ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್ನಲ್ಲಿ ಈಗ ಸರ್ಕಾರ ರಚನೆಯ ತುರುಸಿನಲ್ಲಿದೆ. ಇಲ್ಲೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)ನವರೋ, ಡಿ.ಕೆ.ಶಿವಕುಮಾರ್ (DK Shivakumar) ಅವರೋ ಎಂಬ ಗೊಂದಲಕ್ಕಿನ್ನೂ ತೆರೆಬಿದ್ದಿಲ್ಲ. ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಅವರ ಬೆಂಬಲಿಗರು, ಡಿ.ಕೆ.ಶಿವಕುಮಾರ್ರೇ ಮುಂದಿನ ಸಿಎಂ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಈ ಮಧ್ಯೆ ಎರಡೂ ನಾಯಕರ ಮನೆಗಳಿಗೆ ಇಂದು ಬೆಳಗ್ಗೆಯಿಂದಲೇ ಕಾರ್ಯಕರ್ತರು, ಅಭಿಮಾನಿಗಳು ದಂಡುದಂಡಾಗಿ ಆಗಮಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಾಯಕರಿಗೆ ಶುಭಾಶಯ ಕೋರುತ್ತಿದ್ದಾರೆ.
ಇಂದು ಮುಂಜಾನೆಯಿಂದಲೇ ಸಿದ್ದರಾಮಯ್ಯನವರ ಸರ್ಕಾರಿ ನಿವಾಸದತ್ತ ಅವರ ಬೆಂಬಲಿಗರು ತೆರಳುತ್ತಿದ್ದಾರೆ. 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ಸಿದ್ದರಾಮಯ್ಯನವರಿಗೆ ಅಭಿನಂದನೆ ಎಂಬ ಪೋಸ್ಟರ್ಗಳನ್ನು ಅವರು ಅಂಟಿಸುತ್ತಿದ್ದಾರೆ. ಸಿದ್ದರಾಮಯ್ಯನವರು ಮನೆಯಲ್ಲೇ ಇದ್ದರೂ ಬೆಂಬಲಿಗರನ್ನು ಯಾರನ್ನೂ ಗೇಟ್ ಒಳಗೆ ಬಿಡುತ್ತಿಲ್ಲ. ಸಿದ್ದರಾಮಯ್ಯನವರ ಜತೆಯಲ್ಲಿ ಅವರ ಪುತ್ರ ಯತೀಂದ್ರ ಕೂಡ ಇದ್ದಾರೆ. ಮನೆಯ ಬಳಿ ಇರುವ ಪೊಲೀಸರು ಈ ಬೆಂಬಲಿಗರು/ಅಭಿಮಾನಿಗಳನ್ನೆಲ್ಲ ವಾಪಸ್ ಕಳಿಸುತ್ತಿದ್ದಾರೆ. ಬೆಳಗ್ಗೆ 9ಗಂಟೆ ನಂತರ ಬನ್ನಿ ಎನ್ನುತ್ತಿದ್ದಾರೆ.
ಇನ್ನೊಂದೆಡೆ ಸದಾಶಿವ ನಗರದಲ್ಲಿರುವ ಡಿ.ಕೆ.ಶಿವಕುಮಾರ್ ಮನೆಯ ಬಳಿಯೂ ಅವರ ಬೆಂಬಲಿಗರು, ಕಾರ್ಯಕರ್ತರು ಜಮಾವಣೆಗೊಳ್ಳುತ್ತಿದ್ದಾರೆ. ಡಿಕೆಶಿ ಮನೆಯ ಬಳಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಸುಮಾರು 50 ಪೊಲೀಸರು ಸ್ಥಳದಲ್ಲಿದ್ದಾರೆ. ಬೆಂಬಲಿಗರು ಇಲ್ಲಿಗೆ ಸುಮ್ಮನೆ ಬರುವ ಬದಲು, ಮುಂದಿನ ಸಿಎಂ ಡಿಕೆ ಶಿವಕುಮಾರ್ಗೆ ಹೃದಯಪೂರ್ವಕ ಅಭಿನಂದನೆಗಳು ಎಂಬ ಫ್ಲೆಕ್ಸ್ ಹಿಡಿದು ಬರುತ್ತಿದ್ದಾರೆ. ಇದರಿಂದ ಮತ್ತೆ ಗಲಾಟೆಯಾಗುವ ಆತಂಕ ಇರುವುದರಿಂದ ಪೊಲೀಸರು ಎಚ್ಚರಿಕೆ ವಹಿಸುತ್ತಿದ್ದಾರೆ. ಇನ್ನು ಇಂದು ಡಿ.ಕೆ.ಶಿವಕುಮಾರ್ ನೊಣವಿನಕೆರೆ ಅಜ್ಜಯ್ಯನ ಭೇಟಿಗೆ ತೆರಳಲಿದ್ದು, ಕೆಲವೇ ಕ್ಷಣಗಳಲ್ಲಿ ಹೊರಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Karnataka Election results 2023: ಮಿಡ್‌ನೈಟ್ ಕ್ಲೈಮಾಕ್ಸ್; ಜಯನಗರದಲ್ಲಿ ಸೌಮ್ಯ ರೆಡ್ಡಿಗೆ ಸೋಲು, ಬಿಜೆಪಿಗೆ ಲಕ್
ಇನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಪ್ರಬಲ ಪೈಪೋಟಿ ಇದೆ. ಇವರಿಬ್ಬರಲ್ಲಿ ಯಾರು ಸಿಎಂ ಎಂಬುದನ್ನು ನಿರ್ಧರಿಸಲು ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಅಂದಹಾಗೇ, ಈ ಸಲ ನಾಲ್ವರು ಡಿಸಿಎಂಗಳನ್ನು ನೇಮಕ ಮಾಡಲೂ ಪಕ್ಷದ ವರಿಷ್ಠರು ತೀರ್ಮಾನ ಮಾಡಿದ್ದಾರೆ ಎಂದು ಹೇಳಲಾಗಿದೆ.