ರಾಯಚೂರು: ಕಲ್ಯಾಣ ಕರ್ನಾಟಕ ಭಾಗಕ್ಕೆ (Kalyana Karnataka) ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡಲು ವೀರಶೈವ ಸಮುದಾಯದ ಶಾಸಕ ಈಶ್ವರ ಖಂಡ್ರೆಗೆ ಉಪ ಮುಖ್ಯಮಂತ್ರಿ ಹುದ್ದೆ ಹಾಗೂ ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ನೀಡುವಂತೆ ವೀರಶೈವ-ಲಿಂಗಾಯತ ಶ್ರೀಗಳು ಒತ್ತಾಯಿಸಿದ್ದಾರೆ.
ನಗರದ ಕಿಲ್ಲೆ ಬೃಹನ್ಮಠದಲ್ಲಿ ನಡೆದ ವೀರಶೈವ ಲಿಂಗಾಯತ ಶ್ರೀಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಲ್ಲೆ ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಮತದಾರರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಅಧಿಕಾರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಮುಂದಿನ 5 ವರ್ಷಗಳ ಕಾಲ ಉತ್ತಮ ಆಡಳಿತ ನೀಡಲಿ ಎಂದು ಕಿವಿ ಮಾತು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು, ಕ್ರಿಯಾಶೀಲ ವ್ಯಕ್ತಿಯಾದ ಈಶ್ವರ ಖಂಡ್ರೆ ಅವರಿಗೆ ಡಿಸಿಎಂ ಸ್ಥಾನ ನೀಡಲಿ, ನಾವು ಯಾವುದೇ ಜಾತಿ ಆಧಾರದ ಮೇಲೆ ಸ್ಥಾನಮಾನ ಕೇಳಲಿಲ್ಲ. ಅರ್ಹತೆಯ ಆಧಾರದ ಮೇಲೆ ಡಿಸಿಎಂ ಸ್ಥಾನವನ್ನು ಕೇಳಿದ್ದೇವೆ. ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಕೂಡ ಸಚಿವ ಸ್ಥಾನ ನೀಡಲಿ. ಜಿಲ್ಲೆಯ ಉಸ್ತುವಾರಿ ಸ್ಥಾನವನ್ನೂ ಬಾದರ್ಲಿಗೆ ಕೊಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಅಸ್ಸಾಂ ಲೇಡಿ ಸಿಂಗಂ ಪೊಲೀಸ್ ಅಧಿಕಾರಿ ಸಾವು; ಆ ರಾತ್ರಿ ಎಲ್ಲಿಗೆ ಹೊರಟಿದ್ದರೆಂದು ಮನೆಯವರಿಗೂ ಗೊತ್ತಿರಲಿಲ್ಲ!
ಡಿ.ನಂಜುಂಡಪ್ಪ ವರದಿ ಜಾರಿ ಮಾಡುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ. ಈ ಮೂಲಕ ಡಿಸಿಎಂ ಸ್ಥಾನ ಕೊಟ್ಟು ಪ್ರಾದೇಶಿಕ ಅಸಮತೋಲನ ನಿವಾರಣೆಯ ಬೇಡಿಕೆ ಈಡೇರಿಸಬೇಕು ಎಂದ ಅವರು, ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬರಲು ಕಲ್ಯಾಣ ಕರ್ನಾಟಕ ಭಾಗದ ಜನರ ಕೊಡುಗೆ ಹೆಚ್ಚಿದೆ, ಈ ಭಾಗದಿಂದ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಜನರು ಬೆಂಬಲಿಸಿದ್ದಾರೆ. ಒಂದು ವೇಳೆ ಈ ಭಾಗಕ್ಕೆ ಡಿಸಿಎಂ ಸ್ಥಾನ ಕೊಡದಿದ್ದರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರಿಂದ ತಕ್ಕ ಉತ್ತರ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಎಲೆಬಿಚ್ಚಾಲೆ ಮಹಾಪೀಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ವೀರಶೈವ ಸಮುದಾಯದ ವತಿಯಿಂದ ಈಶ್ವರ ಖಂಡ್ರೆಗೆ ಡಿಸಿಎಂ ಸ್ಥಾನ ನೀಡಿ, ಹಂಪನಗೌಡ ಬಾದರ್ಲಿ ಅವರಿಗೆ ಮಂತ್ರಿ ಸ್ಥಾನ ನೀಡಬೇಕು. ಕಲ್ಯಾಣ ಕರ್ನಾಟಕ ಭಾಗಕ್ಕೆ ಡಿಸಿಎಂ ಕೊಟ್ಟೇ ಕೊಡುತ್ತಾರೆ, ಆಗುವುದಿಲ್ಲ ಎನ್ನುವ ಪ್ರಶ್ನೆಯೇ ಇಲ್ಲ ಎಂದು ಶ್ರೀಗಳು ತಿಳಿಸಿದರು.
ಇದನ್ನೂ ಓದಿ: Gmail Account: ನಿಮ್ಮ ಜಿಮೇಲ್ ಖಾತೆ 2 ವರ್ಷದಿಂದ ನಿಷ್ಕ್ರಿಯವೇ? ಹಾಗಿದ್ದರೆ, ಡಿಲಿಟ್ ಆಗೋದು ಪಕ್ಕಾ!
ಸುದ್ದಿಗೋಷ್ಠಿಯಲ್ಲಿ ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ವೀರ ಸಂಗಮೇಶ್ವರ ಶಿವಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ವೀರಶೈವ ಲಿಂಗಾಯತ ಮಠಾಧೀಶರು ಉಪಸ್ಥಿತರಿದ್ದರು.