೇವದುರ್ಗ ಜೆಡಿಎಸ್ ಪಾಲಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಡುವಿನ ಜಿದ್ದಾಜಿದ್ದಿಯ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ. ಜೆಡಿಎಸ್ ಅಭ್ಯರ್ಥಿ ಕರಿಯಮ್ಮ ‌ಜಿ.‌ ನಾಯಕ್ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ‌. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀದೇವಿ ನಾಯಕ್ 3909 ಮತಗಳು ಪಡೆದು ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ.

ದೇವದುರ್ಗ ವಿಧಾನಸಭಾ ಕ್ಷೇತ್ರ
ಗೆದ್ದವರು: ಕರಿಯಮ್ಮ ಜಿ. ನಾಯಕ್ (ಜೆಡಿಎಸ್)
ಪಡೆದ ಮತಗಳು – 99544
ಗೆಲುವಿನ ಅಂತರ – 34,256
ಪ್ರತಿಸ್ಪರ್ಧಿ – ಬಿಜೆಪಿ – ಕೆ.ಶಿವನಗೌಡ ನಾಯಕ್ 65288

ಇದನ್ನೂ ಓದಿ: Gold rate : ಬೆಂಗಳೂರಿನಲ್ಲಿ ಬಂಗಾರ, ಬೆಳ್ಳಿಯ ದರ ಯಥಾಸ್ಥಿತಿ

ಲಿಂಗಸುಗೂರು ಕ್ಷೇತ್ರದಲ್ಲಿ ಕಮಲ ಅರಳಿಸಿದ ಮಾನಪ್ಪ ಡಿ ವಜ್ಜಲ್

ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಬಿಜೆಪಿ ಅಭ್ಯರ್ಥಿ ‌ಮಾನಪ್ಪ ವಜ್ಜಲ್ ಅಲ್ಪಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಫೈಟ್ ಮಧ್ಯೆ ಜೆಡಿಎಸ್ ಅಭ್ಯರ್ಥಿಗೆ ಅನುಕಂಪದ ಅಲೆಯಿತ್ತು. ಆದರೆ ಕೈ ಮತ್ತು ಕಮಲದ ಜಿದ್ದಾಜಿದ್ದಿಯ ಮಧ್ಯೆ ಅನುಕಂಪ ಕೊಚ್ಚಿ ಹೋಗಿದೆ.

ಲಿಂಗಸುಗೂರು ವಿಧಾನಸಭಾ ಕ್ಷೇತ್ರ
ಗೆದ್ದವರು: ಮಾನಪ್ಪ ಡಿ ವಜ್ಜಲ್ (ಬಿಜೆಪಿ)
ಪಡೆದ ಮತಗಳು – 58331
ಗೆಲುವಿನ ಅಂತರ – 2758
ಪ್ರತಿಸ್ಪರ್ಧಿ – ಕಾಂಗ್ರೆಸ್ – ಡಿ.ಎಸ್. ಹೂಲಗೇರಿ 55573

ಸಿಂಧನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಭರ್ಜರಿ ಜಯ

ಸಿಂಧನೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಂಪನಗೌಡ ಬಾದರ್ಲಿ ಭರ್ಜರಿಯಾಗಿ ಜಯಗಳಿಸಿದ್ದಾರೆ. ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಸಿಂಧನೂರು ಕ್ಷೇತ್ರದಲ್ಲಿ ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿದಿದೆ. ಇತಿಹಾಸದಲ್ಲೇ ಬಿಜೆಪಿ ಗೆಲ್ಲದ ಸಿಂಧನೂರು ಕ್ಷೇತ್ರದಲ್ಲಿ ಬಿಜೆಪಿ ಎರಡನೇ ಸ್ಥಾನಕ್ಕೆ ಬಂದು ತಲುಪಿದೆ. ಮೋದಿಯವರ ಸಮಾವೇಶ ಸಿಂಧನೂರು ಕ್ಷೇತ್ರದಲ್ಲಿ ಮತ ಹೆಚ್ಚಳಕ್ಕೆ ಮಾತ್ರ ಸೀಮಿತವಾಗಿದೆ.

ಸಿಂಧನೂರು ವಿಧಾನಸಭಾ ಕ್ಷೇತ್ರ
ಗೆದ್ದವರು: ಹಂಪನಗೌಡ ಬಾದರ್ಲಿ (ಕಾಂಗ್ರೆಸ್)
ಪಡೆದ ಮತಗಳು- 73645
ಗೆಲುವಿನ ಅಂತರ -21942
ಪ್ರತಿಸ್ಪರ್ಧಿ – ಬಿಜೆಪಿ – ಕೆ.ಕರಿಯಪ್ಪ 51703

ಬೈ ಎಲೆಕ್ಷನ್ ಬಳಿಕವೂ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಿದ್ದ ಮಸ್ಕಿ ಕ್ಷೇತ್ರ

ಇತ್ತೀಚೆಗೆ ‌ಬೈ ಎಲೆಕ್ಷನ್ ನಡೆದಿದ್ದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಬಸನಗೌಡ ತುರುವಿಹಾಳ ಗೆಲುವು ಕಂಡಿದ್ದರು. ಸದ್ಯ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ ಅವರು ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ವಿರುದ್ಧ ಗೆಲುವು ಕಂಡಿದ್ದಾರೆ. ಆಪರೇಷನ್ ಕಮಲಕ್ಕೆ‌ ಒಳಗಾದ ಪ್ರತಾಪ್‌ಗೌಡ ಪಾಟೀಲ್ ಸತತವಾಗಿ ಎರಡನೇ ಬಾರಿ ಸೋಲು ಕಂಡಿದ್ದು ವಿಪರ್ಯಾಸವಾಗಿದೆ.

ಇದನ್ನೂ ಓದಿ: Parineeti And Raghav : ಪರಿಣಿತಿ ಚೋಪ್ರಾ ನಿಶ್ಚಿತಾರ್ಥದ ಮನಮುಟ್ಟುವ ಪೋಸ್ಟ್‌ ಹಾಕಿದ ತಾಯಿ ರೀನಾ

ಮಸ್ಕಿ ವಿಧಾನಸಭಾ ಕ್ಷೇತ್ರ
ಗೆದ್ದವರು: ಬಸನಗೌಡ ತುರುವಿಹಾಳ(ಕಾಂಗ್ರೆಸ್)
ಪಡೆದ ಮತಗಳು – 79566
ಗೆಲುವಿನ ಅಂತರ – 13053
ಪ್ರತಿಸ್ಪರ್ಧಿ – ಬಿಜೆಪಿ -ಪ್ರತಾಪ್ ಗೌಡ ಪಾಟೀಲ್‌ 66513

ಕೈ ತೊರೆದು ಕಮಲ ಹಿಡಿದ ಬಿ.ವಿ. ನಾಯಕ್‌ಗೆ ಕೈಕೊಟ್ಟ ಮಾನ್ವಿ ಮತದಾರರು

ಮಾನ್ವಿ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿಗೆ ಗುರಿಯಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಂಪಯ್ಯ ನಾಯಕ್ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಕಮಲ‌ ಹಿಡಿದಿದ್ದ ಬಿ.ವಿ. ನಾಯಕ್ ಸೋಲು ಕಂಡಿದ್ದಾರೆ.

ಮಾನ್ವಿ ವಿಧಾನಸಭಾ ಕ್ಷೇತ್ರ
ಗೆದ್ದವರು: ಹಂಪಯ್ಯ ನಾಯಕ್ (ಕಾಂಗ್ರೆಸ್)
ಪಡೆದ ಮತಗಳು – 66922
ಗೆಲುವಿನ ಅಂತರ -7719
ಪ್ರತಿಸ್ಪರ್ಧಿ -ಬಿಜೆಪಿ – ಬಿವಿ ನಾಯಕ್ 59203

ಇದನ್ನೂ ಓದಿ: Madhuri Dixit Birthday : ನಟಿ ಮಾಧುರಿ ದೀಕ್ಷಿತ್‌ ಬಗ್ಗೆ ನಿಮಗೆ ಗೊತ್ತಿಲ್ಲದ 56 ಸಂಗತಿಗಳಿವು!

Exit mobile version