ಕಾರವಾರ: ಕಾರವಾರ ನಗರದ ಸಾಯಿಕಟ್ಟಾ ಶ್ರೀ ನರಸಿಂಹ ದೇವಸ್ಥಾನದ ಹತ್ತಿರ ಶನಿವಾರ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ (Karnataka Election) ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರೂಪಾಲಿ ಎಸ್. ನಾಯ್ಕ ಅಬ್ಬರದ ಪ್ರಚಾರ ನಡೆಸಿದರು.
ಈ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, “ಋಷಿ ಮುನಿಗಳ ಯಜ್ಞವನ್ನು ತಡೆಯಲು ದುಷ್ಟ ಶಕ್ತಿಗಳು ಪ್ರಯತ್ನಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ತಡೆಯಲು ಕೆಲವರು ಪ್ರಯತ್ನಿಸಿದರು. ಆದರೆ, ಋಷಿ ಮುನಿಗಳಿಗೆ ದೇವಾನು ದೇವತೆಗಳ ರಕ್ಷಣೆಯ ಮೂಲಕ ಯಜ್ಞವು ಸರಾಗವಾಗಿ ಸಾಗುವ ಹಾಗೆ ಮಾಡಿದಂತೆ ದೇವಾನು ದೇವತೆಗಳ ಹಾಗೂ ನಿಮ್ಮಂತಹ ಅಪಾರ ಅಭಿಮಾನಿಗಳ ಆಶೀರ್ವಾದದಿಂದ ಕಾರ್ಯಕ್ರಮ ಅತ್ಯಂತ ಸುಂದರವಾಗಿ ನೆರವೇರಿತು. ಕೇವಲ 8 ದಿನಗಳ ಅವಧಿಯಲ್ಲಿ ನಾನೂ ಸೇರಿದಂತೆ ನಮ್ಮ ಜಿಲ್ಲಾ ಬಿಜೆಪಿ ತಂಡ ಕಾರ್ಯಕ್ರಮವನ್ನು ಸಂಯೋಜಿಸಿ ಅಚ್ಚುಕಟ್ಟಾಗಿ ನೆರವೇರಿಸಿದೆವು” ಎಂದರು.
ಇದನ್ನೂ ಓದಿ: Karnataka election 2023: ಮಲ್ಲನಾಯಕನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ 5 ಲಕ್ಷ ರೂಪಾಯಿ ವಶ
“ನಾನು ಅಭಿವೃದ್ಧಿಯ ಪರವಾಗಿ ಇರುವಂತವಳು. ನಾನು ಅಭಿವೃದ್ಧಿ ಪರ ಕೆಲಸ ಮಾಡಿದ್ದೇನೆ ಎಂದಾದರೆ ನನಗೆ ಮತ ನೀಡಿ. ಕೆಲಸ ಮಾಡಿದ್ದರೆ ಮಾತ್ರವೇ ನಿಮ್ಮ ಮುಂದೆ ಬಂದು ನಿಲ್ಲುವ ಅವಕಾಶ ಹಾಗೂ ಧೈರ್ಯವಿರುತ್ತದೆ. ಕಷ್ಟದ ಕಾಲದಲ್ಲಿ ಸಿಗದೇ ಐದು ವರ್ಷಗಳಿಗೊಮ್ಮೆ ಮುಖ ತೋರಿಸುವವರಿಂದ ಅಭಿವೃದ್ಧಿ ಬಯಸುವುದು ಸಾಧ್ಯವಿಲ್ಲ. ಕಳೆದ ಐದು ವರ್ಷಗಳಿಂದ ನಿಮ್ಮ ನಡುವೆ ಇದ್ದು ನಿಮ್ಮ ಕಷ್ಟಗಳಿಗೆ ಸ್ಪಂದಿಸಿದ್ದೇನೆ ಎಂಬ ನಂಬಿಕೆ, ಹಾಗೂ ತಾವೆಲ್ಲರೂ ನನಗೆ ಮತ್ತೊಮ್ಮೆ ನಿಮ್ಮ ಸೇವೆ ಮಾಡುವ ಅವಕಾಶ ನೀಡುತ್ತೀರಿ ಎಂಬ ನಂಬಿಕೆ ಇಂದ ಬಂದಿದ್ದೇನೆ” ಎಂದರು.
“ಆದ್ದರಿಂದ ತಾವೆಲ್ಲರೂ ಸಹ ಮೋದಿಜಿರವರು ಹೇಳಿದಂತೆ ಮೇ 10ರ ಮತದಾನದ ದಿನದಂದು ಜೈ ಬಜರಂಗಬಲಿ ಎಂದು ಭಾರತೀಯ ಜನತಾ ಪಕ್ಷದ ಚಿಹ್ನೆಯಾದ ಕಮಲದ ಗುರುತಿಗೆ ಮತ ನೀಡಿ ನನ್ನನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕು” ಎಂದು ಕೋರಿಕೊಂಡರು.
ಇದನ್ನೂ ಓದಿ: Karnataka Election: ಜನರಿಗಾಗಿ ಬದುಕಿದ್ದೇನೆ, ಮೋಸ ಮಾಡುವ ಅವಶ್ಯಕತೆಯಿಲ್ಲ: ಸಚಿವ ಶಿವರಾಮ್ ಹೆಬ್ಬಾರ್
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ಕಾರವಾರ ಬಿಜೆಪಿ ನಗರಾಧ್ಯಕ್ಷರಾದ ನಾಗೇಶ ಕುರುಡೇಕರ, ಕಾರವಾರ ನಗರಸಭೆ ಉಪಾಧ್ಯಕ್ಷರಾದ ಪಿ.ಪಿ ನಾಯ್ಕ, ಕಾರವಾರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮನೋಜ ಬಾಂದೇಕರ, ಕಾರವಾರ ಯುವ ಮೋರ್ಚಾ ತಾಲೂಕಾಧ್ಯಕ್ಷ ಶುಭಂ ಕಳಸ, ಪ್ರಮುಖರಾದ ದೇವಿದಾಸ ನಾಯ್ಕ, ದಿವ್ಯಾ ದೇವಿದಾಸ ನಾಯ್ಕ ಹಾಗೂ ಕಾರ್ಯಕರ್ತರು, ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.