Site icon Vistara News

Karnataka Election Results: ಉತ್ತರ ಕನ್ನಡ ಜಿಲ್ಲೆಯ 4 ಕ್ಷೇತ್ರಗಳು ಕೈ ವಶ; 2 ಕ್ಷೇತ್ರಗಳಿಗೆ ಸೀಮಿತವಾದ ಕಮಲ

Uttara Kannada district winning candidates

ಎಸ್.ಎಸ್.ಸಂದೀಪ ಸಾಗರ, ವಿಸ್ತಾರ ನ್ಯೂಸ್, ಕಾರವಾರ

ಕಾರವಾರ: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ (Karnataka Election Results) ಈಗಾಗಲೇ ಪ್ರಕಟಗೊಂಡಿದ್ದು, ಕಳೆದ ಚುನಾವಣೆಯಲ್ಲಿ ಕಮಲ ಅರಳಿದ್ದ ಕರಾವಳಿ ಜಿಲ್ಲೆ ಉತ್ತರ ಕನ್ನಡವನ್ನು ಮತ್ತೆ ತನ್ನ ತೆಕ್ಕೆಗೆ ಪಡೆಯುವಲ್ಲಿ ಕೈಪಾಳಯ ಯಶಸ್ವಿಯಾಗಿದೆ. ಓಟ್ಟು ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಕಳೆದ ಬಾರಿ ಯಲ್ಲಾಪುರ ಕ್ಷೇತ್ರದ ಶಿವರಾಮ ಹೆಬ್ಬಾರ್ ಬಿಜೆಪಿ ಸೇರ್ಪಡೆಯೊಂದಿಗೆ ಆರು ಕ್ಷೇತ್ರಗಳ ಪೈಕಿ ಕೇವಲ ಒಂದು ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಂಡಿದ್ದ ಕಾಂಗ್ರೆಸ್, ಈ ಬಾರಿ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಹಿಂದೆ ಐದರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಫಲಿತಾಂಶ ಬುಡಮೇಲಾಗಿದ್ದು, ಕಾರವಾರ, ಭಟ್ಕಳ, ಶಿರಸಿ ಹಾಗೂ ಹಳಿಯಾಳ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ್ದರೆ, ಕುಮಟಾ ಹಾಗೂ ಯಲ್ಲಾಪುರ ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಗಿದೆ.

ಇದನ್ನೂ ಓದಿ: IPL 2023 : ರಾಜಸ್ಥಾನ್​ ತಂಡದ ವಿರುದ್ಧ ಜಯ; ಆರ್​ಸಿಬಿಗೆ ಇನ್ನೂ ಇದೆ ಪ್ಲೇಆಫ್​ ಚಾನ್ಸ್​

ಕಾರವಾರ ವಿಧಾನಭಾ ಕ್ಷೇತ್ರ

ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಎನ್ನುವಂತೆ ಕಂಡುಬಂದಿತ್ತಾದರೂ ಕೊನೆ‌ ಕ್ಷಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಮೊದಲ ಹಂತದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರಾದರೂ ಕೊನೆಗೆ ಕಾಂಗ್ರೆಸ್ ಸಮಬಲದ ಪೈಪೋಟಿ ನೀಡಿತ್ತು. 22 ಸುತ್ತುಗಳ ಮತ‌ ಎಣಿಕೆ ಪ್ರಕ್ರಿಯೆಯಲ್ಲಿ 14 ಸುತ್ತುಗಳವರೆಗೆ ಬಹುತೇಕ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿಯನ್ನು 15ನೇ ಸುತ್ತಿನ ವೇಳೆಗೆ ಕಾಂಗ್ರೆಸ್ ಹಿಂದಿಕ್ಕಿತ್ತು. ಕೊನೆಯ ಸುತ್ತಿನ ವೇಳೆಗೆ ಕಾಂಗ್ರೆಸ್‌ ನ ಸತೀಶ್ ಸೈಲ್ 77,445 ಮತಗಳನ್ನು ಪಡೆದುಕೊಂಡು, 75,307 ಮತಗಳನ್ನು ಪಡೆದ ಬಿಜೆಪಿ ರೂಪಾಲಿ ನಾಯ್ಕರನ್ನು 2,138 ಮತಗಳ ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೆದ್ದ ಅಭ್ಯರ್ಥಿ- ಸತೀಶ್ ಸೈಲ್- ಕಾಂಗ್ರೆಸ್ -77,445
ಪ್ರತಿಸ್ಪರ್ಧಿ- ರೂಪಾಲಿ ನಾಯ್ಕ- ಬಿಜೆಪಿ- 75307
ಗೆಲುವಿನ‌ ಅಂತರ- 2,138 ಮತಗಳು

ಕುಮಟಾ ವಿಧಾನಸಭಾ ಕ್ಷೇತ್ರ

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿತ್ತು. ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಗೆ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ನೇರಾನೇರ ಪ್ರತಿಸ್ಪರ್ಧೆ ಒಡ್ಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿತ್ತು. ಮೊದಲ ಸುತ್ತಿನಿಂದಲೂ ಈ ಎರಡು ಪಕ್ಷಗಳ ನಡುವೆಯೇ ಹಾವು-ಏಣಿ ಆಟದಂತೆ ಮುನ್ನಡೆ, ಹಿನ್ನಡೆ ಕಂಡುಬಂದಿದ್ದು, ಆರನೇ ಸುತ್ತಿನ‌ ಬಳಿಕ ಜೆಡಿಎಸ್ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡಿತ್ತು. ಇವಿಎಂ ಮತಗಳ ಎಣಿಕೆಯಲ್ಲಿ ಮುಂದೆ ಇದ್ದ ಸೂರಜ್ ನಾಯ್ಕ‌ ಸೋನಿಗೆ ಕೊನೆಗೆ ಪೋಸ್ಟಲ್ ಮತಗಳ ಎಣಿಕೆಯಲ್ಲಿ ಹಿನ್ನಡೆಯುಂಟಾಗಿದ್ದು ಕೊನೆಗೆ ಕೇವಲ 673 ಮತಗಳ ಅಂತರದಲ್ಲೇ ಬಿಜೆಪಿಯ ದಿನಕರ ಶೆಟ್ಟಿಗೆ ಪ್ರಯಾಸದ ಗೆಲುವು ಲಭಿಸಿದಂತಾಗಿದೆ. ಗೆಲುವಿನ ಹೊಸ್ತಿಲಲ್ಲಿದ್ದು ತೀರಾ ಕಡಿಮೆ ಅಂತರದಲ್ಲಿ ಸೋಲು ಕಾಣುವಂತಾಗಿದ್ದು ಜೆಡಿಎಸ್ ಅಭ್ಯರ್ಥಿ ಹಾಗೂ ಬೆಂಬಲಿಗರಿಗೆ ಮರ್ಮಾಘಾತ ಉಂಟಾಗುವಂತೆ ಮಾಡಿದೆ.

ಗೆದ್ದ ಅಭ್ಯರ್ಥಿ- ದಿನಕರ ಶೆಟ್ಟಿ- ಬಿಜೆಪಿ- 59,966
ಪ್ರತಿಸ್ಪರ್ಧಿ ಸೂರಜ ನಾಯ್ಕ ಸೋನಿ- ಜೆಡಿಎಸ್- 59293
ಗೆಲುವಿನ‌ ಅಂತರ- 673 ಮತಗಳು

ಇದನ್ನೂ ಓದಿ: Karnataka Election Results: ಸಿಎಂ ಆಯ್ಕೆಗೆ ಕಸರತ್ತು; ಘೋಷಣೆ ಕೂಗಿ ಸಿದ್ದು, ಡಿಕೆಶಿ ಬೆಂಬಲಿಗರ ಹೈಡ್ರಾಮಾ

ಭಟ್ಕಳ ವಿಧಾನಸಭಾ ಕ್ಷೇತ್ರ

ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಈ ಬಾರಿ ನಿರೀಕ್ಷೆಯಂತೆಯೇ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಗೆಲುವು ಸಾಧಿಸಿದ್ದಾರೆ. ಕ್ಚೇತ್ರದಲ್ಲಿದ್ದ ಬಿಜೆಪಿ ವಿರೋಧಿ ಅಲೆ ಮಂಕಾಳು ವೈದ್ಯ ಗೆಲುವಿನ ಮುನ್ಸೂಚನೆ ನೀಡಿದ್ದು, ಮತ‌ಎಣಿಕೆಯಲ್ಲೂ ಆರಂಭದಿಂದಲೇ ಮುನ್ನಡೆ ಕಂಡುಬಂದಿತ್ತು. ಅದರಲ್ಲೂ ಭಟ್ಕಳ ಭಾಗದ ಮತ‌ಎಣಿಕೆ ಆರಂಭದ ವೇಳೆಗಾಗಲೇ ಮಂಕಾಳು ವೈದ್ಯ ಬಿಜೆಪಿ‌ ಅಭ್ಯರ್ಥಿಯಿಂದ 10 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದರು. ಹೀಗಾಗಿ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ‌ಗೆ ತೀವ್ರ ಹಿನ್ನಡೆಯುಂಟಾಗಿದ್ದು ಕೊನೆಯ ಸುತ್ತಿನ‌ ಮತ‌ಎಣಿಕೆ ವೇಳೆಗೆ 1 ಲಕ್ಷ ಮತಗಳನ್ನ ಪಡೆದ ಮಂಕಾಳು ವೈದ್ಯ ಮೊದಲ ಸ್ಥಾನವನ್ನ ಭದ್ರಪಡಿಸಿಕೊಂಡಿದ್ದು, ಬಿಜೆಪಿಯ ಸುನೀಲ್ ನಾಯ್ಕ‌ ಕೊನೆಗೆ 67 ಸಾವಿರ ಮತಗಳನ್ನು ಪಡೆದು, ಬರೋಬ್ಬರಿ 32,671 ಮತಗಳ‌ ಅಂತರದಿಂದ ಸೋಲುಂಡರು.

ಗೆದ್ದ ಅಭ್ಯರ್ಥಿ ಮಂಕಾಳು ವೈದ್ಯ- ಕಾಂಗ್ರೆಸ್- 1,00442
ಪ್ರತಿಸ್ಪರ್ಧಿ- ಸುನೀಲ್ ನಾಯ್ಕ- ಬಿಜೆಪಿ- 67,771
ಗೆಲುವಿನ ಅಂತರ- 32,671 ಮತಗಳು

ಶಿರಸಿ ವಿಧಾನಸಭಾ ಕ್ಷೇತ್ರ

ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಬಿಜೆಪಿಯ ಸೋಲಿಲ್ಲದ ಸರದಾರನಿಗೆ ಈ ಬಾರಿ ಸೋಲುಣಿಸಿದ್ದು ಒಂದೆಡೆಯಾದರೆ, ಸತತ ಸೋಲುಗಳನ್ನೇ ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಗೆಲುವನ್ನು ಸಾಧಿಸಿ ಅಚ್ಚರಿಯ ದಾಖಲೆ ಬರೆದಿದ್ದಾರೆ. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸತತ 6 ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದರು. ಏಳನೇ ಬಾರಿಯೂ ಗೆಲ್ಲುವ ನಿರೀಕ್ಷೆಯಲ್ಲಿದ್ದ ಕಾಗೇರಿಯವರಿಗೆ ಕ್ಷೇತ್ರದ ಮತದಾರರು ಶಾಕ್ ನೀಡಿದ್ದಾರೆ. ಮತಎಣಿಕೆ ಆರಂಭದಿಂದಲೂ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಮುನ್ನಡೆ ಕಾಯ್ದುಕೊಂಡಿದ್ದರು. ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಕೊಂಚ ಮತಗಳ ಅಂತರದಲ್ಲೇ ಕಾಗೇರಿಯನ್ನ ಹಿಂಬಾಲಿಸಿಕೊಂಡು ಬಂದಿದ್ದು, ಅಂತಿಮ ಮೂರು ಸುತ್ತಿನ ಮತಎಣಿಕೆಯಲ್ಲಿ ಬಿಜೆಪಿ ಹಿಂದಿಕ್ಕಿ ಕಾಂಗ್ರೆಸ್ ಮುನ್ನಡೆ ಸಾಧಿಸಿತು. ಇದರೊಂದಿಗೆ 8,712 ಮತಗಳ ಅಂತರದೊಂದಿಗೆ ಭೀಮಣ್ಣ ನಾಯ್ಕ ಗೆಲುವಿನ ನಗೆ ಬೀರಿದ್ದು, ಬಿಜೆಪಿಯ ಕಾಗೇರಿ ಅವರಿಗೆ ಮರ್ಮಾಘಾತ ನೀಡಿತು.

ಗೆದ್ದ ಅಭ್ಯರ್ಥಿ- ಭೀಮಣ್ಣ ನಾಯ್ಕ- ಕಾಂಗ್ರೆಸ್- 76,887
ಪ್ರತಿಸ್ಪರ್ಧಿ- ವಿಶ್ವೇಶ್ವರ ಹೆಗಡೆ ಕಾಗೇರಿ- ಬಿಜೆಪಿ- 68,175
ಗೆಲುವಿನ ಅಂತರ- 8,712 ಮತಗಳು

ಇದನ್ನೂ ಓದಿ: Karnataka Election: ಕರ್ನಾಟಕ ಸೇರಿ ದೇಶದ ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ?

ಯಲ್ಲಾಪುರ ವಿಧಾನಸಭಾ ಕ್ಷೇತ್ರ

ಕಳೆದ ಮೂರು ಅವಧಿಯಿಂದಲೂ ಶಿವರಾಮ ಹೆಬ್ಬಾರ್ ಅವರ ಗೆಲುವಿಗೆ ಸಾಕ್ಷಿಯಾಗಿರುವ ಯಲ್ಲಾಪುರ-ಮುಂಡಗೋಡ ಕ್ಷೇತ್ರದಲ್ಲಿ ಈ ಬಾರಿಯೂ ಸಹ ಹೆಬ್ಬಾರ್ ಗೆಲುವಿನ ನಗೆ ಬೀರಿದ್ದಾರೆ. ಎರಡು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಶಿವರಾಮ ಹೆಬ್ಬಾರ್ ಕಳೆದ 2018ರ ಚುನಾವಣೆ ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಸಚಿವರ ಹುದ್ದೆ ಅಲಂಕರಿಸಿದ್ದರು. ಈ ಬಾರಿ ಎರಡನೇಯ ಅವಧಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ವಿ,ಎಸ್.ಪಾಟೀಲ್ ತೀವ್ರ ಪೈಪೋಟಿ ನೀಡುವ ಮೂಲಕ ಸೆಡ್ಡು ಹೊಡೆದಿದ್ದರು. 15ನೇ ಸುತ್ತಿನ ಮತಎಣಿಕೆ ವೇಳೆಗೆ ಕಾಂಗ್ರೆಸ್ ಒಮ್ಮೆ ಮುನ್ನಡೆ ಸಾಧಿಸಿತಾದರೂ, ಮುಂದಿನ ಸುತ್ತಿನಲ್ಲೇ ಮುನ್ನಡೆ ಕಾಯ್ದುಕೊಂಡ ಶಿವರಾಮ ಹೆಬ್ಬಾರ್ ಕೊನೆಗೆ 4,004 ಮತಗಳ ಅಂತರದಿಂದ ಸತತ ನಾಲ್ಕನೇ ಬಾರಿಗೆ ವಿಜಯದ ಮಾಲೆಯನ್ನ ತಮ್ಮ ಕೊರಳಿಗೆ ಧರಿಸಿದರು. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ವಿಧಾನಸಭೆಗೆ ಪ್ರವೇಶ ಪಡೆದರು.

ಗೆದ್ದ ಅಭ್ಯರ್ಥಿ- ಶಿವರಾಮ ಹೆಬ್ಬಾರ್- ಬಿಜೆಪಿ- 74,699
ಪ್ರತಿಸ್ಪರ್ಧಿ – ವಿ.ಎಸ್.ಪಾಟೀಲ್- ಕಾಂಗ್ರೆಸ್ -70,695
ಗೆಲುವಿನ ಅಂತರ- 4,004 ಮತಗಳು

ಹಳಿಯಾಳ ವಿಧಾನಸಭಾ ಕ್ಷೇತ್ರ

ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ರಾಜ್ಯದಲ್ಲೇ ದಾಖಲೆ ಎನ್ನುವಂತೆ 9ನೇ ಬಾರಿಗೆ ಕಾಂಗ್ರೆಸ್‌ನ ಆರ್.ವಿ.ದೇಶಪಾಂಡೆ ಗೆಲುವು ಸಾಧಿಸಿ ತಮ್ಮ ವಿರೋಧಿಗಳಿಗೆ ಸೆಡ್ಡು ಹೊಡೆದಿದ್ದಾರೆ. ಕಾಂಗ್ರೆಸ್‌ನಿಂದ ಈ ಹಿಂದೆ ಎರಡು ಭಾರಿ ವಿಧಾನಪರಿಷತ್ ಸದಸ್ಯರಾಗಿದ್ದ ಎಸ್.ಎಲ್.ಘೋಟ್ನೇಕರ್ ಕೊನೆಯ ಕ್ಷಣದಲ್ಲಿ ಪಕ್ಷ ತೊರೆದು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ತೀವ್ರ ಪೈಪೋಟಿ ನಿರೀಕ್ಷೆ ಮೂಡಿಸಿದ್ದರು. ಜೊತೆಗೆ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಸಹ ದೇಶಪಾಂಡೆಯವರನ್ನೇ ಟಾರ್ಗೆಟ್ ಮಾಡಿದ್ದ ಪರಿಣಾಮ ಈ ಬಾರಿ ಹಳಿಯಾಳ ಕ್ಷೇತ್ರ ತ್ರಿಕೋನ ಸ್ಪರ್ಧೆಯ ಕುತೂಹಲ ಮೂಡಿಸಿತ್ತು. ಆರಂಭದಿಂದ 12ನೇ ಸುತ್ತಿನ ಮತಎಣಿಕೆವರೆಗೂ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಗೆಲುವಿನ ನಿರೀಕ್ಷೆ ಮೂಡಿಸಿತ್ತಾದರೂ 14ನೇ ಸುತ್ತಿನ ಬಳಿಕ ಆರಂಭವಾದ ಆರ್‌ವಿಡಿ ನಾಗಾಲೋಟ ಬಿಜೆಪಿ ಅಭ್ಯರ್ಥಿಯನ್ನ ಹಿಂದಿಕ್ಕುವಲ್ಲಿ ಯಶಸ್ವಿಯಾಗಿತ್ತು. ಜೆಡಿಎಸ್ ಅಭ್ಯರ್ಥಿ 28 ಸಾವಿರ ಮತಗಳನ್ನ ಪಡೆದರೂ ಸಹ 57 ಸಾವಿರ ಮತಗಳನ್ನ ತಮ್ಮದಾಗಿಸಿಕೊಳ್ಳುವ ಮೂಲಕ ಆರ್.ವಿ.ದೇಶಪಾಂಡೆ ಗೆಲುವಿನ ಹೊಸ್ತಿಲು ಏರಿದ್ದು, ಬಿಜೆಪಿ ಅಭ್ಯರ್ಥಿ 53 ಸಾವಿರ ಮತಗಳಿಗೇ ತಮ್ಮ ಓಟ ನಿಲ್ಲಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ 3,623 ಮತಗಳ ಅಂತರದ ಗೆಲುವನ್ನು ತಂದುಕೊಡುವಂತಾಯಿತು.

ಇದನ್ನೂ ಓದಿ: Karnataka Election 2023 : ಮುಖ್ಯಮಂತ್ರಿ ಆಯ್ಕೆಗೆ ಸಿಎಲ್‌ಪಿ ಸಭೆ ಶುರು; ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗಲಿ ಎಂದ ಆದಿಚುಂಚನಗಿರಿ ಶ್ರೀ

ಗೆದ್ದ ಅಭ್ಯರ್ಥಿ- ಆರ್.ವಿ.ದೇಶಪಾಂಡೆ- ಕಾಂಗ್ರೆಸ್- 57,240
ಪ್ರತಿಸ್ಪರ್ಧಿ – ಸುನೀಲ್ ಹೆಗಡೆ- ಬಿಜೆಪಿ -53,671
ಗೆಲುವಿನ ಅಂತರ- 3,623 ಮತಗಳು.

Exit mobile version