ಯಾದಗಿರಿ: ವಿಧಾನಸಭೆ ಚುನಾವಣೆಯಲ್ಲಿ ಗುರುಮಠಕಲ್ ಕ್ಷೇತ್ರದಿಂದ ಮೊದಲನೇ ಬಾರಿ ಸ್ಪರ್ಧೆ ಮಾಡಿ ಶಾಸಕರಾಗಿ (MLA) ಆಯ್ಕೆಯಾದ ಹಿನ್ನೆಲೆಯಲ್ಲಿ ಶರಣಗೌಡ ಕಂದಕೂರು ಮನೆದೇವರ ದರ್ಶನ ಪಡೆದರು.
ಶಾಸಕ ಶರಣಗೌಡ ಕಂದಕೂರು ಮನೆ ದೇವರಾದ ಮೈಲಾಪುರದ ಮೈಲಾರಲಿಂಗೇಶ್ವರ ಹಾಗೂ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಆರಾಧಕರಾಗಿದ್ದು, ಶಾಸಕನಾಗಿ ಆಯ್ಕೆಯಾಗಿದಕ್ಕೆ ಅವರು ಭಾನುವಾರ ಮೈಲಾರಲಿಂಗೇಶ್ವರನ ದೇವರ ದರ್ಶನ ಪಡೆದರು.
14 ಕಿಮೀ ಪಾದಯಾತ್ರೆ ನಡೆಸಿದ ಶಾಸಕ
ಯಾದಗಿರಿ ನಗರದಲ್ಲಿರುವ ತಮ್ಮ ನಿವಾಸದಿಂದ ಶರಣಗೌಡ ಕಂದಕೂರು, 14 ಕಿಮೀ ದೂರವಿರುವ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನದವರಗೆ ಪಾದಯಾತ್ರೆ ನಡೆಸಿದ್ದಾರೆ. ತಮ್ಮ ಅಪಾರ ಬೆಂಬಲಿಗರ ಪಡೆಯೊಂದಿಗೆ ಪಾದಯಾತ್ರೆ ನಡೆಸಿದ ನೂತನ ಶಾಸಕ ಶರಣಗೌಡ ಕಂದಕೂರು ಅವರಿಗೆ ದಾರಿಯುದ್ದಕ್ಕೂ ಅಭಿಮಾನಿಗಳು ಸನ್ಮಾನಿಸಿ, ಗೌರವಿಸಿದರು.
ದೇವಸ್ಥಾನದ ಮುಂಭಾಗದಲ್ಲಿ ಮಹಿಳೆಯರು ಆರತಿ ಬೆಳಗಿ ಶುಭ ಹಾರೈಸಿದ್ದರು. ನಂತರ ಮಂದಿರದೊಳಗೆ ತೆರಳಿ ಮಹಾರುದ್ರಾಭಿಷೇಕ, ಮಹಾಮಂಗಳಾರತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: Praveen Sood: ಪ್ರವೀಣ್ ಸೂದ್ ನಾಲಾಯಕ್ ಡಿಜಿಪಿ, ಅಧಿಕಾರಕ್ಕೆ ಬಂದಾಗ ತೋರಿಸ್ತೇನೆ ಎಂದಿದ್ದ ಡಿ.ಕೆ. ಶಿವಕುಮಾರ್!
ಕ್ಷೇತ್ರದ ಜನರ ಮನೆ ಮಗನಾಗಿ ಸೇವೆ
ದೇವರ ದರ್ಶನ ನಂತರ ನೂತನ ಶಾಸಕ ಶರಣಗೌಡ ಕಂದಕೂರು ಮಾತನಾಡಿ, ಭಗವಂತನ,ಕ್ಷೇತ್ರದ ಜನರ ಕೃಪೆಯಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ರಾಜಕೀಯ ವಿರೋಧಿಗಳು ಚಕ್ರವ್ಯೂಹದಲ್ಲಿ ಸಿಲುಕಿಸಲು ಪ್ರಯತ್ನ ಮಾಡಿದ್ದರು. ಆದರೆ ಮೈಲಾರಲಿಂಗೇಶ್ವರ ಪಾರು ಮಾಡಿದ್ದಾನೆ. ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸಲು ದೇವರ ಆಶೀರ್ವಾದ ಕೇಳಿದ್ದೇನೆ ಎಂದರು.
ಕ್ಷೇತ್ರದ ಜನರ ಮನೆ ಮಗನಾಗಿ ಕ್ಷೇತ್ರದ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯ ಮಾಡುತ್ತೆನೆ. ಕ್ಷೇತ್ರದ ಜನರ ಋಣ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:: MP Renukacharya: ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ; ಇದು ನನ್ನ ಸ್ಪಷ್ಟ ನಿರ್ಧಾರ: ಎಂ.ಪಿ. ರೇಣುಕಾಚಾರ್ಯ
ಈ ವೇಳೆ ಮುಖಂಡ ಮಲ್ಲನಗೌಡ ಹಳಿಮನಿ, ಸುಭಾಷ್ ಹೊನಗೇರಾ, ಅನೀಲ್ ಹೆಡಗಿಮುದ್ರಾ, ಮಲ್ಲಣ್ಣಗೌಡ ಹೊಸಳ್ಳಿ, ಪರ್ವತರೆಡ್ಡಿ ಕಾಳಬೆಳಗುಂದಿ ಸೇರಿದಂತೆ ಇತರರು ಇದ್ದರು.