ಹೊಳಲ್ಕೆರೆ: “ಪ್ರಾದೇಶಿಕ ಅಸ್ಮಿತೆಯನ್ನು ನಾಶಪಡಿಸುತ್ತಿರುವ ಹಾಗೂ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಿ, ಜಾತ್ಯತೀತ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ (Karnataka Election) ತರಬೇಕಿದೆ” ಎಂದು ಸಮಾನ ಮನಸ್ಕರ ಒಕ್ಕೂಟ ಕರ್ನಾಟಕ ಸಂಘಟನೆ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
ಹೊಳಲ್ಕೆರೆ ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸ್ವಾತಂತ್ರ್ಯ ಬಂದ ನಂತರ ರಾಜಕೀಯ ಪಕ್ಷಗಳು ಅಭಿವೃದ್ಧಿ ವಿಚಾರಗಳನ್ನು ಮುಂದೆ ಇಟ್ಟುಕೊಂಡು ಚುನಾವಣೆ ಮಾಡುತ್ತಿದ್ದರು. ಆದರೆ, ಯಾರೂ ಕೂಡ ಬಿಜೆಪಿ ಪಕ್ಷದಂತೆ ಸಂವಿಧಾನ ವಿರೋಧಿ, ಪ್ರಜಾಸತ್ತಾತ್ಮಕ ಆಶಯಗಳಿಗೆ ವಿರುದ್ಧವಾದ ಚುನಾವಣೆ ಮಾಡಿರಲಿಲ್ಲ. ಹೀಗಾಗಿ ದ್ವೇಷ ರಾಜಕಾರಣ ಮಾಡುತ್ತಾ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಕೋಮುವಾದಿ ಬಿಜೆಪಿ ಪಕ್ಷಕ್ಕೆ ಮತ ಹಾಕಬಾರದು ಎಂಬ ಸಂದೇಶವನ್ನು ಸಮಾನ ಮನಸ್ಕರಾದ ನಾವುಗಳು ಜನರಿಗೆ ತಿಳಿಸಬೇಕಿದೆ” ಎಂದು ಹೇಳಿದರು.
ಸರ್ವಾಧಿಕಾರಿ ಧೋರಣೆ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ, ಸಾಹಿತಿ ಚಂದ್ರಶೇಖರ್ ತಾಳ್ಯ ಮಾತನಾಡಿ, “ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನ ನೀಡಿದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಬದಲಾಗಿ 23 ಸಾರ್ವಜನಿಕ ಉದ್ಯಮಗಳನ್ನು ನಾಶಪಡಿಸಿ, ಖಾಸಗಿಯವರಿಗೆ ಮಾರಾಟ ಮಾಡಿದೆ. ಇಂತಹ ಸರ್ವಾಧಿಕಾರಿ ಧೋರಣೆಯ ಸರ್ಕಾರವನ್ನು ತೊಲಗಿಸಬೇಕಿದೆ. ಮತ ಎನ್ನುವಂತಹದ್ದು ಪರಮ ಪೂಜ್ಯವಾದುದು. ಅದನ್ನು ಮಾರಾಟ ಮಾಡಿಕೊಳ್ಳಬೇಡಿ. ನಿಮ್ಮ ಹಕ್ಕನ್ನು ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಲು ಚಲಾಯಿಸಿ” ಎಂದು ಮನವಿ ಮಾಡಿದರು.
ಇದನ್ನೂ ಓದಿ: Karnataka Election : ಬಿಜೆಪಿಯವರು ಕರೆದಿಲ್ಲ, ಕರೆದಿದ್ದರೆ ಅವರ ಪ್ರಚಾರಕ್ಕೂ ಹೋಗ್ತಿದ್ದೆ ಎಂದ ಶಿವಣ್ಣ
ಸಮಾನ ಮನಸ್ಕರ ಒಕ್ಕೂಟ ಕರ್ನಾಟಕ ಸಂಘಟನೆ ಸಂಚಾಲಕರಾದ ರುದ್ರಪ್ಪ ಹನಗವಾಡಿ, ಜಾಣಗೆರೆ ವೆಂಕಟರಾಮಯ್ಯ, ಪ್ರೊ.ಎಲ್.ಎನ್.ಮುಕುಂದರಾಜ್, ಪ್ರೊ.ಎ.ಬಿ.ರಾಮಚಂದ್ರಪ್ಪ ಮಾತನಾಡಿದರು. ಡಿಎಸ್‌ಎಸ್ ರಾಜ್ಯ ಸಂಚಾಲಕ ಪಾಂಡುರಂಗ ಸ್ವಾಮಿ, ಕಾಂಗ್ರೆಸ್ ಮುಖಂಡರಾದ ಸುರೇಶ್ ಪಾಡಿಗಟ್ಟೆ, ಎ.ಚಿತ್ತಪ್ಪ ಯಾದವ್, ತಿಪ್ಪೇಸ್ವಾಮಿ, ಪ್ರಸನ್ನಕುಮಾರ್ ಇತರರು ಇದ್ದರು.