ಕರಬಸಪ್ಪ ಕಡಗಂಚಿ, ಬೀದರ್
ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಫಲಿತಾಂಶ (Karnataka Election Results) ಈಗಾಗಲೇ ಹೊರಬಿದ್ದಿದ್ದು, ಗಡಿಜಿಲ್ಲೆ ಬೀದರ್‌ನ ಒಟ್ಟು 6 ವಿಧಾನಸಭಾ ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಲ್ಲಿ ಕಮಲ ಅರಳಿದ್ದು, ಎರಡು ಕ್ಷೇತ್ರದಲ್ಲಿ ಮಾತ್ರ ಮತದಾರ ಕೈ ಹಿಡಿದಿದ್ದಾನೆ. ಒಂದು ಸ್ಥಾನವನ್ನು ಜೆಡಿಎಸ್ ಕಳೆದುಕೊಂಡಿದೆ.
ಕಳೆದ ಬಾರಿಗಿಂತ ಈ ಬಾರಿ ಬಿಜೆಪಿ ಎರಡು ಸ್ಥಾನ ಹೆಚ್ಚು ಗಳಿಸಿದರೆ, ಕಾಂಗ್ರೆಸ್ ಒಂದು ಸ್ಥಾನ ಕಳೆದುಕೊಂಡು ಎರಡೂ ಸ್ಥಾನಗಳನ್ನು ಉಳಿಸಿಕೊಂಡಿದೆ. ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಬೀದರ್ ಜಿಲ್ಲೆಯಲ್ಲಿ ಕಮಲ ಕಮಾಲ್ ಮಾಡಿದೆ.
2018ರ ಚುನಾವಣೆಯಲ್ಲಿ ಬೀದರ್‌ನಲ್ಲಿ ಭಾಲ್ಕಿ, ಹುಮ್ನಾಬಾದ್, ಬಸವಕಲ್ಯಾಣ, ಬೀದರ್ ಉತ್ತರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಕಂಡಿತ್ತು. ಬಸವಕಲ್ಯಾಣ ಕ್ಷೇತ್ರದಲ್ಲಿ ಶಾಸಕ ನಾರಾಯಣ್ ರಾವ್ ಅಕಾಲಿಕ ಮರಣದ ನಂತರ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಂಡಿತ್ತು. ಔರಾದ್ ಕ್ಷೇತ್ರ ಮತ್ತು ಬಸವಕಲ್ಯಾಣದಲ್ಲಿ ಬಿಜೆಪಿ, ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ಒಂದು ಸ್ಥಾನದಲ್ಲಿ ಇತ್ತು. ಆದರೆ, ಈ ಬಾರಿ ಚುನಾವಣಾ ಲೆಕ್ಕಾಚಾರ ಉಲ್ಟಾ ಆಗಿದೆ. ಕಳೆದ 2018ರ ಚುನಾವಣೆಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಅಂತರದ ಮತಗಳು ಬಹಳಷ್ಟು ಕುಸಿತ ಕಂಡಿವೆ. ಇನ್ನು ಒಂದು ಸ್ಥಾನದಲ್ಲಿ ಜೆಡಿಎಸ್ ಮಾತ್ರ ಇತ್ತು. ಅದು ಕೂಡಾ ಈ ಬಾರಿ ಕಳೆದುಕೊಂಡಿದೆ.
ಇದನ್ನೂ ಓದಿ: Gold Price Today: ಚಿನ್ನ-ಬೆಳ್ಳಿ ದರದಲ್ಲಿ ಇಂದು ಮತ್ತೆ ಇಳಿಕೆ; ಬೆಂಗಳೂರಿನಲ್ಲಿ ಎಷ್ಟಿದೆ ಬೆಲೆ?
ಭಾಲ್ಕಿ ಕ್ಷೇತ್ರದಲ್ಲಿ ಈಶ್ವರ ಖಂಡ್ರೆ ನಾಲ್ಕನೇ ಬಾರಿ ಗೆಲುವು
ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಅವರು ನಾಲ್ಕನೇ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಮೂರೂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮತ ಏಣಿಕೆ ಕೊನೇ ಗಳಿಗೆವರೆಗೂ ಈಶ್ವರ ಖಂಡ್ರೆ ಅವರು ಮುನ್ನಡೆಯಲ್ಲಿದ್ದರು, ಈಶ್ವರ ಖಂಡ್ರೆ ಅವರು ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ವಿರುದ್ಧ 27.706 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಔರಾದ್ ಮೀಸಲು ಕ್ಷೇತ್ರದಲ್ಲಿ ಮತ್ತೆ ನಾಲ್ಕನೇ ಬಾರಿಗೆ ಗೆದ್ದು ಬಿಗಿದ ಬಿಜೆಪಿ
ಔರಾದ್ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರಭು ಚೌವಾಣ್ ನಾಲ್ಕನೇ ಬಾರಿಗೆ ಗೆಲುವು ಕಂಡಿದ್ದಾರೆ. ಕಳೆದ ಬಾರಿ ವಿಜಯಕುಮಾರ್ ಕೌಡಿಹಾಳ ವಿರುದ್ಧ ಬಿಜೆಪಿ ಅಭ್ಯರ್ಥಿ ಪ್ರಭು ಚೌವಾಣ್ ಗೆಲವು ಕಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ಭೀಮಸೇನರಾವ್ ಸಿಂಧೆ ಬಿಜೆಪಿ ಅಭ್ಯರ್ಥಿಗೆ ಎದುರಾಳಿಯಾಗಿದ್ದರು, ಆದರೆ, ಕಾಂಗ್ರೆಸ್ ಅನ್ನು ಮತ್ತೆ ಸೋಲಿಸುವ ಮೂಲಕ ಔರಾದ್‌ನ ಜನ ಕಮಲ ಅರಳಿಸಿದ್ದಾರೆ.
ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವು
ಜಿಲ್ಲೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಬಸವಕಲ್ಯಾಣ ಬಿಜೆಪಿ ಪಾಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿಯ ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಂಜಯ್ ವಾಡಕರ್, ಕಾಂಗ್ರೆಸ್ ಅಭ್ಯರ್ಥಿ ವಿಜಯ್ ಸಿಂಗ್ ವಿರುದ್ಧ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: PUC Supplementary Exams 2023: ಹಾಜರಾತಿ ಕೊರತೆ: ಪರೀಕ್ಷೆ ವಂಚಿತ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕಮಲ ಅರಳಿಸಿದ ಶೈಲೇಂದ್ರ ಬೆಲ್ದಾಳೆ
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ, ಬಿಜೆಪಿ ಅಭ್ಯರ್ಥಿ ಶೈಲೇಂದ್ರ ಬೆಲ್ದಾಳೆ ಅಲ್ಪಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಫೈಟ್ ಮಧ್ಯೆ 2ನೇ ಬಾರಿ ಗೆಲುವಿನ ಆಸೆಯಲ್ಲಿದ್ದ ಜೆಡಿಎಸ್ ಪಕ್ಷ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಆದರೆ, ಕೈ ಮತ್ತು ಕಮಲದ ಜಿದ್ದಾಜಿದ್ದಿಯ ಮಧ್ಯೆ ಬೀದರ್ ದಕ್ಷಿಣ ಕ್ಷೇತ್ರದ ಮತದಾರರು ಈ ಬಾರಿ ಕಮಲವನ್ನು ಅರಳಿಸಿದ್ದಾರೆ.
ಬೀದರ್ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಭರ್ಜರಿ ಜಯ
ಬೀದರ್ ಉತ್ತರ ವಿಧಾನಸಭಾ ಕ್ಷೇತ್ರ ಮತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಹೀಂಖಾನ್ ಭರ್ಜರಿಯಾಗಿ ಜಯಗಳಿಸಿದ್ದಾರೆ. ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಬೀದರ್ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಪ್ರಚಾರ ಮಾಡಿದ್ದರು, ಬೀದರ್ ಉತ್ತರ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಯಾವುದೇ ರಣತಂತ್ರ ವರ್ಕೌಟ್ ಆಗಿಲ್ಲ. ಇದರ ಮಧ್ಯೆ 3ನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ರಹೀಂಖಾನ್ ಗೆಲವು ಕಂಡಿದ್ದು, ಜೆಡಿಎಸ್ ಎರಡನೇ ಸ್ಥಾನ ಪಡೆದುಕೊಂಡಿದೆ.
ಹುಮ್ನಾಬಾದ್ ಕ್ಷೇತ್ರದಲ್ಲಿ ಕಮಲ ಅರಳಿಸಿದ ಮತದಾರ
ಹುಮ್ನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ, ಬಿಜೆಪಿ ಪಕ್ಷದ ಅಭ್ಯರ್ಥಿ ಸಿದ್ದು ಪಾಟೀಲ್ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಕೊನೇ ಗಳಿಗೆಯವರೆಗೂ ಪೈಪೋಟಿ ನೀಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಶೇಖರ ಪಾಟೀಲ್ ಅಲ್ಪ ಮತಗಳಿಂದ ಸೋಲು ಕಂಡಿದ್ದಾರೆ.
ಇದನ್ನೂ ಓದಿ: Murder Case: ತೀರ್ಥಹಳ್ಳಿಯಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಜೋಡಿ ಕೊಲೆ; ಹಂತಕ ಅರೆಸ್ಟ್
ಭಾಲ್ಕಿ ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ ಕಾಂಗ್ರೆಸ್ – ಈಶ್ವರ ಖಂಡ್ರೆ
ಪಡೆದ ಮತಗಳು – 99451
ಗೆಲುವಿನ ಅಂತರ – 27706
ಪ್ರತಿಸ್ಪರ್ಧಿ – ಬಿಜೆಪಿ – ಪ್ರಕಾಶ್ ಖಂಡ್ರೆ 71745
ಔರಾದ್ ಮೀಸಲು ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ – ಬಿಜೆಪಿ ಪ್ರಭು ಚೌವಾಣ್
ಪಡೆದ ಮತಗಳು – 81382
ಗೆಲುವಿನ ಅಂತರ – 9569
ಪ್ರತಿಸ್ಪರ್ಧಿ – ಕಾಂಗ್ರೆಸ್ – ಭೀಮಸೇನರಾವ್ ಸಿಂಧೆ 71813
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ – ಬಿಜೆಪಿ ಶರಣು ಸಲಗರ
ಪಡೆದ ಮತಗಳು – 92920
ಗೆಲುವಿನ ಅಂತರ – 14415
ಪ್ರತಿಸ್ಪರ್ಧಿ – ಕಾಂಗ್ರೆಸ್ – ವಿಜಯ್ ಸಿಂಗ್ 78505
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ -ಬಿಜೆಪಿ ಶೈಲೇಂದ್ರ ಬೆಲ್ದಾಳೆ
ಪಡೆದ ಮತಗಳು – 49872
ಗೆಲುವಿನ ಅಂತರ – 1263
ಪ್ರತಿಸ್ಪರ್ಧಿ – ಕಾಂಗ್ರೆಸ್ – ಅಶೋಕ್ ಖೇಣಿ – 48609
ಬೀದರ್ ಉತ್ತರ ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ – ಕಾಂಗ್ರೆಸ್ ರಹೀಂಖಾನ್
ಪಡೆದ ಮತಗಳು- 69165
ಗೆಲುವಿನ ಅಂತರ -10780
ಪ್ರತಿಸ್ಪರ್ಧಿ – ಜೆಡಿಎಸ್ – ಸೂರ್ಯಕಾಂತ ನಾಗಮರಪಳ್ಳಿ 58385
ಇದನ್ನೂ ಓದಿ: Accident Case: ಪಾನಮತ್ತ ಚಾಲಕರ ಅಧ್ಯಯನಕ್ಕೆ ಮುಂದಾದ ನಿಮ್ಹಾನ್ಸ್; ಕಂಟ್ರೋಲ್ ಆಗುತ್ತಾ ಡ್ರಂಕ್ ಆ್ಯಂಡ್ ಡ್ರೈವ್ ಕೇಸ್!
ಹುಮ್ನಾಬಾದ್ ವಿಧಾನಸಭಾ ಕ್ಷೇತ್ರ
ಗೆಲುವಿನ ಪಕ್ಷ – ಬಿಜೆಪಿ ಸಿದ್ದು ಪಾಟೀಲ್
ಪಡೆದ ಮತಗಳು – 75515
ಗೆಲುವಿನ ಅಂತರ – 1594
ಪ್ರತಿಸ್ಪರ್ಧಿ – ಕಾಂಗ್ರೆಸ್ – ರಾಜಶೇಖರ ಪಾಟೀಲ್ 73921