ಪಾಂಡುರಂಗ ಜಂತ್ಲಿ, ವಿಸ್ತಾರ ನ್ಯೂಸ್, ವಿಜಯನಗರ ಜಲ್ಲೆ
ವಿಜಯನಗರ: ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಫಲಿತಾಂಶವು (Karnataka Election Results) ಯಾವುದೇ ಪಕ್ಷಕ್ಕೆ ನಿರೀಕ್ಷಿತ ಗೆಲುವು ದೊರೆತಿಲ್ಲ. ಐದು ಕ್ಷೇತ್ರಗಳ ಮತದಾರ ವಿಭಿನ್ನ ತೀರ್ಪು ನೀಡಿರುವುದು ಬಹಳ ವಿಶೇಷವಾಗಿದೆ.
ವಿಜಯನಗರ ಜಿಲ್ಲೆಯ ಆರು ತಾಲೂಕುಗಳ ಪೈಕಿ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮೊದಲ ಚುನಾವಣೆಯಲ್ಲಿ ಮೂರು ಪಕ್ಷಗಳ ಜೊತೆ ಪಕ್ಷೇತರ ಅಭ್ಯರ್ಥಿಗೂ ಮತದಾರ ಮತ ಚಲಾಯಿಸಿದ್ದಾನೆ. ಹೀಗಾಗಿ ಇಡೀ ಜಿಲ್ಲೆಯಲ್ಲಿ ಯಾವ ಪಕ್ಷವೂ ಹೆಚ್ಚಿನ ಪ್ರಾಬಲ್ಯ ಸಾಧಿಸಿಲ್ಲ. ಕಾಂಗ್ರೆಸ್ ಮಾತ್ರ ಎರಡು ಕ್ಷೇತ್ರದಲ್ಲಿ ಗೆದ್ದಿದ್ದು ಬಿಟ್ಟರೆ, ಬಿಜೆಪಿ ಒಂದು ಕ್ಷೇತ್ರ, ಜೆಡಿಎಸ್ ಒಂದು ಕ್ಷೇತ್ರ, ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರವನ್ನು ಗೆದ್ದುಕೊಂಡಿದ್ದಾರೆ.
ಇದನ್ನೂ ಓದಿ: MP Renukacharya: ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ; ಇದು ನನ್ನ ಸ್ಪಷ್ಟ ನಿರ್ಧಾರ: ಎಂ.ಪಿ. ರೇಣುಕಾಚಾರ್ಯ
ಮೂವರು ಹಾಲಿ ಶಾಸಕರಿಗೆ ಸೋಲು
ಅಖಂಡ ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಉದಯವಾದ ವಿಜಯನಗರ ಜಿಲ್ಲೆಗಿದು ಮೊದಲ ಚುನಾವಣೆಯಾಗಿದೆ. ಜಿಲ್ಲೆಯಾದ ಬಳಿಕ ಎದುರಿಸಿದ ಮೊದಲ ಚುನಾವಣೆಯಲ್ಲಿ ಇಬ್ಬರು ಕಾಂಗ್ರೆಸ್, ಒಬ್ಬರು ಬಿಜೆಪಿ ಸೇರಿ ಮೂವರು ಹಾಲಿ ಶಾಸಕರು ಪುನರಾಯ್ಕೆ ಬಯಸಿ ಸ್ಪರ್ಧಿಸಿದ್ದರು. ಆದರೆ ಮೂವರು ಹಾಲಿ ಶಾಸಕರಿಗೆ ಸೋಲಾಗಿದೆ. ಹರಪನಹಳ್ಳಿ ಕ್ಷೇತ್ರದ ಜಿ. ಕರುಣಾಕರ ರೆಡ್ಡಿ ಬಿಜೆಪಿಯಿಂದ, ಹೂವಿನಹಡಗಲಿ ಕ್ಷೇತ್ರದ ಪಿ.ಟಿ ಪರಮೇಶ್ವರ ನಾಯಕ್ ಕಾಂಗ್ರೆಸ್‌ನಿಂದ ಹಾಗೂ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಭೀಮಾನಾಯ್ಕ್ ಸ್ಪರ್ಧೆ ಮಾಡಿದ್ದರು. ಮೂವರು ಹಾಲಿ ಶಾಸಕರನ್ನು ಮತದಾರ ಸಾರಾಸಗಟಾಗಿ ತಿರಸ್ಕಾರ ಮಾಡಿದ್ದಾನೆ.
ಕರುಣಾಕರ ರೆಡ್ಡಿ ಅವರನ್ನು ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ ಸೋಲಿಸಿದ್ದಾರೆ. ಭೀಮಾನಾಯ್ಕ್‌ರನ್ನು ಜೆಡಿಎಸ್‌ನ ನೇಮಿರಾಜ್ ನಾಯಕ್ ಸೋಲಿಸಿದರೆ, ಮಾಜಿ ಸಚಿವ ಪಿ.ಟಿ ಪರಮೇಶ್ವರ ನಾಯಕ್‌ರನ್ನು ಬಿಜೆಪಿಯ ಅಭ್ಯರ್ಥಿ ಕೃಷ್ಣಾ ನಾಯಕ್ ಸೋಲಿಸಿದ್ದಾರೆ. ಇದರಿಂದ ಲತಾ ಮಲ್ಲಿಕಾರ್ಜುನ, ಕೃಷ್ಣಾ ನಾಯಕ್ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದರೆ, ನೇಮಿರಾಜ್ ನಾಯಕ್ ಎರಡನೇ ಬಾರಿ ವಿಧಾನಸಭೆಗೆ ಪ್ರವೇಶ ಮಾಡಿದ್ದಾರೆ.
ಕೂಡ್ಲಿಗಿಯಲ್ಲಿ ಕಾಂಗ್ರೆಸ್ ಕಿಲಕಿಲ
ಹಾಲಿ ಬಿಜೆಪಿ ಶಾಸಕ ಎನ್.ವೈ ಗೋಪಾಲಕೃಷ್ಣ ಕ್ಷೇತ್ರ ಬಿಟ್ಟು ಚಿತ್ರದುರ್ಗದ ಮೊಳಕಾಲ್ಮುರಿನಲ್ಲಿ “ಕೈ” ಹಿಡಿದಿದ್ದರು. ಹೀಗಾಗಿ ಕೂಡ್ಲಿಗಿಯಲ್ಲಿ ಮಾಜಿ ಸಚಿವ ಶ್ರೀರಾಮುಲು 2018ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲೋಕೇಶ್ ನಾಯಕ್‌ರನ್ನು ಕಾಂಗ್ರೆಸ್‌ನಿಂದ ಕರೆತಂದು ಬಿಜೆಪಿ ಟಿಕೆಟ್ ಕೊಡಿಸಿ ಎಲೆಕ್ಷನ್ ಅಖಾಡಕ್ಕೆ ಇಳಿಸಿದ್ದರು, ಈ ಹಿಂದಿನ ಶಾಸಕ ಗೋಪಾಲಕೃಷ್ಣ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿಸಿದ್ದರು. ನೂರಾರು ಕೆರೆಗಳನ್ನ ತುಂಬಿಸಿದ್ದರು, ಮಿನಿ ವಿಧಾನಸೌಧ ಸೇರಿ ಹತ್ತಾರು ಅಭಿವೃದ್ಧಿ ಕೆಲಸ ಮಾಡಿದ್ದರು, ಜೊತೆಗೆ ನೂರಾರು ಕೋಟಿ ಅನುದಾನವನ್ನು ಕೂಡ್ಲಿಗಿ ಕ್ಷೇತ್ರಕ್ಕೆ ತಂದಿದ್ದರು. ಆದರೆ ಶ್ರೀರಾಮುಲು ಅವರ ಸ್ಟ್ಯಾಟರ್ಜಿ, ಗೋಪಾಲಕೃಷ್ಣ ಅಭಿವೃದ್ಧಿ ಕಾರ್ಯಕ್ಕೆ ಮತದಾರರು ಬಿಜೆಪಿಯ ಲೋಕೇಶ್ ನಾಯಕ್‌ರನ್ನು ಕೈಹಿಡಿಯಲಿಲ್ಲ. ಬದಲಾವಣೆ ಬಯಸಿ ಹೊಸ ಮುಖಕ್ಕೆ ಮಣೆ ಹಾಕಿದ್ದಾರೆ.
ಮೊದ ಮೊದಲು ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆ ಇತ್ತು. ದಿನ ಕಳೆದಂತೆ ಮಾಜಿ ಸಚಿವ ಎನ್.ಟಿ ಬೊಮ್ಮಣ್ಣ ಪುತ್ರ ಶ್ರೀನಿವಾಸ್ ಪರ ಅಲೆ ಜೋರಾಯಿತು, ಕ್ಷೇತ್ರವಾದ ಬಳಿಕ ಒಂದು ಬಾರಿಯೂ ಸ್ಥಳೀಯರು ಶಾಸಕರಾಗಿಲ್ಲ ಎನ್ನುವ ಕೂಗು ಕ್ಷೇತ್ರದ ತುಂಬಾ ಜೋರಾಯಿತು, ವಿಜೇತ ಅಭ್ಯರ್ಥಿ ಶ್ರೀನಿವಾಸ್ ಅವರು ವೈದ್ಯರಾಗಿದ್ದು, 40 ಸಾವಿರಕ್ಕೂ ಅಧಿಕ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿಕೊಟ್ಟಿದ್ದರಿಂದ ಅನುಕಂಪ ಜೋರಾಯಿತು, ಜತೆಗೆ ವೈದ್ಯರಾಗಿ ಶ್ರೀನಿವಾಸ್ ಭರವಸೆ ಮಾತುಗಳು ಜನಾಕರ್ಷಣೆ ಗಳಿಸಿದವು, ಬಿಜೆಪಿ ಎಲೆಕ್ಷನ್ ಹೊಸ್ತಿಲಲ್ಲಿ ಕಾಂಗ್ರೆಸ್ ನಿಂದ ಕರೆತಂದು ಟಿಕೆಟ್ ಕೊಟ್ಟಿದ್ದರಿಂದ ಪ್ರಮುಖ ಮುಖಂಡರು ವಲ್ಲದ ಮನಸ್ಸಿನಿಂದ ಪಕ್ಷದ ಪರ ಪ್ರಚಾರ ಮಾಡಿದ್ದರು.
ಇದನ್ನೂ ಓದಿ: IPL 2023: ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಡೆಲ್ಲಿ ಕ್ಯಾಪಿಟಲ್ಸ್
ಯುವಕ ವರ್ಸಸ್ ಅನುಭವಿ ಮಧ್ಯೆ ನೇರಾ ನೇರ ಹಣಾಹಣಿ
ಕಳೆದ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಗೆದ್ದಿದ್ದ ಆನಂದ್ ಸಿಂಗ್ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ. ಬದಲಾಗಿ ತಮ್ಮ ಪುತ್ರನಿಗೆ ಟಿಕೆಟ್ ಗಿಟ್ಟಿಸಿ ಕೊಟ್ಟು ಕಣಕ್ಕಿಳಿಸಿದ್ದರು, ಆನಂದ್ ಸಿಂಗ್ ಆಡಳಿತ ವಿರೋಧಿ ಅಲೆ ಮಗನ ಸೋಲಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಎಚ್.ಆರ್ ಗವಿಯಪ್ಪ ಕೊನೆಯ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡೆ ಸಾಗಿದರು. ಅಂತಿಮವಾಗಿ ನಾಲ್ಕು ಬಾರಿ ಸಿಂಗ್ ಕುಟುಂಬಕ್ಕೆ ಅಧಿಕಾರ ಕೊಟ್ಟಿದ್ದ ಮತದಾರ ಅಂತಿಮವಾಗಿ ಕಾಂಗ್ರೆಸ್‌ನ ಎಚ್.ಆರ್ ಗವಿಯಪ್ಪ ಪರ ಮತ ಚಲಾಯಿಸಿದ್ದು, ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ವೋಟ್ ಪಡೆದು ಗೆಲುವು ಸಾಧಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಅತ್ಯಂತ ಹೈವೋಲ್ಟೇಜ್ ಕ್ಷೇತ್ರ ಅಂದರೆ ಅದು ವಿಜಯನಗರ ಕ್ಷೇತ್ರ. ಎಲೆಕ್ಷನ್ ಘೋಷಣೆಯಾದ ದಿನದಿಂದಲೂ ಬಿಜೆಪಿಯ ಸಿದ್ದಾರ್ಥ ಸಿಂಗ್ ಹೋದಲ್ಲೆಲ್ಲ ಅಬ್ಬರದ ಪ್ರಚಾರ ನಡೆಸಿದ್ದರು, ಆನಂದ್ ಸಿಂಗ್ ಅಲೆಯ ಎದುರು ಕಾಂಗ್ರೆಸ್ ಕೊಚ್ಚಿ ಹೋಗುತ್ತದೆ ಎನ್ನಲಾಗಿತ್ತು. ಆದರೆ ಮತದಾರ ಗವಿಯಪ್ಪಗೆ ಆಶೀರ್ವಾದ ಮಾಡಿ 2004ರ ಬಳಿಕ ಎರಡನೇ ಬಾರಿಗೆ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದಾರೆ.
ಫಲ ನೀಡಲಿಲ್ಲ ಘಟಾನುಘಟಿ ನಾಯಕರ ಪ್ರಚಾರ
ವಿಜಯನಗರ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ರಾಜ್ಯ, ರಾಷ್ಟ್ರ ಮಟ್ಟದ ನಾಯಕರು ಆಗಮಿಸಿ ಅಬ್ಬರದ ಪ್ರಚಾರ ನಡೆಸಿದ್ದರು, ಆದರೆ ಅದು ಫಲ ನೀಡಲಿಲ್ಲ. ಟಿಕೆಟ್ ಘೋಷಣೆಗೂ ಮುನ್ನ ಜನ ಸಂಕಲ್ಪ ಯಾತ್ರೆ ಮೂಲಕ ರಾಜ್ಯಮಟ್ಟದ ನಾಯಕರು ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರು. ಅದಾದ ಬಳಿಕ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ವಿಜಯನಗರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡಿದ್ದರು, ನಂತರ ನೂತನ ಜಿಲ್ಲೆಗೆ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಆಗಮಿಸಿ ಕೊಪ್ಪಳದ ಮೂರು ಕ್ಷೇತ್ರ, ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳು ಸೇರಿ ಎಂಟು ಕ್ಷೇತ್ರಗಳ ಅಭ್ಯರ್ಥಿಗಳನ್ನು ಒಗ್ಗೂಡಿಸಿ ಬೃಹತ್ ಸಮಾವೇಶ ಮಾಡಿದ್ದರು. ಅಷ್ಟೇ ಅಲ್ಲದೇ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರನ್ನೂ ಕರೆಯಿಸಿ ಆನಂದ್ ಸಿಂಗ್ ಪ್ರಚಾರ ಫಲ ಬಿಜೆಪಿಗೆ ಸಿಗಲೇ ಇಲ್ಲ.
ಇದನ್ನೂ ಓದಿ: Karnataka Election 2023 : ಕಾಂಗ್ರೆಸ್ ಮತಗಳಿಕೆ ಪ್ರಮಾಣದಲ್ಲಿ ದಾಖಲೆ ಏರಿಕೆ; ಬಿಜೆಪಿ ಯಥಾಸ್ಥಿತಿ
ಈ ಬಾರಿ ಚುನಾವಣಾ ಫಲಿತಾಂಶದ ಇಣುಕು ನೋಟ
- ವಿಜಯನಗರ ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ ಕಾಂಗ್ರೆಸ್, ಅಭ್ಯರ್ಥಿ ಎಚ್. ಆರ್. ಗವಿಯಪ್ಪ
ಪಡೆದ ಮತಗಳು 1,04,863
ಗೆಲುವಿನ ಅಂತರ -33723, ಪ್ರತಿಸ್ಪರ್ಧಿ ಬಿಜೆಪಿ-ಸಿದ್ದಾರ್ಥ ಸಿಂಗ್- 71,140
- ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ ಜೆಡಿಎಸ್, ಅಭ್ಯರ್ಥಿ ನೇಮಿರಾಜ್ ನಾಯ್ಕ್
ಪಡೆದ ಮತಗಳು – 84,023
ಗೆಲುವಿನ ಅಂತರ 11344
ಪ್ರತಿಸ್ಪರ್ಧಿ ಕಾಂಗ್ರೆಸ್ – ಎಲ್.ಬಿ.ಪಿ ಭೀಮಾ ನಾಯ್ಕ್ – 72,679 - ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ – ಬಿಜೆಪಿ- ಅಭ್ಯರ್ಥಿ ಕೃಷ್ಣನಾಯಕ್
ಪಡೆದ ಮತಗಳು 73,200
ಗೆಲುವಿನ ಅಂತರ- 1444
ಪ್ರತಿಸ್ಪರ್ಧಿ – ಕಾಂಗ್ರೆಸ್- ಪಿ.ಟಿ ಪರಮೇಶ್ವರ್ ನಾಯಕ್ -71,756 - ಕೂಡ್ಲಿಗಿ ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ ಕಾಂಗ್ರೆಸ್ – ಅಭ್ಯರ್ಥಿ ಶ್ರೀನಿವಾಸ್ ಎನ್.ಟಿ
ಪಡೆದ ಮತಗಳು 1,40,753
ಪ್ರತಿಸ್ಪರ್ಧಿ- ಬಿಜೆಪಿ – ಲೋಕೆಶ್ ಎನ್ ವಿ ನಾಯ್ಕ್ – 50,403
ಗೆಲುವಿನ ಅಂತರ -54350 - ಹರಪ್ಪನಹಳ್ಳಿ ವಿಧಾನಸಭಾ ಕ್ಷೇತ್ರ
ಗೆಲುವು ಪಕ್ಷೇತರ ಅಭ್ಯರ್ಥಿ – ಲತಾ ಮಲ್ಲಿಕಾರ್ಜುನ್
ಪಡೆದ ಮತಗಳು 70,194
ಗೆಲುವಿನ ಅಂತರ- 13,845
ಪ್ರತಿಸ್ಪರ್ಧಿ ಬಿಜೆಪಿ- ಜಿ.ಕರುಣಾಕರ ರೆಡ್ಡಿ 56,349