ಶಶಿಧರ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ
ಬಳ್ಳಾರಿ: ಬಳ್ಳಾರಿ ಮಟ್ಟಿಗೆ ಕಾಂಗ್ರೆಸ್ ಗೆಲುವು ನಿರೀಕ್ಷಿತವಾಗಿದ್ದರೂ ದೊಡ್ಡ ಅಂತರದ ಗೆಲುವು ಅನಿರೀಕ್ಷಿತ ಎನ್ನುವ ಮಾತಿದೆ. ಐದು ಕ್ಷೇತ್ರದಲ್ಲೂ ಒಂದೇ ಒಂದು ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳದಂತೆ ಕಾಂಗ್ರೆಸ್ ನೋಡಿಕೊಂಡಿರುವುದು ಬಳ್ಳಾರಿ ಕಾಂಗ್ರೆಸ್ ನ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿಕೊಂಡಿದೆ. ಫಲಿತಾಂಶವು (Karnataka Election Results) ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಪಾಳಯಕ್ಕೆ ದೊಡ್ಡ ಆತಂಕ ಸೃಷ್ಡಿಸಿದೆ.
ಬಳ್ಳಾರಿ ಜಿಲ್ಲೆಯ ಮತದಾರರು ಯಾವುದೇ ಪ್ರಭಾವಕ್ಕೂ ಸೊಪ್ಪುಹಾಕಿಲ್ಲ ಎಂಬುದು ಸಾಬೀತಾಗಿದೆ. ಬಿಜೆಪಿ ಆಡಳಿತ ವಿರೋಧಿ, ಅಭ್ಯರ್ಥಿ ಆಯ್ಕೆಯ ವಿಚಾರ ಮತ್ತು ಕ್ಷೇತ್ರದ ಅಭ್ಯರ್ಥಿಗಳ ವೈಯಕ್ತಿಕ ನಡೆಯು ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ. ಇಂದಿನ ಚುನಾವಣೆಯ ಫಲಿತಾಂಶ ಹಲವು ಕೌತುಕಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: Mudigere Election Results: ನಯನ ಮೋಟಮ್ಮ ಈಗ ಮಿಸ್ ಮೂಡಿಗೆರೆ; ದೀಪಕ್‌ಗೆ ಸ್ವಲ್ಪದರಲ್ಲೇ ಮಿಸ್
ಮಾವ – ಅಳಿಯ: ಮಾವ – ಸೊಸೆ ಸೋಲು
ಬಳ್ಳಾರಿ ಚುನಾವಣೆಯು ಅಕ್ಷರಶಃ ಒಂದೇ ಕುಟುಂಬದ ಹಲವರ ಸೋಲಿಗೆ ಕಾರಣವಾಗಿದೆ. ಬಳ್ಳಾರಿ ಗ್ರಾಮೀಣದಿಂದ ಮಾವ ಬಿ.ಶ್ರೀರಾಮುಲು ಸೋತರೆ, ಕಂಪ್ಲಿ ಕ್ಷೇತ್ರದಲ್ಲಿ ರಾಮುಲು ಅಳಿಯ ಟಿ.ಎಚ್. ಸುರೇಶ್ ಬಾಬು ಸೋತ್ತಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಯಿಂದ ಮಾವ ಸೋಮಶೇಖರ ರೆಡ್ಡಿ ಸೋತರೆ, ಅದೇ ಕ್ಷೇತ್ರದಲ್ಲಿ ಕೆಆರ್ ಪಿಪಿಯಿಂದ ಸೊಸೆ ಲಕ್ಷ್ಮಿ ಅರುಣಾ ಸೋತ್ತಿದ್ದಾರೆ.
ರೆಡ್ಡಿ ಪಾಳಯಕ್ಕೆ ದೊಡ್ಡ ಅಘಾತ
ಅಕ್ಷರಶಃ ಚುನಾವಣೆ ಫಲಿತಾಂಶ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಪಾಳೆಯಕ್ಕೆ ದೊಡ್ಡ ಅಘಾತವಾಗಿದೆ. ಒಂದು ಕಾಲಕ್ಕೆ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಸಚಿವ ಸ್ಥಾನ ಪಡೆದು ರಾಜಕೀಯ ಉತ್ತುಂಗ ಸ್ಥಾನದಲ್ಲಿದ್ದರು. ಆದರೆ ಈ ಚುನಾವಣೆಯಲ್ಲಿ ಮೂವರು ರೆಡ್ಡಿ ಸಹೋದರರಲ್ಲಿ ಇಬ್ಬರು ಸೋತ್ತಿದ್ದಾರೆ. ಹಿರಿಯ ಸಹೋದರ ಕರುಣಾಕರ ರೆಡ್ಡಿ ಹರಪನಹಳ್ಳಿ ಕ್ಷೇತ್ರದಿಂದ ಸೋತ್ತಿದ್ದರೆ, ಎರಡನೇ ಸಹೋದರ ಸೋಮಶೇಖರ ರೆಡ್ಡಿ ಬಳ್ಳಾರಿ ನಗರ ಕ್ಷೇತ್ರದಿಂದ ಸೋತ್ತಿದ್ದಾರೆ. ಕಿರಿಯ ಸಹೋದರ ಜಿ.ಜನಾರ್ದನ ರೆಡ್ಡಿ ಮಾತ್ರ ಗಂಗಾವತಿ ಕ್ಷೇತ್ರದಿಂದ ಕೆಆರ್ ಪಿಪಿಯಿಂದ ಜಯಗಳಿಸಿದ್ದಾರೆ. ಇವರ ಮಧ್ಯದ ಬಿರುಕು ರಾಜಕೀಯ ಅಘಾತಕ್ಕೆ ಕಾರಣವಾದಂತಾಗಿದೆ.
ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಡಬಲ್ ಎಂಜಿನ್ನ ಕೊಂಡಿ ಕಳಚಿದ ‘ಕೈ’
ಫಲಿತಾಂಶದ ಅಘಾತದಿಂದ ಒಂದಾಗ್ತಾರಾ?
ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ಚುನಾವಣೆ ಫಲಿತಾಂಶದ ಅಘಾತದಿಂದ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಒಂದಾಗ್ತಾರಾ ಎಂಬ ಚರ್ಚೆಯು ಸಾರ್ವಜನಿಕ ವಲಯದಲ್ಲಿ ಮುನ್ನಲೆಗೆ ಬಂದಿದೆ. ಇವೆರಲ್ಲರೂ ಒಟ್ಟಾಗಿಯೇ ಹಲವು ಚುನಾವಣೆ ಎದುರಿಸಿರುವುದು ವಿಜಯಕ್ಕೆ ಕಾರಣವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ತಮ್ಮ ತಮ್ಮ ಪ್ರತಿಷ್ಟೆಗೆ ಮುಂದಾಗಿ ಮುಗ್ಗರಿಸಿದರು ಎಂದು ವಿಶ್ಲೇಷಿಸಲಾಗುತ್ತಿದೆ.
1999ರ ಬಳಿಕ 2023 ರಲ್ಲಿ ಕೈವಶವಾದ ಜಿಲ್ಲೆ
ಜಿಲ್ಲೆಯಲ್ಲಿ ಕಳೆದ 1999ರಲ್ಲಿ ಕುರುಗೋಡು, ಬಳ್ಳಾರಿ, ಸಿರುಗುಪ್ಪ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಮೂಲಕ ಗಮನ ಸೆಳೆದಿದ್ದರು. ಇದಾದ ನಂತರ 2004ರಲ್ಲಿ ಜೆಡಿಎಸ್ 2, ಬಿಜೆಪಿ 2 ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್ ಶೂನ್ಯದತ್ತ ತೆರಳುವಂತಾಗಿತ್ತು. 2008ರ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ 4 ಸ್ಥಾನ ಪಡೆದರೆ, ಕಾಂಗ್ರೆಸ್ ಕೇವಲ 1 ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತ್ತು. 2013ರಲ್ಲಿಕಾಂಗ್ರೆಸ್ 3 ಸ್ಥಾನಗಳಿಸಿದರೇ, ಬಿಎಸ್‌ಆರ್ ಕಾಂಗ್ರೆಸ್ 2 ಸ್ಥಾನಗಳಿಸಿತ್ತು. 2014ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸುವ ಮೂಲಕ ಒಟ್ಟಾರೆಯಾಗಿ ಕಾಂಗ್ರೆಸ್ 4 ಸ್ಥಾನ, ಬಿಎಸ್‌ಆರ್ 1 ಸ್ಥಾನ ಪಡೆದಿತ್ತು. 2018 ರ ಚುನಾವಣೆಯಲ್ಲಿ ಕಾಂಗ್ರೆಸ್ 3, ಬಿಜೆಪಿ 2 ಸ್ಥಾನಗಳಿಸಿತ್ತು. ಈಗ 2023ರಲ್ಲಿ1999 ರ ಚುನಾವಣೆಯ ಫಲಿತಾಂಶ ಪುನಃ ಮರುಕಳಿಸಿದೆ.
ಇದನ್ನೂ ಓದಿ: IPL 2023: ಸೂರ್ಯ ಪ್ರತಾಪಕ್ಕೆ ಬಸವಳಿದ ಗುಜರಾತ್
4ನೇ ಅವಧಿಗೂ ಕೈ ಹಿಡಿದ ಮತದಾರ
ಜಿಲ್ಲೆಯ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಈ ಬಾರಿ ಸತತವಾಗಿ ನಾಲ್ಕನೇ ಅವಧಿಗೂ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸಂಡೂರಿನ ಈ.ತುಕಾರಾಂ, ಬಳ್ಳಾರಿ ಗ್ರಾಮೀಣ ಬಿ.ನಾಗೇಂದ್ರ ಗಮನ ಸೆಳೆದಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಕಳೆದ 2008 ರಿಂದಲೂ ಸತತವಾಗಿ ಶಾಸಕರಾಗಿದ್ದ ಈ.ತುಕಾರಾಂ ಅವರು ಈ ಬಾರಿಯೂ ಗೆಲುವು ಸಾಧಿಸಿದ್ದಾರೆ. ಇನ್ನೂ ನಾಗೇಂದ್ರ ಅವರು ಕೂಡ್ಲಿಗಿ ಕ್ಷೇತ್ರದಲ್ಲಿ 2008 ರಲ್ಲಿ ಬಿಜೆಪಿ, 2013 ರಲ್ಲಿ ಪಕ್ಷೇತರರಾಗಿ ಗೆದ್ದು, 2018 ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬಿ.ನಾಗೇಂದ್ರ ಅವರು 2023 ರ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಸತತ ನಾಲ್ಕನೇ ಬಾರಿ ವಿಧಾನಸೌಧಕ್ಕೆ ಪ್ರವೇಶಿಸಿ ಗಮನಸೆಳೆದಿದ್ದಾರೆ.
ಜೆಡಿಎಸ್ ಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಸ್ಥಿತಿ
ಜಿಲ್ಲೆಯಲ್ಲಿ ಈ ಬಾರಿ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಐದು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಆದರೆ, ಚುನಾವಣೆಯಲ್ಲಿ ಬಳ್ಳಾರಿ ನಗರದಿಂದ ಸ್ಪರ್ಧಿಸಿದ ಅನಿಲ್ ಲಾಡ್ 610, ಸಿರುಗುಪ್ಪದಲ್ಲಿ ಪರಮೇಶ್ವರ ನಾಯಕ 992, ಸಂಡೂರಿನಿಂದ ಎನ್.ಸೋಮಪ್ಪ 2617, ಕಂಪ್ಲಿಯಲ್ಲಿ ರಾಜು ನಾಯಕ 1374 ಮತಗಳನ್ನು ಮಾತ್ರ ಪಡೆಯುವಲ್ಲಿ ಶಕ್ತವಾಗಿ ಜಿಲ್ಲೆಯಲ್ಲಿ ಜೆಡಿಎಸ್ ನಗಣ್ಯವಾಗಿದೆ.
ಕಿರಿಯ ಶಾಸಕ ಎಂಬ ಹೆಗ್ಗಳಿಕೆ
ಟಿಕೆಟ್ ಹಗ್ಗಜಗ್ಗಾಟ ನಡೆದು ಕೊನೆಯ ಹಂತದಲ್ಲಿ ಬಳ್ಳಾರಿ ನಗರ ಟಿಕೆಟ್ ಘೋಷಣೆಯಾಯಿತು.
ಬಳ್ಳಾರಿ ನಗರ ಕ್ಷೇತ್ರದಲ್ಲಿ ಅಂತಿಮವಾಗಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ 33 ವರ್ಷದ ಯುವಕ ನಾರಾ ಭರತ್ ರೆಡ್ಡಿ ಅವರು ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅತ್ಯಂತ ಕಿರಿಯ ಶಾಸಕರೆಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: Karnataka Election: ಕರ್ನಾಟಕ ಚುನಾವಣೆ ಫಲಿತಾಂಶ ಪ್ರಕಟ; ಯಾರಾಗಲಿದ್ದಾರೆ ಮುಂದಿನ ಸಿಎಂ?
ಈ ಬಾರಿ ಚುನಾಚಣೆ ಫಲಿತಾಂಶದ ಇಣುಕು ನೋಟ
- ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ ಕಾಂಗ್ರೆಸ್ ಬಿ ನಾಗೇಂದ್ರ
ಪಡೆದ ಮತಗಳು 1,04,836
ಗೆಲುವಿನ ಅಂತರ – 29,300
ಪ್ರತಿಸ್ಪರ್ಧಿ ಬಿಜೆಪಿ ಬಿ.ಶ್ರೀರಾಮುಲು – 74536 - ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ ಕಾಂಗ್ರೆಸ್ ನಾರಾ ಭರತ್ ರೆಡ್ಡಿ
ಪಡೆದ ಮತಗಳು – 86,440
ಗೆಲುವಿನ ಅಂತರ – 37,983.
ಪ್ರತಿಸ್ಪರ್ಧಿ ಕೆ ಆರ್ ಪಿಪಿ ಅಭ್ಯರ್ಥಿ ಲಕ್ಷ್ಮಿ ಅರುಣಾ – 48, 557 - ಕಂಪ್ಲಿ ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ – ಕಾಂಗ್ರೆಸ್ ಜೆ.ಎನ್.ಗಣೇಶ್
ಪಡೆದ ಮತಗಳು – 1,00,424
ಗೆಲುವಿನ ಅಂತರ – 24,091
ಪ್ರತಿಸ್ಪರ್ಧಿ ಬಿಜೆಪಿ ಟಿ.ಎಚ್.ಸುರೇಶ್ ಬಾಬು
ಪಡೆದ ಮತಗಳು – 76,333 - ಸಿರುಗುಪ್ಪ ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ ಕಾಂಗ್ರೆಸ್ -ಬಿ.ಎಂ.ನಾಗರಾಜ್
ಪಡೆದ ಮತಗಳು – 90,862
ಗೆಲುವಿನ ಅಂತರ – 37,032
ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎಂ.ಎಸ್. ಸೋಮಲಿಂಗಪ್ಪ ಪಡೆದ ಮತಗಳು – 53,830 - ಸಂಡೂರು ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ ಕಾಂಗ್ರೆಸ್ ಈ ತುಕಾರಾಂ
ಪಡೆದ ಮತಗಳು – 85,233
ಗೆಲುವಿನ ಅಂತರ – 35522
ಪ್ರತಿಸ್ಪರ್ಧಿ ಬಿಜೆಪಿ ಪಡೆದ ಮತಗಳು 49701.