ಕಾರವಾರ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ (Karnataka Election) ಮತದಾನ ಇಂದು (ಬುಧವಾರ) ಎಲ್ಲೆಡೆ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ವಿಶೇಷತೆಗಳೂ ಕಂಡುಬಂದಿವೆ. ಕೆಲವರು ದೂರದ ಅಮೆರಿಕದಿಂದ ತಾಯ್ನಾಡಿಗೆ ವಾಪಸಾಗಿ ಮತದಾನ ಮಾಡಿ ತಮ್ಮ ಕರ್ತವ್ಯ ನಿರ್ವಹಿಸಿದ್ದರೆ, ಜಿಲ್ಲಾಡಳಿತವು ಮೊದಲ ಬಾರಿಗೆ ಮತದಾನ ಮಾಡಿದ ಯುವಕರಿಗೆ ವಿಶೇಷ ಉಡುಗೊರಗಳನ್ನು ನೀಡಿ ಪ್ರೋತ್ಸಾಹಿಸಿದೆ.
ಕಾರವಾರದಲ್ಲಿ ಇದೇ ಮೊದಲ ಬಾರಿಗೆ ಮತದಾನ ಮಾಡಿದ ಯುವ ಮತದಾರರಿಗೆ ಕಾರವಾರದ ಮತಗಟ್ಟೆಯಲ್ಲಿ ಗಿಡಗಳನ್ನು ನೀಡುವ ಮೂಲಕ ಪ್ರೋತ್ಸಾಹ ನೀಡಲಾಯಿತು. ನಗರದ ಸೈಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ತೆರೆಯಲಾದ ಮೂರು ಮತಗಟ್ಟೆಗಳಲ್ಲಿ ಬೆಳಗ್ಗೆಯೇ ಆಗಮಿಸಿದ ಐದಕ್ಕೂ ಅಧಿಕ ಯುವ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಬಳಿಕ ಮತದಾನ ಮಾಡಿದ ಯುವ ಮತದಾರರಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ನಗರಸಭೆ ಆಯುಕ್ತ ಜುಬಿನ್ ಮಹಾಪಾತ್ರ ಹಾಗೂ ಮತಗಟ್ಟೆ ಅಧಿಕಾರಿಗಳು ಹೂವು- ಹಣ್ಣುಗಳ ಗಿಡಗಳನ್ನು ನೀಡಿ ಅಭಿನಂದಿಸಿದರು. ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತ ಹಾಕುವ 50 ಯುವಕ- ಯುವತಿಯರಿಗೆ ಗಿಡಗಳನ್ನು ನೀಡಿ ಅಭಿನಂದಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: Karnataka election 2023: ರಾಜ್ಯದ ಏಕೈಕ ಮಂಗಳಮುಖಿ ಅಭ್ಯರ್ಥಿ ಕಂಪ್ಲಿ ಕ್ಷೇತ್ರದ ಟಿ.ರಾಮಕ್ಕ ಮತ ಚಲಾವಣೆ
ಇನ್ನು ಮೊದಲ ಬಾರಿ ಮತದಾನ ಮಾಡಿ ಮಾತನಾಡಿದ ಯುವತಿ ಪೂಜಾ ಭಂಡಾರಿ, “ಮೊದಲ ಬಾರಿಗೆ ಮತದಾನ ಮಾಡುವಾಗ ಭಯಕ್ಕಿಂತ ಕುತೂಹಲವೇ ಜಾಸ್ತಿಯಿತ್ತು. ತಂದೆಯವರು ಮತದಾನದ ಬಗ್ಗೆ ತಿಳಿಸಿದ್ದರು. ಸ್ನೇಹಿತರಿಗೂ ಕೂಡ ಈ ಬಾರಿ ಮತದಾನಕ್ಕೆ ಅವಕಾಶ ಸಿಕ್ಕಿದ್ದರಿಂದ ಎಲ್ಲರೂ ಸೇರಿ ಮತದಾನ ಮಾಡುವ ಕುರಿತು ಮಾತನಾಡಿಕೊಂಡಿದ್ದೆವು. ಅದರಂತೆ ಖುಷಿಯಿಂದಲೇ ಮತದಾನ ಮಾಡಿದ್ದೇನೆ. ಎಲ್ಲರೂ ಕೂಡ ಮತದಾನ ಮಾಡಬೇಕು. ನಾವು ಮತದಾನ ಮಾಡಿರುವುದಕ್ಕೆ ಹೂವಿನ ಗಿಡಗಳನ್ನು ಕೂಡ ನೀಡಿ ಅಭಿನಂದಿಸಿದ್ದಾರೆ. ಇದರಿಂದ ತುಂಬಾ ಖುಷಿ ನೀಡಿದೆ” ಎಂದು ಅಭಿಪ್ರಾಯ ಹಂಚಿಕೊಂಡರು.
ಇನ್ನೊಬ್ಬ ಯುವ ಮತದಾರ ಯುವತಿ, ಎಲಿಷಾ ಗೋನ್ಸಾಲಿಸ್ ಮಾತನಾಡಿ, “ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದೇನೆ. ತುಂಬಾ ಖುಷಿಯಾಗಿದೆ. ಇದರಿಂದ ಹೆಮ್ಮೆ ಕೂಡ ಇದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಮತದಾನ ಮಾಡಿದ್ದು, ನಾವೆಲ್ಲರೂ ಭಾರತೀಯರಾಗಿ ತಪ್ಪದೇ ಮತದಾನ ಮಾಡಬೇಕು” ಎಂದು ಹೇಳಿದರು.
ಅಮೆರಿಕದಿಂದ ಬಂದು ಮತ ಚಲಾವಣೆ
ಇನ್ನೂ ವಿಶೇಷವೆಂಬಂತೆ ಶಿರಸಿಯಲ್ಲಿ ಮಹಿಳೆಯೊಬ್ಬರು ಮತದಾನ ಮಾಡುವುದಕ್ಕೆಂದೇ ದೂರದ ಅಮೆರಿಕದಿಂದ ತಾಯ್ನಾಡಿಗೆ ಮರಳಿ ಮತದಾನ ಮಾಡಿದ್ದಾರೆ. ಶಿರಸಿ ತಾಲೂಕಿನ ಬೆಟ್ಟಕೊಪ್ಪದ ಅಶ್ವಿನಿ ರಾಜಶೇಖರ ಭಟ್ಟ ಅವರು ಅಮೆರಿಕದಿಂದ ಬಂದಿದ್ದು ಕಾನಗೋಡ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಇದು ಅನೇಕರಿಗೆ ಸ್ಫೂರ್ತಿಯಾಗಿದೆ.