Site icon Vistara News

Karnataka Election: ಜನರಿಗಾಗಿ ಬದುಕಿದ್ದೇನೆ, ಮೋಸ ಮಾಡುವ ಅವಶ್ಯಕತೆಯಿಲ್ಲ: ಸಚಿವ ಶಿವರಾಮ್‌ ಹೆಬ್ಬಾರ್‌

ಯಲ್ಲಾಪುರದಲ್ಲಿ ಶಿವರಾಮ್‌ ಹೆಬ್ಬಾರ್‌ ಅವರಿಂದ ಪ್ರಚಾರ

ಯಲ್ಲಾಪುರ: “ನಾನು ರಾಜಕೀಯಕ್ಕೆ ಬಂದು 40 ವರ್ಷಗಳೇ ಕಳೆದಿವೆ. ಯಲ್ಲಾಪುರದ ಜನರೊಂದಿಗೆ ಬೆರೆತು ಸಾಗಬೇಕಿದೆ. ಹೀಗಿರುವಾಗ ಸುಳ್ಳು ಹೇಳಿ, ಜನರಿಗೆ ಮೋಸ ಮಾಡುವ ಅವಶ್ಯಕತೆ ನನಗಿಲ್ಲ. ಕ್ಷೇತ್ರದಲ್ಲಿ ಏನೇ ಮಾಡಿದ್ದರೂ ಜನರಿಗಾಗಿ, ಅವರ ಬದುಕನ್ನು ಸುಧಾರಿಸಲು ಮಾಡಿದ್ದೇನೆ” ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ (Karnataka Election) ಹೇಳಿದರು.

ಪಟ್ಟಣದ ಮಂಜುನಾಥ ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ನನ್ನ ಬಗ್ಗೆ ಹೇಳಿಕೊಳ್ಳುವ ಅಗತ್ಯವಿಲ್ಲ. ನನ್ನ ರಾಜಕೀಯ ವೃತ್ತಿಯ ಆರಂಭದಿಂದ ಯಲ್ಲಾಪುರದ ಜನತೆ ನೋಡಿದ್ದಾರೆ. 10 ವರ್ಷದಲ್ಲಿ 3 ಬಾರಿ ಕ್ಷೇತ್ರದ ಶಾಸಕರನ್ನಾಗಿಸಿ, ಮತದಾರರು ನನ್ನನ್ನು ಬೆಂಬಲಿಸಿದ್ದಾರೆ. ಸ್ಪಷ್ಟ ಬಹುಮತದಲ್ಲಿ ಬಿಜೆಪಿ ಈ ಬಾರಿ ಸರ್ಕಾರವನ್ನು ರಚಿಸುವ ಹುಮ್ಮಸ್ಸಿನಲ್ಲಿದೆ. ಚುನಾವಣೆ ಎಂಬುದು ಕೇವಲ ಒಂದೆರಡು ತಿಂಗಳುಗಳ ತಯಾರಿಯಲ್ಲ. ಇದಕ್ಕಾಗಿ ಕಳೆದ ಐದಾರು ತಿಂಗಳುಗಳಿಂದ ಕ್ಷೇತ್ರದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟು ಚುನಾವಣೆಗೆ ತಯಾರಿ ಮಾಡಿದ್ದೇವೆ” ಎಂದು ತಿಳಿಸಿದರು.

“ಅಧಿಕಾರ ಇರಲಿ, ಇಲ್ಲದಿರಲಿ. ನಾನು ಯಲ್ಲಾಪುರದಲ್ಲಿಯೇ ಇರಬೇಕಿದೆ. ಸುಳ್ಳು ಹೇಳಿ ಜೀವನ ಸಾಗಿಸುವ ಅಗತ್ಯತೆ ನನಗಿಲ್ಲ. ಹೀಗಾಗಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ಅರಿತು ಕೆಲಸ ಮಾಡಿದ್ದೇನೆ. 40 ವರ್ಷ ರಾಜಕಾರಣದಲ್ಲಿ ಕೆಲಸ ಮಾಡಿದ್ದೇನೆ. 30 ವರ್ಷ ವಯಸ್ಸಾಗದ ಕೆಲವರು ಮನಸ್ಸಿಗೆ ಬಂದ ಸುಳ್ಳನ್ನು ಹೇಳಿ ಬಡವರ ನೆಮ್ಮದಿಯನ್ನು ಕೆಡಿಸಿದ್ದಾರೆ. ಶಾಸಕನಾಗಿ, ಸಚಿವನಾಗಿ ಕ್ಷೇತ್ರದ ಜನರ ಒಳಿತಿಗಾಗಿಯೇ ಕೆಲಸ ಮಾಡಿದ್ದು, ಯಾರೂ ಸಹ ಹೆದರುವ ಅವಶ್ಯಕತೆಯಿಲ್ಲ” ಎಂದರು.

ಗೋವಾ ರಾಜ್ಯದ ಸಚಿವ ಸುಭಾಷ್ ಪಾಲ್ ದೇಸಾಯಿ ಮಾತನಾಡಿ, “ಹೆಬ್ಬಾರ್‌ ಅವರಿಗೆ ದೊರೆತ 3 ವರ್ಷಗಳ ಮಂತ್ರಿಯಾಗುವ ಕಾರ್ಯಾವಧಿಯಲ್ಲಿ 2 ವರ್ಷ ಕೋವಿಡ್‌ ನಿರ್ವಹಣೆಯಲ್ಲಿಯೇ ಕಳೆದು ಹೋಗಿದೆ. ಆದರೂ ಸಹ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಯಾವುದೇ ಚುನಾವಣೆಗಳಿಲ್ಲದಿದ್ದರೂ, ಬಡವರಿಗಾಗಿ ಆಹಾರದ ಕಿಟ್‌ಗಳನ್ನು ಸ್ವಇಚ್ಛೆಯಿಂದ ವಿತರಿಸಿದ್ದಾರೆ. ಇವೆಲ್ಲವುಗಳ ಬಗ್ಗೆ ಜನರು ಅರಿತಿದ್ದಾರೆ. ಹೆಬ್ಬಾರ್‌ ಅವರನ್ನು ಈ ಬಾರಿಯೂ ಬೆಂಬಲಿಸಲಿದ್ದಾರೆ ಎಂದರು.

ಇದನ್ನೂ ಓದಿ: Karnataka Election 2023: ಪ್ರಿಯಾಂಕ್‌ ಖರ್ಗೆಯನ್ನು ಜಿರಳೆ ಎಂದ ಈಶ್ವರಪ್ಪ; ರಾಜ್ಯ ಜನರ ಕ್ಷಮೆ ಕೇಳಲು ಆಗ್ರಹ

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್‌, ಪ.ಪಂ. ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್‌, ಸದಸ್ಯ ಸತೀಶ ನಾಯ್ಕ, ಪ್ರಮುಖರಾದ ಶಿರೀಶ್‌ ಪ್ರಭು, ಮತ್ತಿತರರಿದ್ದರು.

Exit mobile version