Site icon Vistara News

Karnataka Election Results: ಕೊಪ್ಪಳ: ಐದರಲ್ಲಿ ಮೂರು ಕಡೆ ಕೈ ಹಿಡಿದ ಮತದಾರ; ಗಂಗಾವತಿಯಲ್ಲಿ ಕೆಆರ್‌ಪಿಪಿ, ಕುಷ್ಟಗಿಯಲ್ಲಿ ಅರಳಿದ ಕಮಲ

koppala district Assembly election Winning candidates of 5 assembly constituencies of Koppal district

ಮೌನೇಶ್‌ ಎಸ್.‌ ಬಡಿಗೇರ್‌, ವಿಸ್ತಾರ ನ್ಯೂಸ್‌, ಕೊಪ್ಪಳ

ಕೊಪ್ಪಳ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ (Karnataka Election Results) ಹೊರಬಿದ್ದಿದ್ದು, ಈ ಬಾರಿ ಮೂರು ಕ್ಷೇತ್ರಗಳಲ್ಲಿ ಮತದಾರ ಕೈ ಹಿಡಿದಿದ್ದಾರೆ. ಉಳಿದಂತೆ ಗಂಗಾವತಿ ಕ್ಷೇತ್ರದಲ್ಲಿ ಗಾಲಿಯನ್ನು ವಿಧಾನಸೌಧದವರೆಗೂ ಚಲಿಸುವಂತೆ ಮಾಡಿದ ಮತದಾರ, ಒಂದು ಕ್ಷೇತ್ರದಲ್ಲಿ ಕಮಲ ಅರಳಿಸಿದ್ದಾರೆ. ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕಾಂಗ್ರೆಸ್‌ ಹಾಗೂ ಒಂದು ಬಿಜೆಪಿ ಹಾಗೂ ಮತ್ತೊಂದು ಕೆಆರ್‌ಪಿಪಿ ಅಭ್ಯರ್ಥಿಗಳಿಗೆ ಮತದಾರ ವಿಜಯದ ಮಾಲೆಯನ್ನು ಹಾಕಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ. ರಾಘವೇಂದ್ರ ಹಿಟ್ನಾಳ್‌, ಯಲಬುರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಹಾಗೂ ಕನಕಗಿರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶಿವರಾಜ ತಂಗಡಗಿ ಗೆಲುವು ಸಾಧಿಸಿದ್ದಾರೆ. ಇನ್ನು ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್‌ ಗೆಲುವಿನ ನಗೆ ಬೀರಿದ್ದರೆ ಗಂಗಾವತಿಯಲ್ಲಿ ಕೆಆರ್‌ಪಿಪಿ ಅಭ್ಯರ್ಥಿ ಗಾಲಿ ಜನಾರ್ದನರೆಡ್ಡಿ ರಾಜಕೀಯ ಭವಿಷ್ಯವನ್ನು ಕಂಡುಕೊಂಡಿದ್ದಾರೆ.

ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ

ಕೊಪ್ಪಳ ವಿಧಾನಸಭಾ ಕ್ಷೇತ್ರ

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಕೆ. ರಾಘವೇಂದ್ರ ಹಿಟ್ನಾಳ್‌ ಅವರು 90430 ಮತಗಳನ್ನು ಪಡೆದು ಹ್ಯಾಟ್ರಿಕ್‌ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದ್ದಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಮೂರು ಬಾರಿ ಗೆದ್ದ ದಾಖಲೆ ಇಲ್ಲ. ನಿರಂತರವಾಗಿ ಬಾರಿ ಜಯಶಾಲಿಯಾಗುವ ಮೂಲಕ ರಾಘವೇಂದ್ರ ಹಿಟ್ನಾಳ್‌ ಇತಿಹಾಸ ಬರೆದಿದ್ದಾರೆ. ಅದೂ ಹಿಟ್ನಾಳ್‌ ಕುಟುಂಬದ ಸಾಂಪ್ರದಾಯಿಕ ರಾಜಕೀಯ ಎದುರಾಳಿಗಳಾಗಿರುವ ಕರಡಿ ಕುಟುಂಬದ ಬಿಜೆಪಿ ಅಭ್ಯರ್ಥಿಗೆ ಮತ್ತೊಮ್ಮೆ ಸೋಲಿನ ರುಚಿ ತೋರಿಸಿದ್ದಾರೆ. ಕೆ. ರಾಘವೇಂದ್ರ ಹಿಟ್ನಾಳ್‌ ಕಳೆದ 2013 ರಲ್ಲಿ ಸಂಗಣ್ಣ ಕರಡಿ, 2018 ರಲ್ಲಿ ಅವರ ಮಗ ಅಮರೇಶ್‌ ಕರಡಿ ಹಾಗೂ 2023 ರ ಈ ಚುನಾವಣೆಯಲ್ಲಿ ಸಂಗಣ್ಣ ಕರಡಿ ಅವರ ಸೊಸೆಯನ್ನು ಮಂಜುಳಾ ಅಮರೇಶ್‌ ಕರಡಿಯನ್ನು ಸೋಲಿಸುವ ಮೂಲಕ ರಾಜಕೀಯ ಪ್ರಾಬಲ್ಯ ಮೆರೆದಿದ್ದಾರೆ. ಮತ ಎಣಿಕೆಯ ಆರಂಭದ ಮೊದಲ ಹಾಗೂ ಎರಡನೇ ಸುತ್ತಿನಲ್ಲಿ ಜೆಡಿಎಸ್‌ನ ಸಿವಿ ಚಂದ್ರಶೇಖರ್‌ ಮುನ್ನಡೆ ಸಾಧಿಸಿದ್ದರು. ನಂತರದ ಎಲ್ಲ ಸುತ್ತುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಘವೇಂದ್ರ ಹಿಟ್ನಾಳ್‌ ಅವರು ನಿರಂತರ ಮುನ್ನಡೆ ಕಾಯ್ದುಕೊಳ್ಳುತ್ತಾ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಮಂಜುಳಾ ಅಮರೇಶ್‌ ಕರಡಿ ಅವರನ್ನು 36260 ಅಧಿಕ ಮತಗಳಿಂದ ಪರಾಭವಗೊಳಿಸಿ ವಿಜಯಶಾಲಿಯಾಗಿದ್ದಾರೆ.

ಅಭ್ಯರ್ಥಿಗಳು ತೆಗೆದುಕೊಂಡ ಮತಗಳು

ಯಲಬುರ್ಗಾ ವಿಧಾನಸಭಾ ಕ್ಷೇತ್ರ

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಹಾಲಪ್ಪ ಆಚಾರ್‌ ಅವರನ್ನು 17,181 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಬಳಿಕ ಅತಿಹೆಚ್ಚು ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಕೀರ್ತಿ ಬಸವರಾಜ ರಾಯರೆಡ್ಡಿ ಅವರಿಗೆ ಸಲ್ಲುತ್ತದೆ. ಚುನಾವಣೆಯ ಆರಂಭದಿಂದಲೂ ಯಲಬುರ್ಗಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇತ್ತು. ಈ ಬಾರಿ ಗೆದ್ದೆ ಗೆಲ್ಲುತ್ತೇನೆ ಎಂದು ವಿಶ್ವಾಸದಲ್ಲಿದ್ದ ಹಾಲಪ್ಪ ಆಚಾರ್‌ ಅವರನ್ನು ರಾಯರೆಡ್ಡಿ ಮಣಿಸಿದ್ದಾರೆ. ಮತ ಎಣಿಕೆ ಆರಂಭದಿಂದಲೇ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಅವರು ಮುನ್ನಡೆ ಕಾಯ್ದುಕೊಂಡು ಬಂದರು. ಅಂತಿಮವಾಗಿ 94,330 ಮತಗಳನ್ನು ಪಡೆಯುವ ಮೂಲಕ ಬಸವರಾಜ ರಾಯರೆಡ್ಡಿ ಗೆಲುವಿನ ನಗೆ ಬೀರಿದರು. ಪ್ರತಿಸ್ಪರ್ಧಿ ಹಾಲಪ್ಪ ಆಚಾರ್‌ 77,149 ಮತಗಳನ್ನು ಪಡೆದು ಸೋಲಿಗೆ ಶರಣಾಗಿದ್ದಾರೆ.

ಇದನ್ನೂ ಓದಿ: Karnataka Election: ಕರ್ನಾಟಕ ಚುನಾವಣೆ ಫಲಿತಾಂಶ ಪ್ರಕಟ; ಯಾರಾಗಲಿದ್ದಾರೆ ಮುಂದಿನ ಸಿಎಂ?

ಅಭ್ಯರ್ಥಿಗಳು ತೆಗೆದುಕೊಂಡ ಮತಗಳು

ಕುಷ್ಟಗಿ ವಿಧಾನಸಭಾ ಕ್ಷೇತ್ರ

ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕುಷ್ಟಗಿ ವಿಧಾನಸಭಾ ಕ್ಷೇತ್ರ ಅತ್ಯಂತ ವಿಶೇಷ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ನಿರಂತರವಾಗಿ ಎರಡನೇ ಬಾರಿಗೆ ಅಭ್ಯರ್ಥಿಗಳು ಗೆದ್ದ ಉದಾಹರಣೆ ಇಲ್ಲ ಎಂಬ ಇತಿಹಾಸ ಮತ್ತೆ ಈ ಬಾರಿಯ ಚುನಾವಣೆಯ ಫಲಿತಾಂಶದಿಂದ ಮುಂದುವರೆದಿದೆ. ಕುಷ್ಟಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್‌ ಅವರು 92915 ಮತಗಳೊಂದಿಗೆ ಗೆಲುವಿನ ನಗೆ ಬೀರಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿ ಅಮರೇಗೌಡ ಪಾಟೀಲ್‌ ಬಯ್ಯಾಪುರ ಅವರನ್ನು ಸೋಲಿಸುವ ಮೂಲಕ ಕಳೆದ ಬಾರಿ ಚುನಾವಣೆಯಲ್ಲಿನ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ. ಬಿಜೆಪಿಯ ದೊಡ್ಡನಗೌಡ ಪಾಟೀಲ್‌ ಅವರು 92915 ಮತಗಳನ್ನು ಪಡೆದು ಗೆಲುವು ದಾಖಲಿಸಿದರೆ ಕಾಂಗ್ರೆಸ್‌ ಅಭ್ಯರ್ಥಿ ಅಮರೇಗೌಡ ಪಾಟೀಲ್‌ ಬಯ್ಯಾಪುರ 83269 ಮತಗಳನ್ನು ಪಡೆಯುವ ಮೂಲಕ ಸೋಲನ್ನು ಒಪ್ಪಿಕೊಂಡಿದ್ದಾರೆ. ಕುಷ್ಟಗಿಯ ಫಲಿತಾಂಶ ಈ ಮೂಲಕ ತನ್ನ ಇತಿಹಾಸವನ್ನು ಮುಂದುವರೆಸಿದಂತಾಗಿದೆ.

ಅಭ್ಯರ್ಥಿಗಳು ಪಡೆದ ಮತಗಳು

ಗಂಗಾವತಿ ವಿಧಾನಸಭಾ ಕ್ಷೇತ್ರ

ಗಂಗಾವತಿ ವಿಧಾನಸಭಾ ಕ್ಷೇತ್ರದ ಮತದಾರರು ವಿಭಿನ್ನ ಫಲಿತಾಂಶಕ್ಕೆ ಕಾರಣವಾಗಿದ್ದಾರೆ. ತಮ್ಮ ರಾಜಕೀಯ ಜೀವನ ಎರಡನೇ ಇನ್ನಿಂಗ್ಸ್‌ ಆರಂಭಿಸುವ ಕನಸಿನೊಂದಿಗೆ ಕೆಆರ್‌ಪಿಪಿಯಿಂದ ಕಣಕ್ಕಿಳಿದಿದ್ದ ಗಾಲಿ ಜನಾರ್ದನರೆಡ್ಡಿ ಅವರನ್ನು ಗಂಗಾವತಿ ಕ್ಷೇತ್ರದ ಮತದಾರರು ಗೆಲ್ಲಿಸುವ ಮೂಲಕ ರೆಡ್ಡಿಗೆ ರಾಜಕೀಯ ಮರುಜೀವ ನೀಡಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 66213 ಮತಗಳನ್ನು ಪಡೆದು ಗಾಲಿ ಜನಾರ್ದನರೆಡ್ಡಿ ಗೆಲುವು ಸಾಧಿಸಿದ್ದಾರೆ. ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ಬಂದ ಗಾಲಿ ಜನಾರ್ದನರೆಡ್ಡಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಇಕ್ಬಾಲ್‌ ಅನ್ಸಾರಿಯನ್ನು 8266 ಮತಗಳಿಂದ ಹಿಂದಿಕ್ಕಿ ಗೆಲುವು ಸಾಧಿಸಿದ್ದಾರೆ. ಅತ್ತ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿಯನ್ನು ಮತದಾರ ಮೂರನೇ ಸ್ಥಾನಕ್ಕೆ ತಳ್ಳುವ ಮೂಲಕ ತಿರಸ್ಕರಿಸಿದ್ದಾರೆ. ಗಾಲಿ ಜನಾರ್ದನರೆಡ್ಡಿ ಅವರು 66213 ಮತಗಳನ್ನು ಪಡೆದು ವಿಜಯಿಯಾದರೆ, ಕಾಂಗ್ರೆಸ್‌ನ ಇಕ್ಬಾಲ್‌ ಅನ್ಸಾರಿ 57941 ಮತಗಳನ್ನು ಹಾಗೂ ಬಿಜೆಪಿಯ ಪರಣ್ಣ ಮುನವಳ್ಳಿ 29160 ಮತಗಳನ್ನು ಪಡೆದು ಸೋಲಿಗೆ ಶರಣಾಗಿದ್ದಾರೆ.

ಇದನ್ನೂ ಓದಿ: IPL 2023: ಸೂರ್ಯ ಪ್ರತಾಪಕ್ಕೆ ಬಸವಳಿದ ಗುಜರಾತ್​

ಅಭ್ಯರ್ಥಿಗಳು ಪಡೆದ ಮತಗಳು

ಕನಕಗಿರಿ ವಿಧಾನಸಭಾ ಕ್ಷೇತ್ರ

ಎಸ್ಸಿ ಮೀಸಲು ಕ್ಷೇತ್ರವಾಗಿರುವ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಈ ಬಾರಿ ಕೈ ಹಿಡಿದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಶಿವರಾಜ ತಂಗಡಗಿ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಬಸವರಾಜ ದಡೇಸೂಗೂರು ಅವರನ್ನು ತಿರಸ್ಕರಿಸಿದ್ದಾರೆ. ಆರಂಭದಿಂದಲೇ ಶಿವರಾಜ ತಂಗಡಗಿ ಅವರು ನಿರಂತರವಾಗಿ ಮುನ್ನಡೆ ಕಾಯ್ದುಕೊಂಡು ಬಂದು ಅಂತಿಮವಾಗಿ 105491 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಬಸವರಾಜ ದಡೇಸೂಗೂರನ್ನು 42277 ಮತಗಳ ಭಾರಿ ಅಂತರದಿಂದ ಹೀನಾಯವಾಗಿ ಸೋಲಿಸಿದ್ದಾರೆ. ಈ ಮೂಲಕ ಶಿವರಾಜ ತಂಗಡಗಿ ಕನಕಗಿರಿ ಕ್ಷೇತ್ರದಲ್ಲಿ ಮೂರನೇ ಬಾರಿ ಗೆಲುವು ಸಾಧಿಸಿದಂತಾಗಿದೆ.

ಅಭ್ಯರ್ಥಿಗಳು ಪಡೆದ ಮತಗಳು

Exit mobile version